

ವಿಜಯವಾಡ: ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು 22 ಮಂದಿ ಬುಕ್ಕಿಗಳು, ಉಪ ಬುಕ್ಕಿಗಳು ಹಾಗೂ ಪಂಟರ್ಸ್ ಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸಿ. ಹೆಚ್. ದ್ವಾರಕಾ ತಿರುಮಲ ರಾವ್ ತಿಳಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಖಚಿತ ಮಾಹಿತಿ ಪಡೆದು ಮನೆಯೊಂದರ ಮೇಲೆ ಸಹಾಯಕ ಆಯುಕ್ತ ಜಿ. ರಾಜೀವ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದ ವೇಳೆ ಮೂವರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಂಧಿತರನ್ನು ಬುರಿ ಸತ್ಯ ನಾರಾಯಣ, ವಾಸ ಕೊಂಡಲಾ ರಾವ್ ಮತ್ತು ಅಡಪ ವೆಂಕಟ ಕೃಷ್ಣ ರಾವ್ ಎಂದು ಹೇಳಲಾಗಿದೆ. ಸಪ್ಪಾ ರವಿಚಂದ್ರ ಬೆಟ್ಟಿಂಗ್ ದಂಧೆಯ ಕಿಂಗ್ ಪಿನ್ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಇತರ 13 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 22 ಮೊಬೈಲ್ ಪೋನ್, 7 ಲಕ್ಷ ಹಣ, ಹಾಗೂ ಒಂದು ಲ್ಯಾಪ್ ಟಾಪ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.