8 ಆಸನಗಳ ವಾಹನಗಳಲ್ಲಿ 6 ಏರ್ ಬ್ಯಾಗ್ ಗಳು ಕಡ್ಡಾಯ: ನಿತಿನ್ ಗಡ್ಕರಿ
8 ಆಸನಗಳನ್ನು ಹೊಂದಿರುವ ಎಲ್ಲಾ ಖಾಸಗಿ ವಾಹನಗಳೂ ಇನ್ನು ಮುಂದೆ 6 ಏರ್ ಬ್ಯಾಗ್ ಗಳನ್ನು ಹೊಂದಿರುವುದು ಕಡ್ಡಾಯವಾಗಿರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
Published: 15th January 2022 01:08 PM | Last Updated: 15th January 2022 01:08 PM | A+A A-

ಕೇಂದ್ರ ಸಚಿವ ನಿತಿನ್ ಗಡ್ಕರಿ
ನವದೆಹಲಿ: 8 ಆಸನಗಳನ್ನು ಹೊಂದಿರುವ ಎಲ್ಲಾ ಖಾಸಗಿ ವಾಹನಗಳೂ ಇನ್ನು ಮುಂದೆ 6 ಏರ್ ಬ್ಯಾಗ್ ಗಳನ್ನು ಹೊಂದಿರುವುದು ಕಡ್ಡಾಯವಾಗಿರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಸಂಬಂಧ ಗೆಝೆಟ್ ನೋಟಿಫಿಕೇಶನ್ ನ ಕರಡು ಪ್ರತಿಗೆ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನಡೆ ಸಹಕಾರಿಯಾಗಲಿದ್ದು, ಜೊತೆ ಜೊತೆಗೇ ವಾಹನಗಳ ಬೆಲೆಯಲ್ಲಿಯೂ ಏರಿಕೆಯಾಗುವ ಸಾಧ್ಯತೆ ಇದೆ.
ಎರಡೂ ಬದಿಗಳಲ್ಲಿ ಕರ್ಟನ್ ಏರ್ ಬ್ಯಾಗ್ ಗಳನ್ನು ಅಳವಡಿಸುವ ವಿಷಯ ಹಲವು ತಿಂಗಳುಗಳಿಂದ ಚರ್ಚೆಯಲ್ಲಿತ್ತು. ಇದಕ್ಕೂ ಮುನ್ನ 2019 ಹಾಗೂ 2022 ರಲ್ಲಿ ವಾಹನದ ಮುಂಭಾಗ (ಚಾಲಕನ ಆಸನ ಹಾಗೂ ಅದರ ಪಕ್ಕದಲ್ಲಿರುವ ಆಸನ)ದಲ್ಲಿ ಏರ್ ಬ್ಯಾಗ್ ಗಳನ್ನು ಕಡ್ಡಾಯಗೊಳಿಸಲಾಗಿತ್ತು. ಈಗ ಇನ್ನೂ ನಾಲ್ಕು ಏರ್ ಬ್ಯಾಗ್ ಗಳನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ವಾಹನದಲ್ಲಿ ಬಹುತೇಕ ಭಾಗಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದೆ" ಎಂದು ನಿತಿನ್ ಗಡ್ಕರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಾರೊಂದಕ್ಕೆ ಮುಂಭಾಗದ ಏರ್ ಬ್ಯಾಗ್ ನ್ನು ಅಳವಡಿಸುವುದಕ್ಕೆ 5,000-8,000 ರೂಪಾಯಿಗಳಷ್ಟು ಖರ್ಚಾಗುತ್ತದೆ. ಇನ್ನು ಎರಡೂ ಬದಿಗಳಲ್ಲಿ ಏರ್ ಬ್ಯಾಗ್ ಅಳವಡಿಕೆಗೆ ಇನ್ನೂ ಹೆಚ್ಚಿನ ವೆಚ್ಚವಾಗಲಿದೆ. ಒಟ್ಟಾರೆ 8 ಆಸನಗಳ ಖಾಸಗಿ ವಾಹನಕ್ಕೆ 6 ಏರ್ ಬ್ಯಾಗ್ ಗಳನ್ನು ಅಳವಡಿಸುವುದು ಕಡ್ಡಾಯವಾಗುವುದರಿಂದ ಸಣ್ಣ ಹಾಗೂ ಮಧ್ಯಮ ವಿಭಾಗದ ಕಾರುಗಳಲ್ಲಿ 30,000 ರಿಂದ 50,000 ವರೆಗೆ ಬೆಲೆ ಏರಿಕೆಯಾಗಬಹುದು