

ಲಖನೌ: 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಕೇಂದ್ರ ಸಚಿವೆ ಉಮಾಭಾರತಿ ಹಾಗೂ ಮುರಳಿ ಮನೋಹರ ಜೋಷಿ ಸೇರಿದಂತೆ ಪ್ರಮುಖ ನಾಯಕರ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಚಾರ್ಜ್ ಶೀಟ್ ದಾಖಲು ಮಾಡಿಕೊಳ್ಳಲಿದೆ.
ಪ್ರಕರಣದಲ್ಲಿ ಪ್ರಮುಖರಾಗಿರುವ ಕೇಂದ್ರ ಸಚಿವೆ ಉಮಾಭಾರತಿ , ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ, ಮುರಳೀ ಮನೋಹರ್ ಜೋಶಿ ಮೊದಲ ಬಾರಿ ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಲಕ್ನೋದ ಸಿಬಿಐ ನ್ಯಾಯಾಲಯದ ಮುಂದೆ ಹಾಜರಾದರು. ಸಿಬಿಐ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್ ಕೆ ಯಾದವ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆ ನೀಡುವಂತೆ ನಾಯಕರನ್ನು ಕೇಳಿದರು.
ಅಂತೆಯೇ ಖುದ್ಧು ಹಾಜರಾತಿ ಹೊರತಾಗಿ ಆರೋಪಿಗಳ ಕುರಿತಾದ ಯಾವುದೇ ರೀತಿಯ ಮನವಿ ಮತ್ತು ಅರ್ಜಿಗಳನ್ನು ಸ್ಪೀಕರಿಸುವುದಿಲ್ಲ ಎಂದು ನ್ಯಾಯಮೂರ್ತಿ ಎಸ್ ಕೆ ಯಾದವ್ ಸ್ಪಷ್ಟಪಡಿಸಿದರು.
ಇನ್ನು ಬಾಬ್ರಿ ಮಸೀದಿ ಧ್ವಂಸ ಮತ್ತು ಮಸೀದಿ ಧ್ವಂಸ ಮಾಡಲು ಕರಸೇವಕರಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಡ್ವಾಣಿ, ಜೋಶಿ, ಉಮಾಭಾರತಿ ಮತ್ತಿತರ ನಾಯಕರು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದು, ಎಲ್ಲ ನಾಯಕರು ಇಂದಿನ ವಿಚಾರಣೆಗೆ ಹಾಜರಾಗಿದ್ದಾರೆ. ಅಂತೆಯೇ ಸಿಬಿಐ ಕೋರ್ಟ್ ಇಂದು ಎಲ್ಲ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ತಯಾರಿಸಲಿದೆ.