ಜೈಪುರ: ಮದುವೆಗೆ ನಿರಾಕರಿಸಿದ 18 ವರ್ಷದ ಯುವತಿಯೊಬ್ಬಳ ಮೇಲೆ ಕೆಂಡಾಮಂಡಲಗೊಂಡಿರುವ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ರಾಜಸ್ತಾನ ರಾಜ್ಯದ ಬನ್ಸ್ವಾರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಸೀಮಾ (18) ದುಷ್ಕರ್ಮಿಗಳ ದಾಳಿಗೊಳಗಾದ ಯುವತಿಯಾಗಿದ್ದಾಳೆ. ಸೀಮಾಳ ಮನೆಗೆ ಬಂದಿರುವ ಯುವಕ ರವಿ ಹಾಗೂ ಆತನ ತಂದೆ ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದಾರೆ. ಈ ವೇಳೆ ಯುವತಿ ಮದುವೆಯಾಗೆ ನಿರಾಕರಿಸಿದ್ದಾಳೆ.
ಈ ವೇಳೆ ಯುವತಿಯ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಇಬ್ಬರು ಆಕೆಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಯುವತಿಯ ದೇಹದ ಮೇಲೆ ಶೇ.75ರಷ್ಟು ಸುಟ್ಟ ಗಾಯಗಳಾಗಿದ್ದು, ಬನ್ಸ್ವಾರದಲ್ಲಿರುವ ಎಂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯುವತಿಯ ತಂದೆ, ಮಗಳಿಗೆ ರವಿ ಎಂಬ ಯುವಕ ಕಿರುಕುಳ ನೀಡುತ್ತಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದೆವು. ಆದರೆ, ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.