

ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ ವೃಂದಾವನದಲ್ಲಿ ನೆಲೆಸಿರುವ ಆಧ್ಯಾತ್ಮಿಕ ಸಂತ ಶ್ರೀ ಹಿತ್ ಪ್ರೇಮಾನಂದ ಗೋವಿಂದ ಶರಣ್ ಜಿ ಮಹಾರಾಜ್ ಅವರ ಸರಳತೆ, ತಾರ್ಕಿಕ ಆಧ್ಯಾತ್ಮಿಕ ವಿಚಾರಗಳು ಮತ್ತು 'ನಾಮ ಜಪ' ಉಪದೇಶಗಳಿಂದಾಗಿ ದೇಶಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ದ ಗ್ರೇಟ್ ಖಲಿ, ಶಿಲ್ಪಾ ಶೆಟ್ಟಿ, ಹೇಮಾ ಮಾಲಿನಿ, ಮಾಧುರಿ ದೀಕ್ಷಿತ್, ರಶ್ಮಿಕಾ ಮಂದಣ್ಣ ಮತ್ತು ಸಮಂತಾ ರುತ್ ಪ್ರಭು ಅವರಂತಹ ಖ್ಯಾತನಾಮರು ಪ್ರೇಮಾನಂದ ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಈ ಭಕ್ತರ ಸಾಲಿನಲ್ಲಿ, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಹೆಂಡತಿ, ಖ್ಯಾತ ನಟಿ ಅನುಷ್ಕಾ ಶರ್ಮಾ ಕೂಡ ಪ್ರಮುಖರು. ಅದರಂತೆ, ಕೊಹ್ಲಿ ದಂಪತಿಗಳು ಆಗಾಗ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಆದರೆ, ಹೀಗೆ ಭೇಟಿ ನಿಡುವುದಕ್ಕೆ ವಿರಾಟ್ ಕೊಹ್ಲಿ ಅವರು ಆಶ್ರಮದಿಂದ ₹5 ಕೋಟಿ ಪಡೆದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ವಿವಾದ?
ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ ಅಧ್ಯಕ್ಷರಾದ ದಿನೇಶ್ ಶರ್ಮಾವರು, "ಪ್ರೇಮಾನಂದ ಮಹಾರಾಜರ ಜನಪ್ರಿಯತೆಯನ್ನು ಹೆಚ್ಚಿಸುವ ಭಾಗವಾಗಿ, ಬಿಲ್ಡರ್ ಲಾಬಿಯೊಂದು ರಾಜಸ್ಥಾನ ಮೂಲದ ಕಂಪನಿಯ ಮೂಲಕ ವಿರಾಟ್ ಕೊಹ್ಲಿ ಅವರನ್ನು ಆಶ್ರಮಕ್ಕೆ ಕರೆತರಲು ₹5 ಕೋಟಿ ಖರ್ಚು ಮಾಡಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದ ಪತ್ರದಲ್ಲಿ" ಆರೋಪಿಸಿದ್ದರು. ಇದಾದ ತರುವಾಯು, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಆಪಾದನೆಗೆ ಯಾವುದೇ ರೀತಿಯ ಹಣಕಾಸು ದಾಖಲೆಗಳು ಅಥವಾ ಒಪ್ಪಂದದ ಪುರಾವೆಗಳು ಲಭ್ಯವಿರಲಿಲ್ಲ.
ಇದರ ಬೆನಲ್ಲೇ, ವಿರಾಟ್ ಕೊಹ್ಲಿ ಅವರ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, "ವಿರಾಟ್ ಕೊಹ್ಲಿ ಅವರು ಕೇವಲ ತಮ್ಮ ವೈಯಕ್ತಿಕ ಆಳವಾದ ನಂಬಿಕೆ ಮತ್ತು ಮಹಾರಾಜರ ಮೇಲಿನ ಗೌರವದಿಂದಾಗಿ ವೃಂದಾವನದ ಆಶ್ರಮಕ್ಕೆ ಭೇಟಿ ನೀಡುತ್ತಾರೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶಕ್ಕಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಇಂತಹ ಯಾವುದೇ ಆಧಾರರಹಿತ ವದಂತಿಗಳನ್ನು ಮತ್ತು ಸತ್ಯಾಸತ್ಯತೆ ಪರಿಶೀಲಿಸದ ಸುದ್ದಿಗಳನ್ನು ಬಿತ್ತರಿಸದಂತೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡದಂತೆ ಕೊಹ್ಲಿ ಅವರ ತಂಡ ಮಾಧ್ಯಮಗಳಿಗೆ ವಿನಂತಿಸಿದೆ.
ಏತನ್ಮಧ್ಯೆ, ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಜನವರಿ 2023 ರಿಂದಲೂ ವೃಂದಾವನದ ಆಶ್ರಮಕ್ಕೆ ಹಲವು ಬಾರಿ ವೈಯಕ್ತಿಕವಾಗಿ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.