ಮುಂಬೈ: ಸಕಲ ಸರ್ಕಾರಿ ಗೌರವಗಳೊಂದಿಗೆ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಈಗಾಗಲೇ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟಿರುವ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ಗೆ ಮುಂಬೈ ಪೊಲೀಸ್ ಬ್ಯಾಂಡ್ ಆಗಮಿಸಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಅಂತಿಮ ಮೆರವಣಿಗೆ ಸಾಗಲಿದೆ. ಮಧ್ಯಾಹ್ನ 2 ಗಂಟೆಗೆ ಶ್ರೀದೇವಿ ಅವರ ಪಾರ್ಥೀವ ಶರೀರದ ಅಂತಿಮ ಮೆರವಣಿಗೆ ಚಿತಾಗಾರದತ್ತ ಸಾಗಲಿದ್ದು, ವಿಲೆ ಪಾರ್ಲೆ ಸೇವಾಸಮಾಜದಲ್ಲಿ ಅಂತ್ಯಕ್ರಿಯೆ ಸಂಜೆ 3.30ರಿಂದ ಪ್ರಾರಂಭವಾಗಲಿದೆ.
ಈ ವೇಳೆ ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನವಿ, ಮಲಮಗ ಅರ್ಜುುನ್ ಕಪೂರ್, ಸ್ಥಳದಲ್ಲಿರಲಿದ್ದು, ಅಂತಿಮ ಕಾರ್ಯದಲ್ಲಿ ತೊಡಗಲಿದ್ದಾರೆ.
ಇನ್ನು ಅಂತಿಮ ವಿಧಿವಿಧಾನ ನೆರವೇರುವ ವಿಲೆ ಪಾರ್ಲೆ ಸೇವಾಸಮಾಜದಲ್ಲಿ ಅಂತ್ಯಕ್ರಿಯೆ ಸಕಲ ಸಿದ್ಧತೆ ಪೂರ್ಣಗೊಳಿಸಿಕೊಳ್ಳಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ಜಮಾವಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶ್ರೀದೇವಿ ಅವರ ಅಂತಿಮ ವಿಧಿವಿಧಾನ ನೆರವೇರುವ ಜಾಗದಲ್ಲಿ ಅಭಿಮಾನಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.