ಪಣಜಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯದ ಜನರು ಪ್ರತಿಭಟನೆ ಆರಂಭಿಸಿದ್ದು, ಸಿಎಂ ರಾಜೀನಾಮೆ ಪಡೆಯದ ರಾಜ್ಯಪಾಲೆ ಮೃದುಲ ಸಿನ್ಹಾ ಅವರ ವಿರುದ್ಧ ಹೋರಾಟ ತೀವ್ರಗೊಳಿಸಲು ಶುಕ್ರವಾರ ನಿರ್ಧರಿಸಿದ್ದಾರೆ.
ಪರಿಕ್ಕರ್ ರಾಜೀನಾಮೆಗೆ ಒತ್ತಾಯಿಸಿ ನೂರಾರು ಗೋವಾ ನಾಗರಿಕರು ಕಳೆದ ಬುಧವಾರ ಸಿಎಂ ನಿವಾಸದವರೆಗ ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಈಗ ಮತ್ತೆ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್, ಶಿವಸೇನಾ ಹಾಗೂ ಎನ್ ಸಿಪಿ ಬೆಂಬಲ ಘೋಷಿಸಿವೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸಿಎಂ ಪರಿಕ್ಕರ್ ಅವರು ಕಳೆದ 9 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲ ಮಧ್ಯ ಪ್ರವೇಶಿಸಬೇಕಾದ ರಾಜ್ಯಪಾಲರು ಮುಖ ಪ್ರೇಕ್ಷಕನಂತೆ ವರ್ತಿಸುತ್ತಿದ್ದಾರೆ ಎಂದು ನಾಗರಿಕ ಆಂದೋಲನದ ಮುಖಂಡ ಐರೀಸ್ ರೋಡ್ರಿಗಸ್ ಅವರು ಹೇಳಿದ್ದಾರೆ.
ನಾಳೆಯಿಂದ ಪರಿಕ್ಕರ್ ಹಾಗೂ ರಾಜ್ಯಪಾಲರ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ರೋಡ್ರಿಗಸ್ ಅವರು ತಿಳಿಸಿದ್ದಾರೆ.
ಈ ಮಧ್ಯೆ, ಮುಖ್ಯಮಂತ್ರಿ ಪರಿಕ್ಕರ್ ರಾಜೀನಾಮೆಗೆ ಒತ್ತಾಯಿಸಿ ಆರ್ ಟಿಐ ಕಾರ್ಯಕರ್ತ ರಾಜನ್ ಘಾಟೆ ಅವರು ಕಳೆದ ಎಂಟು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.