'ಅವಮಾನ'ವಾದರೆ ನಮ್ಮೊಂದಿಗೆ ಸೇರಿ, ನಿಮ್ಮನ್ನು ಖಂಡಿತ ಗೆಲ್ಲಿಸುತ್ತೇವೆ: ನಿತಿನ್ ಗಡ್ಕರಿಗೆ ಉದ್ಧವ್ ಠಾಕ್ರೆ

ನಿಮಗೆ 'ಅವಮಾನ'ವಾಗುತ್ತಿದ್ದರೆ ಬಿಜೆಪಿ ತೊರೆಯುವಂತೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಲಹೆ ನೀಡಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಪ್ರತಿಪಕ್ಷಗಳು ತಮ್ಮ ಗೆಲುವನ್ನು ಖಚಿತಪಡಿಸುತ್ತವೆ ಎಂದಿದ್ದಾರೆ.
ಉದ್ಧವ್ ಠಾಕ್ರೆ - ನಿತಿನ್ ಗಡ್ಕರಿ
ಉದ್ಧವ್ ಠಾಕ್ರೆ - ನಿತಿನ್ ಗಡ್ಕರಿ
Updated on: 

ಯವತ್ಮಾಲ್: ನಿಮಗೆ 'ಅವಮಾನ'ವಾಗುತ್ತಿದ್ದರೆ ಬಿಜೆಪಿ ತೊರೆಯುವಂತೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಲಹೆ ನೀಡಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಪ್ರತಿಪಕ್ಷಗಳು ತಮ್ಮ ಗೆಲುವನ್ನು ಖಚಿತಪಡಿಸುತ್ತವೆ ಎಂದಿದ್ದಾರೆ.

ಪೂರ್ವ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಪುಸಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಠಾಕ್ರೆ, 'ಒಂದು ಕಾಲದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದ (ಮಾಜಿ ಕಾಂಗ್ರೆಸ್ ನಾಯಕ) ಕೃಪಾಶಂಕರ್ ಸಿಂಗ್ ಅವರಂತಹ ಜನರು ಬಿಜೆಪಿಯ ಮೊದಲ ಪಟ್ಟಿಯಲ್ಲಿ ಪ್ರಧಾನಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಆದರೆ, ನಿತಿನ್ ಗಡ್ಕರಿ ಹೆಸರು ನಾಪತ್ತೆಯಾಗಿದೆ ಎಂದರು.

'ಎರಡು ದಿನಗಳ ಹಿಂದೆಯೇ ನಾನು ಗಡ್ಕರಿ ಅವರಿಗೆ ಇದನ್ನು ಹೇಳಿದ್ದೆ, ಮತ್ತು ನಾನು ಅದನ್ನು ಮತ್ತೆ ಪುನರಾವರ್ತಿಸುತ್ತಿದ್ದೇನೆ. ನಿಮಗೆ ಅಲ್ಲಿ ಅವಮಾನವಾಗುತ್ತಿದ್ದರೆ, ಬಿಜೆಪಿ ತೊರೆದು ಮಹಾ ವಿಕಾಸ್ ಅಘಾಡಿಗೆ (ಎಂವಿಎ) ಸೇರಿಕೊಳ್ಳಿ. ನಿಮ್ಮ ಗೆಲುವನ್ನು ನಾವು ಖಚಿತಪಡಿಸುತ್ತೇವೆ. ಸರ್ಕಾರ ಅಧಿಕಾರಕ್ಕೆ ಬರುತ್ತದೆ' ಎಂದು ಅವರು ಹೇಳಿದರು.

ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿಯಲ್ಲಿ ಶಿವಸೇನೆ (ಯುಬಿಟಿ), ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿದೆ.

ಕಳೆದ ವಾರ, ವಿರೋಧ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಗಡ್ಕರಿ ಅವರಿಗೆ ಠಾಕ್ರೆ ನೀಡಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಇದು ಬೀದಿಯಲ್ಲಿರುವ ವ್ಯಕ್ತಿಯೊಬ್ಬರು ಅಮೆರಿಕದ ಅಧ್ಯಕ್ಷರಾಗಲು ಆಹ್ವಾನ ನೀಡಿದಂತಿದೆ ಎಂದು ಹೇಳಿದರು.

