ಮುಂಬೈ: ದಸರಾ ಹಬ್ಬದ ಬಳಿಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಉತ್ತರಪ್ರದೇಶದ ಅಯೋಧ್ಯೆಗೆ ಭೇಟಿ ನೀಡುತ್ತಾರೆಂದು ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್ ಅವರು ಗುರುವಾರ ಹೇಳಿದ್ದಾರೆ.
ರಾಮ ಮಂದಿರ ವಿವಾದ ಕುರಿತಂತೆ ಬಿಜೆಪಿ ವಿರುದ್ಧ ಟೀಕೆ ಮಾಡಿ ಮಾತನಾಡಿರುವ ಅವರು, ಪಕ್ಷದ ವಾರ್ಷಿಕ ದಸರಾ ರ್ಯಾಲಿ ಮುಂಬೈನಲ್ಲಿ ಅಕ್ಟೋಬರ್ 19 ರಂದು ನಡೆಯಲಿದೆ. ರ್ಯಾಲಿ ಬಳಿಕ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುವ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆಂದು ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರ ವಿವಾದ ಸಂಬಂಧ ಶಿವಸೇನೆ ಯಾವಾಗಲೂ ಜಯವನ್ನೇ ಸಾಧಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದು 4 ವರ್ಷವಾದರೂ ರಾಮ ಮಂದಿನ ನಿರ್ಮಾಣ ಕುರಿತ ತನ್ನ ಧ್ಯೇಯವನ್ನು ಹಾಗೂ ಭರವಸೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.
ಶರಣ್ ಜೀ ಮಹಾರಾಜ್ ಅವರು ಅಯೋಧ್ಯೆಗೆ ಬರುವಂತೆ ಠಾಕ್ರೆಯವರಿಗೆ ಆಹ್ವಾನ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಸೇನೆಯ ನೆರವಿನ ಅಗತ್ಯವಿಗೆ ಎಂದು ಅವರು ತಿಳಿಸಿದ್ದಾರೆ.
ಬಳಿಕ ಮಾತನಾಡಿರುವ ಅರವಿಂದ ಸಾವಂತ್ ಅವರು, 2014 ಲೋಕಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಎನ್'ಡಿಎ ಸರ್ಕಾರ ಜನರಿಗೆ ಮೂರು ಭರವಸೆಗಳನ್ನು ನೀಡಿತ್ತು. ಸಂವಿಧಾನದ 370ನೇ ವಿಧಿಯನ್ನು ತೆಗೆದು ಹಾಕುವುದಾಗಿ, ರಾಮ ಮಂದಿನ ನಿರ್ಮಾಣ ಹಾಗೂ ಕಾಶ್ಮೀರ ವಿವಾದ ಬಗೆಹರಿಸುವುದಾಗಿ ತಿಳಿಸಿತ್ತು.
ಈ ಹಿಂದೆ ನಾವು ಎಂದೂ ಮಾತನಾಡದ್ದನ್ನು ನಾವಿಂದು ಮಾಡುತ್ತಿದ್ದೇವೆ. ಬಾಬ್ರಿ ಮಸೀದಿ ಧ್ವಂಸದ ಜವಾಬ್ದಾರಿಯನ್ನು ಯಾರೂ ತೆಗೆದುಕೊಂಡಿರಲಿಲ್ಲ. ಸೇನಾ ಸಂಸ್ಥಾಪಕ ಬಾಲಸಾಹೇಬ್ ಅವರು ಅದನ್ನು ಮಾಡಿದ್ದರು. ಇದೀಗ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷವಾದರೂ, ರಾಮ ಮಂದಿನ ನಿರ್ಮಾಣಗೊಳ್ಳಲು ಇನ್ನೂ ಆರಂಭವಾಗಿಲ್ಲ. ಈಗಲೂ ಈ ವಿವಾದ ನ್ಯಾಯಾಲಯದ ಅಂಗಳದಲ್ಲಿಯೇ ಇದೆ ಎಂದಿದ್ದಾರೆ.