

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ವಸತಿ ಸಚಿವ ಅಂಬರೀಶ್ ಹಿಟ್ಲರ್ ನೀತಿ ಅನುಸರಿಸುತ್ತಿದ್ದಾರೆ. ರಾಜಕೀಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳು ಅಮರಾವತಿ ಚಂದ್ರಶೇಖರ್ ಮನೆಯಲ್ಲೇ ನಡೆಯುತ್ತವೆ ಎಂದು ಆರೋಪಿಸಿ ಅಂಬಿ ಕಟ್ಟಾ ಬೆಂಬಲಿಗ ಕೆಬ್ಬಳ್ಳಿ ಆನಂದ್ ಅಭಿಮಾನಗಳು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಸಚಿವ ಅಂಬರೀಶ್ ಪಕ್ಷ ನಿಷ್ಠರನ್ನು ಕಡೆಗಣಿಸಿದ್ದಾರೆ ಆರೋಪಿಸಿದ್ದಾರೆ. ಹೊಳಲು ಜಿಪಂ ಕ್ಷೇತ್ರದಿಂದ ಪತ್ನಿ ರಾಣಿ ಅವರನ್ನು ಕಣಕ್ಕಿಳಿಸುತ್ತಿರುವ ಕೆಬ್ಬಳ್ಳಿ ಆನಂದ್, ನಾಮಪತ್ರ ಸಲ್ಲಿಸಿದ ಬಳಿಕ ಬೆಂಬಲಿಗರೊಂದಿಗೆ ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟಿಸಿದರು. ಸಚಿವ ಅಂಬರೀಷ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಇದ್ದರೂ ಯಾರದೋ ಮನೆಯಲ್ಲಿ ಕುಳಿತುಕೊಂಡು ಚರ್ಚಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಟಿಕೆಟ್ ಕೊಡದಿದ್ದ ಮೇಲೆ ಭರವಸೆ ಏಕೆ ಕೊಡಬೇಕು?. ರಾತ್ರೋರಾತ್ರಿ ಟಿಕೆಟ್ ಹಂಚಿಕೆ ಮಾಡಿದ್ದೇಕೆ?. ಹಣಕ್ಕಾಗಿ ಟಿಕೆಟ್‍ನ್ನು ಅಂಬರೀಶ್ ಮಾರಾಟ ಮಾಡಿದ್ದಾರೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಪಕ್ಷಕ್ಕೆ ಬರೆದುಕೊಟ್ಟವರಂತೆ ವರ್ತಿಸುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್‍ನಿಂದ ಕಳಪೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ನಾವು ಅವರ ಬಗ್ಗೆ ಬಹಳ ಅಭಿಮಾನ ಇಟ್ಟುಕೊಂಡಿದ್ದೆವು. ಅದನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದು ಟೀಕಿಸಿದರು.
ಟಿಕೆಟ್ ಹಂಚಿಕೆ ವಿಷಯವಾಗಿ ಪಕ್ಷದ ಹಿರಿಯ ಮುಖಂಡರು, ಬೆಂಬಲಿಗರು, ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಕೆಲಸಕ್ಕೆ ಅಂಬರೀಶ್ ಮುಂದಾಗಲೇ ಇಲ್ಲ. ಕ್ಷೇತ್ರದೊಳಗೆ ಕುಳಿತು ಬಿ-ಫಾರಂ ಹಂಚಿಕೆ ಮಾಡುವ ಧೈರ್ಯ ಅಂಬರೀಶ್‍ಗೆ ಇಲ್ಲ ಎಂದು ಕೆಬ್ಬಳ್ಳಿ ಆನಂದ್ ದೂರಿದ್ದಾರೆ.