

ಲಖನೌ: ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ನಾಯಕರೊಬ್ಬರನ್ನು ಅವರ ಮನೆಗೇ ನುಗ್ಗಿ ಗುಂಡಿಟ್ಟು ಕೊಲೆಗೈದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಅಮ್ರೋಹಾ ಜಿಲ್ಲೆಯ ಟಿಗಾರಿಯಾ ಭುಡ್ ನಲ್ಲಿರುವ ಬಿಎಸ್ ಪಿ ಮುಖಂಡ ಕೈಲಾಶ್ ಚಂದ್ರ ಥೆಕೆದಾರ್ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ ಕೈಲಾಶ್ ಅವರು ಕುಟುಂಬದಿಂದ ಬೇರ್ಪಟ್ಟು ಏಕಾಂಗಿಯಾಗಿ ಜೀವಿಸುತ್ತಿದ್ದು, ಅವರ ಮನೆಕೆಲಸದಾಳು ಅವರ ರೂಮಿಗೆ ಬಂದು ನೋಡಿದಾಗ ಅವರು ಗುಂಡೇಟಿನಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ತಿಳಿದುಬಂದಿದೆ.
ಪ್ರಸ್ತುತ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಕೈಲಾಶ್ ಅವರು ನಿದ್ರಿಸುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಬಿಎಸ್ ಪಿ ಪಕ್ಷ ಸೇರಿದ್ದ ಕೈಲಾಶ್ , ಈ ಹಿಂದೆ ಸಮಾಜವಾದಿ ಪಕ್ಷದ ಪರವಾಗಿ ನಗರ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.