ಭಾರತದ ಧಾರ್ಮಿಕ ಸ್ವಾತಂತ್ರ್ಯ ಟೀಕಿಸಿದ್ದ ಅಮೇರಿಕಾ ವರದಿಯನ್ನು ತಿರಸ್ಕರಿಸಿದ ಕೇಂದ್ರ

ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಿಮರ್ಶೆ ಮಾಡಿದ್ದ ಅಮೇರಿಕಾದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಆ ವರದಿಯನ್ನು ಪ್ರೇರಿಪಿತ ಮತ್ತು "ಪಕ್ಷಪಾತ"ದ ವರದಿ ಎಂದು ಹೇಳಿದೆ.
ಭಾರತ-ಅಮೆರಿಕ ಧ್ವಜಗಳು
ಭಾರತ-ಅಮೆರಿಕ ಧ್ವಜಗಳು
Updated on

ನವದೆಹಲಿ: ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಿಮರ್ಶೆ ಮಾಡಿದ್ದ ಅಮೇರಿಕಾದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಆ ವರದಿಯನ್ನು ಪ್ರೇರಿಪಿತ ಮತ್ತು "ಪಕ್ಷಪಾತ"ದ ವರದಿ ಎಂದು ಹೇಳಿದೆ.

ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂದು ಅಮೇರಿಕಾ ತನ್ನ ವರದಿಯಲ್ಲಿ ಟೀಕಿಸಿತ್ತು. ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಗಾಚಿ ಈ ಬಗ್ಗೆ ಮಾತನಾಡಿದ್ದು, ಇಂತಹ ವರದಿಗಳು ತಪ್ಪು ಮಾಹಿತಿ ಹಾಗೂ ದೋಷಪೂರಿತ ತಿಳುವಳಿಕೆಗಳಿಂದ ಆಧರಿಸಲ್ಪಟ್ಟಿವೆ ಎಂದು ಹೇಳಿದ್ದಾರೆ.

ಅಮೇರಿಕ ಪ್ರಕಟಿಸಿರುವ ವಾರ್ಷಿಕ ವರದಿ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಆಪಾದಿತ ದಾಳಿಗಳನ್ನು ಪಟ್ಟಿ ಮಾಡಿದೆ ಮತ್ತು ಅಂತಹ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

"ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತ ಅಮೇರಿಕದ ಸ್ಟೇಟ್ ಡಿಪಾರ್ಟ್ಮೆಂಟ್ 2022 ರ ವರದಿಯ ಬಿಡುಗಡೆಯ ಬಗ್ಗೆ ನಮಗೆ ತಿಳಿದಿದೆ. ಅಂತಹ ವರದಿಗಳು ತಪ್ಪು ಮಾಹಿತಿ ಮತ್ತು ದೋಷಯುಕ್ತ ತಿಳುವಳಿಕೆಯನ್ನು ಆಧರಿಸಿರುವುದು ವಿಷಾದನೀಯ" ಎಂದು ಬಾಗ್ಚಿ ಹೇಳಿದರು.

ವರದಿ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಬಾಗ್ಚಿ ಪ್ರತಿಕ್ರಿಯಿಸಿ, "ಅಮೇರಿಕಾದ ಕೆಲವು ಅಧಿಕಾರಿಗಳ ಪ್ರೇರೇಪಿತ ಮತ್ತು ಪಕ್ಷಪಾತದ ವ್ಯಾಖ್ಯಾನ ಈ ವರದಿಗಳ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹಾಳುಮಾಡುತ್ತದೆ" ಎಂದು ಅವರು ಹೇಳಿದರು.

"ನಾವು ಅಮೇರಿಕಾ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ಗೌರವಿಸುತ್ತೇವೆ ಮತ್ತು ನಮಗೆ ಕಾಳಜಿ ಇರುವ ವಿಷಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ವಿನಿಮಯವನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳಿದರು. ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯನ್ನು ದಾಖಲಿಸುವ ವರದಿಯನ್ನು ಅಮೇರಿಕಾ ಸೋಮವಾರ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com