ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ಸಂಸ್ಥಾಪಕ ಕೆಬಿ ಹೆಡಗೇವಾರ್ ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ಮಾಜಿ ರಾಷ್ಟ್ರಪತಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರು ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿರುವ ವೀಕ್ಷಕರ ಪುಸ್ತಕದಲ್ಲಿ ಬರೆದಿದ್ದಾರೆ.
ಪ್ರಣಬ್ ಮುಖರ್ಜಿ ಅವರು ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವುದಕ್ಕಾಗಿ ಇಂದು ಮಹಾರಾಷ್ಟ್ರದ ನಾಗ್ಪುರಕ್ಕೆ ಆಗಮಿಸಿದ್ದು, ಅವರನ್ನು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ಕಚೇರಿಯಲ್ಲಿದ್ದ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿದ ಪ್ರಣಬ್ ಮುಖರ್ಜಿ ಅವರು ಹೆಡಗೇವಾರ್ ಗೆ ವಿಶೇಷ ಗೌರವ ಸಲ್ಲಿಸಿದರು.
ಭಾರತ ಮಾತೆಯ ಹೆಮ್ಮೆಯ ಪುತ್ರ, ಕೆ.ಬಿ. ಹೆಡಗೇವಾರ್ ಜನ್ಮಸ್ಥಳಕ್ಕೆ ಆಗಮಿಸಿದ್ದೇನೆ. ಈ ಧೀಮಂತ ನಾಯಕನಿಗೆ ಗೌರವ ಸಲ್ಲಿಸಲು ಇಲ್ಲಿಗೆ ಆಗಮಿಸಿದ್ದೇನೆ ಎಂದು ಪ್ರಣಬ್ ಮುಖರ್ಜಿ ವೀಕ್ಷಕರ ಹಾಜರಿ ಪುಸ್ತಕದಲ್ಲಿ ಬರೆದು ತಮ್ಮ ಸಹಿ ಹಾಕಿದ್ದಾರೆ.
ಪ್ರಣಬ್ ಮುಖರ್ಜಿ ಅವರು ಆರ್ಎಸ್ಎಸ್ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದು, ತೀವ್ರ ವಿರೋಧ ಹಾಗೂ ಚರ್ಚೆಗೆ ಕಾರಣವಾಗಿದೆ.