

ನವದೆಹಲಿ: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ(ಸಿಪಿಇಸಿ)ಯಡಿ ಪಾಕ್ ಆಕ್ರಮಿಕ ಕಾಶ್ಮೀರ ಮೂಲಕ ಚೀನಾ-ಪಾಕಿಸ್ತಾನ ದೇಶಗಳ ನಡುವಣ ಉದ್ದೇಶಿತ ಬಸ್ ಸಂಚಾರ ಸೇವೆಗೆ ಭಾರತ ವಿರೋಧ ವ್ಯಕ್ತಪಡಿಸಿದೆ.
ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಈ ಬಸ್ ಸೇವೆ ಉಲ್ಲಂಘಿಸುತ್ತದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಪಾಕಿಸ್ತಾನದ ಲಾಹೋರ್ ನಿಂದ ಚೀನಾದ ಕಷ್ಗರ್ ನಡುವೆ ಬಸ್ ಸಂಚಾರ ಸೇವೆ ಇದೇ ತಿಂಗಳ 13ರಂದು ಆರಂಭವಾಗಲಿದೆ.
1963ರಲ್ಲಿ ಮಾಡಿಕೊಂಡಿದ್ದ ಚೀನಾ-ಪಾಕಿಸ್ತಾನ ಗಡಿ ಒಪ್ಪಂದ ಅಕ್ರಮ, ಕಾನೂನು ಬಾಹಿರವಾಗಿದ್ದು ಅದಕ್ಕೆ ಮೌಲ್ಯವಿಲ್ಲವಾಗಿದೆ. ಅದನ್ನು ಭಾರತ ಸರ್ಕಾರ ಎಂದಿಗೂ ಗುರುತಿಸಲಿಲ್ಲ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಯಾವುದೇ ಬಸ್ ಸೇವೆ ಭಾರತದ ಸ್ವಾಯತ್ತತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯನ್ನುಂಟುಮಾಡುತ್ತದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.
ಚೀನಾ ಮತ್ತು ಪಾಕಿಸ್ತಾನ ನಡುವೆ ಬಸ್ 50 ಶತಕೋಟಿ ಡಾಲರ್ ವೆಚ್ಚದ ಆರ್ಥಿಕ ಕಾರಿಡಾರ್ ಯೋಜನೆಯನ್ನು 2015ರಲ್ಲಿ ಆರಂಭಿಸಲಾಗಿತ್ತು. ಅದು ಚೀನಾದ ಸಂಪದ್ಭರಿತ ಕ್ಸಿನ್ಜಿಯಾಂಗ್ ಉಯ್ಘರ್ ಸ್ವಾಯತ್ತ ಪ್ರದೇಶವನ್ನು ಪಾಕಿಸ್ತಾನದ ಅರೆಬಿಕ್ ಸಮುದ್ರದ ಮೇಲೆ ಕಾರ್ಯತಂತ್ರದ ಗ್ವಾದರ್ ಬಂದರನ್ನು ಸಂಪರ್ಕಿಸುವ ರಸ್ತೆ, ರೈಲ್ವೆ ಮತ್ತು ಇಂಧನ ಯೋಜನೆಗಳಾಗಿವೆ.