ಉದ್ಧವ್ ಠಾಕ್ರೆ - ನಿತಿನ್ ಗಡ್ಕರಿ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನಷ್ಟೇ ಬಳಸುತ್ತೇನೆ: ನಿತಿನ್ ಗಡ್ಕರಿ

ಗಡ್ಕರಿ ಅವರು ಬಿಜೆಪಿಯ ಪ್ರಮುಖ ನಾಯಕರಾಗಿದ್ದಾರೆ. ಆದರೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆ ಚರ್ಚೆಗಳು ಪೂರ್ಣವಾಗಿಲ್ಲದ ಕಾರಣ ಮೊದಲ ಪಟ್ಟಿಯಲ್ಲಿ ಮಹಾರಾಷ್ಟ್ರದ ಹೆಸರುಗಳಿಲ್ಲ ಎಂದು ಹೇಳಿದ್ದಾರೆ.

ಈಮಧ್ಯೆ, ಪೌರತ್ವ (ತಿದ್ದುಪಡಿ) ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಗಳ ಅಧಿಸೂಚನೆಯು 'ಚುನಾವಣಾ ಜುಮ್ಲಾ'. ಹಿಂದೂಗಳು, ಸಿಖ್ಖರು, ಪಾರ್ಸಿಗಳು ಮತ್ತು ಇತರರು (ನೆರೆಯ ದೇಶಗಳಿಂದ) ಭಾರತಕ್ಕೆ ಬರುತ್ತಿರುವುದು ಸ್ವಾಗತಾರ್ಹ. ಆದರೆ, ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವುದರಿಂದ ಈಗ ಅಧಿಸೂಚನೆ ಹೊರಡಿಸಿರುವುದು ಅನುಮಾನಾಸ್ಪದವಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.

ಒಂದೆಡೆ ಮುಂಬರುವ ಚುನಾವಣೆಯಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕಿ ಸಂವಿಧಾನ ಬದಲಿಸಲು ಹೊರಟಿರುವ ಬಿಜೆಪಿ ಇದ್ದರೆ, ಮತ್ತೊಂದೆಡೆ ದೇಶಪ್ರೇಮಿಗಳ ಮೈತ್ರಿಕೂಟವಾಗಿರುವ ಇಂಡಿಯಾ ಬಣವಿದೆ. ಈ ಚುನಾವಣೆಯು `ದೇಶ-ಭಕ್ತ' (ತಮ್ಮ ದೇಶವನ್ನು ಪ್ರೀತಿಸುವವರು) ಮತ್ತು 'ದ್ವೇಷ ಭಕ್ತ' (ದ್ವೇಷವನ್ನು ಬೋಧಿಸುವವರು) ನಡುವೆ ನಡೆಯಲಿದೆ. ಪ್ರಕ್ಷುಬ್ಧ ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿಗೆ ಇನ್ನೂ ಸಮಯ ಸಿಕ್ಕಿಲ್ಲ ಎಂದರು.

370ನೇ ವಿಧಿಯನ್ನು ರದ್ದುಪಡಿಸಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಚುನಾವಣೆಗಳು ನಡೆದಿಲ್ಲ ಮತ್ತು ಕಾಶ್ಮೀರಿ ಪಂಡಿತರು ಇನ್ನೂ ಕಾಶ್ಮೀರದಲ್ಲಿ ತಮ್ಮ ಮನೆಗಳಿಗೆ ಹಿಂತಿರುಗಿಲ್ಲ. ಬಿಜೆಪಿ ಮೊದಲು ಕಾಶ್ಮೀರಿ ಪಂಡಿತರನ್ನು ಮರಳಿ ಕರೆತರಬೇಕು ಮತ್ತು ನಂತರ ಸಿಎಎ ಜಾರಿಗೊಳಿಸಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com