

ಸುವರ್ಣ ವಿಧಾನಸೌಧ: ಮಂಡ್ಯ ಜಿಲ್ಲಾ ರಾಜಕಾರಣ ಸಂಬಂಧ ಸಿಎಂ ಸಿದ್ದರಾಮಯ್ಯ ಜತೆ ಮುನಿಸಿಕೊಂಡಿರುವ ವಸತಿ ಸಚಿವ ಅಂಬರೀಷ್ ರಾಜಿನಾಮೆ ಬೆದರಿಕೆಯೊಂದಿಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಬಿಟ್ಟು ಬೆಂಗಳೂರಿಗೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅಂಬರೀಷ್ ಜಿಲ್ಲಾ ಉಸ್ತುವಾರಿ ಸಚಿವನಾದರೂ ತಮ್ಮನ್ನು ಗಣನೆಗೆ ತೆಗೆದುಕೊಳ್ಳದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಂಪುಟದ ಸದಸ್ಯನಾಗಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು 2 ವರ್ಷದಿಂದ ನಿಮ್ಮ ಜತೆ ವಿಶ್ವಾಸ, ನಿಷ್ಠೆಯಿಂದಿದ್ದೇನೆ. ವಹಿಸಿದ ಜವಾ ಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಆದರೆ, ನೀವು ನಿರೀಕ್ಷಿತ ಸಹಕಾರ ನೀಡದೇ
ಇರುವುದು ಬೇಸರ ತಂದಿದೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನ ಮಾತಿಗೆ ಬೆಲೆ ಇಲ್ಲದೇ ಇದ್ದರೆ ನಾನು ಏಕೆ ಈ ಹುದ್ದೆಯಲ್ಲಿ ಮುಂದುವರಿಯಬೇಕು.
ನಿಮಗೆ ಬೇಕಾದವರನ್ನೇ ಮಾಡಿಕೊಳ್ಳಿ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ದೂರವಾಣಿ ಮೂಲಕ ಮಾತನಾಡಿದ್ದು, ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಮನವಿ ಮಾಡಿದ್ದಾರೆ.