ಅಂಕೋಲ: ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎಂಟು ಕಳಂಕಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ಆರೋಪಿಸಿದ್ದಾರೆ.
ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಏಳನೇ ಬಾರಿ ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ, ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿರುವ ಆರ್ಥಿಕ ಅಪರಾಧಿಗಳನ್ನು ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಮೋದಿ ರಾಜ್ಯಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ 30 ಸಾವಿರ ಕೋಟಿ ರುಪಾಯಿ ವಂಚಿಸಿದ ಉದ್ಯಮಿ ನೀರವ್ ಮೋದಿ ಬಗ್ಗೆ ಮಾತನಾಡುವುದಿಲ್ಲ ಎಂದರು.
ಬೇಟಿ ಬಚಾವೋ ಬೇಟಿ ಪಡಾವೊ ಆಂದೋಲನ ಈಗ ಜನರಿಗೆ ಗೊಂದಲಕ್ಕೀಡುಮಾಡಿದೆ. ಬಿಜೆಪಿಯ ಕೆಲ ಕಾರ್ಯಕರ್ತರಿಂದಲೇ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಿಕೊಳ್ಳುವುದು ಜನರಿಗೆ ಕಷ್ಟವಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಮೋದಿ ಕರ್ನಾಟಕಕ್ಕೆ ಬಂದು ಜಗಜ್ಯೋತಿ ಬಸವಣ್ಣನವರ ವಚನಗಳನ್ನು ಉಲ್ಲೇಖಿಸುತ್ತಾರೆ. ಆದರೆ ಬಸವಣ್ಣ ಹೇಳಿದ ನುಡಿದಂತೆ ನಡೆ ಎಂಬ ವಚನ ಮೋದಿ ಅವರಿಗೆ ಗೊತ್ತಿಲ್ಲ. ಅಧಿಕಾರಕ್ಕೆ ಬರುವ ಮೊದಲು ಪೆಟ್ರೋಲ್ ದರ ಕಡಿಮೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಈಗ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ದೇಶದಲ್ಲಿ ಪೆಟ್ರೋಲ್ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಲಾಭವೆಲ್ಲ ಕೆಲವೇ ಕೆಲವು ಶ್ರೀಮಂತ ಉದ್ಯಮಿಗಳಿಗೆ ಆಗುತ್ತಿದೆ ಎಂದು ಆರೋಪಿಸಿದರು.