ಕಲಬುರಗಿ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರ
ಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ಬೀದರ್ ಗೆ ಭೇಟಿ ನೀಡುತ್ತಿದ್ದಾರೆ.
ಆಗಸ್ಟ್ 13 ರಂದು ಬೀದರ್ ನಲ್ಲಿ ಜನಧ್ವನಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ಕೊಡಲಿದ್ದಾರೆ
ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದ ಹಿನ್ನೆಲೆಯಲ್ಲಿಎಐಸಿಸಿ ಅಧ್ಯಕ್ಷರಿಗೆ ಅಭಿನಂದೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ತಿಳಿಸಿದೆ.
ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ 2ನೇ ಪಕ್ಷವಾಗಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜನರಿಗೆ ಕೃತಜ್ಞತೆ ಸಲ್ಲಿಸಲು ರಾಹುಲ್ ಗಾಂಧಿ ಬೀದರ್ ಗೆ ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗೆಲ್ಲಿಸಬೇಕೇಂದು ಜನರಲ್ಲಿ ಮನವಿ ಮಾಡಲು ರಾಹುಲ್ ಗಾಂಧಿ ಬೀದರ್ ಗೆ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೀದರ್ ಮೇಲೆ ರಾಹುಲ್ ಗೆ ವಿಶೇಷ ಪ್ರೀತಿಯಿದ್ದು,ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಹೆಚ್ಚಿನ ಬಾರಿ ಬೀದರ್ ಗೆ ತೆರಳಿ ಅಲ್ಲಿನ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು. ಬಸವ ಕಲ್ಯಾಣಕ್ಕೆ ಭೇಟಿ ನೀಡಿದ್ದ ರಾಹುಲ್ ಹಲವು ಬಸವಣ್ಣನ ವಚನಗಳನ್ನು ಹೇಳಿದ್ದರು.