

ನವದೆಹಲಿ: ಭಾರತದಲ್ಲಿ ಇದೂವರೆಗೂ 3 ಕೋಟಿಗೂ ಹೆಚ್ಚು ಮಂದಿಯನ್ನು ಕೋವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ತಿಳಿಸಿದೆ.
ಐಸಿಎಂಆರ್ ಮಾಹಿತಿ ನೀಡಿರುವ ಪ್ರಕಾರ ಈ ವರೆಗೂ ಅಂದರೆ ಆಗಸ್ಟ್ 16 ರವರೆಗೂ 3,00,41,400 ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 7,31,697 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.
ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 57,982 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇನ್ನು ನಿನ್ನೆ ಒಂದೇ ದಿನ 941 ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆ ಇದರೊಂದಿಗೆ ದೇಶದಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 50 ಸಾವಿರ ಗಡಿ ದಾಟಿದೆ.
ಒಂದೇ ದಿನ 57,982 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 26,47,664ಕ್ಕೆ ಏರಿಕೆಯಾಗಿದೆ. 26,47,664 ಮಂದಿ ಸೋಂಕಿತರ ಪೈಕಿ 19,19,843 ಮಂದಿ ಗುಣಮುಖರಾಗಿದ್ದು, ದೇಶದಲ್ಲಿನ್ನೂ 6,76,900 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.