

ಮಂಗಳೂರು : ಆಹಾರ ಸಚಿವ ಯು. ಟಿ. ಖಾದರ್ ದೇವಸ್ಥಾನ ಭೇಟಿ ಕುರಿತು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೀಡಿದ್ದ ಹೇಳಿಕೆ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಚಿಂತನೆ ನಡೆಸಿದೆ.
ಹಿಂದೂ ಪರ ಸಂಘಟನೆಗಳು ಇತ್ತೀಚಿಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಭಾಕರ್ ಭಟ್, ಉಲ್ಲಾಳ್ ಕ್ಷೇತ್ರದಲ್ಲಿನ ಗೋವುಗಳ ಕಳ್ಳತನವನ್ನು ಖಂಡಿಸಿದ್ದರು.
ಆ ಕ್ಷೇತ್ರವನ್ನು ಯು. ಟಿ. ಖಾದರ್ ಪ್ರತಿನಿಧಿಸುತ್ತಿದ್ದು, ಖಾದರ್ ಕೂಡಾ ಗೋವುಗಳ ಕಳ್ಳ ಎಂದು ಆರೋಪಿಸಿದರು. ಅವರು ಗೋವುಗಳ ಭಕ್ಷಕರಾಗಿದ್ದು, ದೇವಸ್ಥಾನಗಳಿಗೆ ಅವಕಾಶ ನೀಡದಂತೆ ಹೇಳಿಕೆ ನೀಡಿದ್ದರು.
ಪ್ರಭಾಕರ್ ಭಟ್ ಪ್ರಚೋದನಾಕಾರಿ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿ ನಂತರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ವಿನಯ್ ರಾಜ್ ತಿಳಿಸಿದ್ದಾರೆ.
ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಭಾಕರ್ ಭಟ್ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಸಾಬೀತಾದರೆ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮಹೇಶ್ ಕಾರ್ ಜಂಗಿ ತಿಳಿಸಿದ್ದಾರೆ.