

ವಿಧಾನಸಭೆ: ರಾಜ್ಯದಲ್ಲಿ ರೈತರಿಗೆ ಸಾಲ ಭಾಗ್ಯ, ಆತ್ಮಹತ್ಯೆ ಭಾಗ್ಯ, ಕತ್ತಲೆ ಭಾಗ್ಯ ನೀಡಿರುವುದಷ್ಟೇ ಕಾಂಗ್ರೆಸ್ ಸರ್ಕಾರದ ಸಾಧನೆ. ಇದು ಜನರಿಗೆ ತಿಳಿಯದಂತೆ ಮಾಡಲು ಟಿಪ್ಪು ಜಯಂತಿ ಮತ್ತು ಕೋಮು ಘರ್ಷಣೆಗಳನ್ನು ಸೃಷ್ಟಿಸಿ ದಿಕ್ಕುತಪ್ಪಿಸಲಾಗುತ್ತಿದೆ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ರಾಜ್ಯದಲ್ಲಿ ತಲೆದೋರಿಸುವ ಬರ ಪರಿಸ್ಥಿತಿ ಕುರಿತ ನಿಲುವಳಿ ಸೂಚನೆ ಮೇಲೆ ನಡೆದ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರ ಕಳೆದ ಎರಡೂವರೆ ವರ್ಷದಲ್ಲಿ 10ವರ್ಷಗಳಷ್ಟು ಹಿಂದೆ ಹೋದಂತಾಗಿದೆ ಎಂದು ಸರ್ಕಾರದ ಆಡಳಿತ ವೈಫಲ್ಯಗಳನ್ನು ಪಟ್ಟಿ ಮಾಡಿದರು. ರಾಜ್ಯದಲ್ಲಿ ಬರ ವ್ಯಾಪಿಸುತ್ತಿದ್ದು, ನೀರು, ಮೇವಿನ ಸಮಸ್ಯೆ ವಿಪರೀತವಾಗುತ್ತಿದೆ. ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಸರ್ಕಾರ ಅರ್ಧ ಅವಧಿಯಲ್ಲಿ ಎಲ್ಲ ರಂಗದಲ್ಲೂ ಸಂಪೂರ್ಣ ವಿಫಲವಾಗಿದೆ. ಆದರೆ ಸರ್ಕಾರ ಏನೂ ಆಗಿಲ್ಲ ಎನ್ನುವಂತೆ ಅಲಕ್ಷ್ಯ ವಹಿಸಿದೆ. ಇದನ್ನು ನೋಡಿದರೆ, ರಾಜ್ಯದಲ್ಲಿ ನಿಜಕ್ಕೂ ಸರ್ಕಾರ ಅಸ್ತಿತ್ವಕ್ಕೆ ಇದೆಯೋ ಇಲ್ಲವೋ ತಿಳಿಯುತ್ತಿಲ್ಲ ಎಂದು ಶೆಟ್ಟರ್ ಜರಿದರು.
ರಾಜ್ಯದಲ್ಲಿ 840ರೈತರು ಆತ್ಮಹತ್ಯೆಯಾಗಿದ್ದರೆ ಸರ್ಕಾರ ಕೇವಲ 42 ರೈತರ ಕುಟುಂಬಕ್ಕೆ ಮಾತ್ರ ಪರಿಹಾರ ನೀಡಿದೆ. ರಾಜ್ಯದಲ್ಲಿ ಮಂಡ್ಯದಲ್ಲೇ ಹೆಚ್ಚು ಆತ್ಮಹತ್ಯೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಹೋಗುವಾಗ ಅದೇ ರಸ್ತೆಯಲ್ಲೇ ಹೋಗುತ್ತಾರೆ. ಆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರೈತರ ಕುಟುಂಬಕ್ಕೆ ಭೇಟಿ ನೀಡುವ ಪ್ರಯತ್ನ ಮಾಡಲಿಲ್ಲ. ಮನಸ್ಸೂ ಇಲ್ಲ. ರೈತರ ಸಾಯುತ್ತಿದ್ದರೂ ಬೇಸರವಾಗುತ್ತಿಲ್ಲ ಎಂದರೆ ಮುಖ್ಯಮಂತ್ರಿ ಅವರಿಗೆ ನಿಜಕ್ಕೂ ಹೃದಯವಿಲ್ಲ. ಹೀಗಿದ್ದರ ಮೇಲೆ ಸಿದ್ದರಾಮಯ್ಯ ಏಕೆ ಮುಂದುವರಿಯಬೇಕು. ಸುಮ್ಮನೆ ರಾಜಿನಾಮೆ ಸಲ್ಲಿಸಿ ಹೋಗಲಿ ಎಂದು ಶೆಟ್ಟರ್ ಒತ್ತಾಯಿಸಿದರು.
ರಾಜ್ಯ ಸರ್ಕಾರ ಕೇಂದ್ರವನ್ನು ಪರಿಹಾರ ಕೇಳುತ್ತದೆ. ಆದರೆ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಸಿದ್ಧತೆಯನ್ನು ಸರ್ಕಾರ ಮಾಡಿಲ್ಲ. ಯಾವುದೇ ಉಸ್ತುವಾರಿ ಸಚಿವರು ಸಭೆಗಳನ್ನು ನಡೆಸಿಲ್ಲ. ಪರಿಹಾರ ಕಾರ್ಯಗಳನ್ನು ನಡೆಸಿಲ್ಲ. ಮೂರು ತಿಂಗಳ ಹಿಂದೆಯೇ ರೈತರ ಆತ್ಮಹತ್ಯೆ ಕುರಿತು ಸ್ವಾಮಿನಾಥನ್ ಸಮಿತಿ ರಚಿಸುವುದಾಗಿ ಕೃಷಿ ಸಚಿವರು ಸದನದಲ್ಲಿ ಹೇಳಿದ್ದರು. ಸ್ವಾಮಿನಾಥನ್ ಎಲ್ಲಿದ್ದಾರೆ ? ಸಮಿತಿ ಎಲ್ಲಿದೆ. ಸಭೆ ಎಲ್ಲಿ ನಡೆದಿದೆ. ಇವರಿಗೆ ಏನಾಗಿದೆ ಎಂದು ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.