ಮೊದಲು ಗಡಿ ಭಾಗದಲ್ಲಿ ಭಯೋತ್ಪಾದನೆ ನಿಲ್ಲಿಸಿ: ಇಮ್ರಾನ್ ಖಾನ್ ಶಾಂತಿ ಕರೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ
ಹಿಂದಿನದ್ದನ್ನು ಮರೆತು ಭಾರತ ಹಾಗೂ ಪಾಕಿಸ್ತಾನ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಮೊದಲು ಗಡಿ ಭಾಗದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಿ ಎಂದು ಹೇಳಿದೆ.
ನವದೆಹಲಿ: ಹಿಂದಿನದ್ದನ್ನು ಮರೆತು ಭಾರತ ಹಾಗೂ ಪಾಕಿಸ್ತಾನ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಮೊದಲು ಗಡಿ ಭಾಗದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಿ ಎಂದು ಹೇಳಿದೆ.
ಶಾಂತಿಯ ಬಗ್ಗೆ ಮಾತನಾಡುವುದಕ್ಕೂ ಮುನ್ನ ಪಾಕಿಸ್ತಾನದ ಪ್ರಧಾನಿ ಗಡಿ ಭಾಗದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸಲಿ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದೇ ವೇಳೆ ಸಿಖ್ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಪ್ರಧಾನಿ ರಾಜಕೀಯವಾಗಿ ಬಳಸಿಕೊಂಡಿರುವುದು ವಿಷಾದನೀಯ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ತನ್ನ ನೆಲದಲ್ಲಿ ಹುಟ್ಟಿಕೊಂಡಿರುವ ಭಯೋತ್ಪಾದನೆಯನ್ನು ನಿಯಂತ್ರಿಸುವುದಕ್ಕೆ ಆಗುತ್ತಿಲ್ಲ. ಭಯೋತ್ಪಾದನೆ ವಿಚಾರವಾಗಿ ವಿಫಲವಾಗಿರುವ ಕಾರಣಕ್ಕಾಗಿ ಅಮೆರಿಕ-ಪಾಕಿಸ್ತಾನದ ನಡುವಿನ ಸಂಬಂಧವೂ ಹಾಳಾಗಿದೆ. ಕರ್ತಾರ್ ಪುರ ಕಾರಿಡಾರ್ ವಿಷಯವನ್ನು ಪ್ರತ್ಯೇಕವಾಗಿ ನೋಡಬೇಕು ಹಾಗೂ ಭಯೋತ್ಪಾದನೆ ನಡೆಯುತ್ತಿರುವಾಗಲೇ ದ್ವಿಪಕ್ಷೀಯ ಮಾತುಕತೆ ನಡೆಸುವುದು ಅಸಾಧ್ಯ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.