ಕುಮಾರಸ್ವಾಮಿ-ರಾಹುಲ್ ಗಾಂಧಿ ಒಡನಾಟ: ರಾಜ್ಯ ಕಾಂಗ್ರೆಸ್ ನಾಯಕರಿಗೆ ಪೀಕಲಾಟ!

ದೆಹಲಿಗೆ ನೇರವಾಗಿ ತೆರಳಿದ ಸಿಎಂ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಅನುಮತಿ ಪಡೆದು ಸಂತೋಷದಿಂದ ಹಿಂದುರಿಗಿದ್ದಾರೆ. ಜೆಬ ಮಂಡಿಸಲು ಗ್ರೀನ್ ಸಿಗ್ನಲ್ ನೀಡಿರುವ...
ರಾಹುಲ್ ಗಾಂಧಿ, ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ
ರಾಹುಲ್ ಗಾಂಧಿ, ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ
Updated on: 
ಬೆಂಗಳೂರು: ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತೆ ತಮ್ಮ ಆಡಳಿತದ ಹಾದಿಗೆ ಹಿಂತಿರುಗಿದ್ದಾರೆ. ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಕುಮಾರ ಸ್ವಾಮಿ ರಾಹುಲ್ ಗಾಂಧಿ ಅವರಿಂದ ಒಪ್ಪಿಗೆ ಪಡೆದುಕೊಂಡಿದ್ದಾರೆ.
ರಾಜ್ಯ ಸಮ್ಮಿಶ್ರ ಸರ್ಕಾರದ ಹಲವು ಬೆಳವಣಿಗೆಗೆ ಸಂಬಂಧ ಕುಮಾರ ಸ್ವಾಮಿ ನೇರವಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿರುವುದರಿಂದ ರಾಜ್ಯ ಕಾಂಗ್ರೆಸ್ ನಾಯಕರು ಕಂಗಲಾಗಿದ್ದಾರೆ. 
ಜುಲೈ ತಿಂಗಳಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಿದ್ದವಾಗುತ್ತಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೂಗುದಾರ ಹಾಕಲು ಯತ್ನಿಸಿದ್ದರು. ಪೂರಕ ಬಜೆಟ್ ಮಂಡಿಸುವಂತೆ ಕುಮಾರ ಸ್ವಾಮಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದರು. 
ಈ ಹಿನ್ನೆಲೆಯಲ್ಲಿಟ್ ದೆಹಲಿಗೆ ನೇರವಾಗಿ ತೆರಳಿದ ಸಿಎಂ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಅನುಮತಿ ಪಡೆದು ಸಂತೋಷದಿಂದ ಹಿಂದುರಿಗಿದ್ದಾರೆ. ಜೆಬ ಮಂಡಿಸಲು ಗ್ರೀನ್ ಸಿಗ್ನಲ್ ನೀಡಿರುವ ರಾಹುಲ್ ಸಮ್ಮಿಶ್ರ ಸರ್ಕಾರದ ಯಾವುದೇ ವಿಷಯ ಸಂಬಂಧ ತಮ್ಮೊಂದಿಗೆ ನೇರವಾಗಿ ಮಾತನಾಡಿ ಎಂದು ಕುಮಾರ ಸ್ವಾಮಿ ಅವರಿಗೆ ಹೇಳಿದ್ದಾರೆ. ರಾಹುಲ್ ಅವರ ಬೆಂಬಲದಿಂದ ಕುಮಾರ ಸ್ವಾಮಿ ಸಂಭ್ರಮದಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ, ಇದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ,
ಜೆಡಿಎಸ್ ಅಜೆಂಡಾವನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಕುಮಾರ ಸ್ವಾಮಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಬದಿಗೊತ್ತಿ ನೇರವಾಗಿ ರಾಹುಲ್ ಗಾಂಧಿ ಅವರ ಬಳಿ ಡೀಲ್ ಮಾಡುವ ಸಾಧ್ಯತೆಯಿದೆ ಎಂದು ಸಿದ್ದರಾಮಯ್ಯ ಅವರ ಆಪ್ತರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. 
ಪೂರ್ಣ ಪ್ರಮಾಣದ ಹೊಸ ಬಜೆಟ್ ಗೆ ವಿರೋಧ ವ್ಯಕ್ತ ಪಡಿಸಿದ್ದ ಸಿದ್ದರಾಮಯ್ಯ ಅವರಿಗೆ ರಾಹುಲ್-ಕುಮಾರ ಸ್ವಾಮಿ ಒಡನಾಟ ಅಸಮಾಧಾನಕ್ಕೆ ಕಾರಣವಾಗಿದೆ, ಹಿಗಾಗಿ ಮೌನವಾಗಿ ಸಿದ್ದರಾಮಯ್ಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆ ಕೇಂದ್ರಕ್ಕೆ ತೆರಳಿದ್ದಾರೆ.
ಕುಮಾರ ಸ್ವಾಮಿ ಅವರ ಬೇಡಿಕೆ ಹಾಗೂ ಮನವಿಗಳಿಗೆ ರಾಹುಲ್ ಗಾಂಧಿ ಸಂತೋಷದಿಂದ ಸಮ್ಮತಿಸುತ್ತಿರುವುದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಉಪಸ್ಥಿತಿಯನ್ನು ಪ್ರಶ್ನಿಸಿದೆ ಎಂದು ಕೆಪಿಸಿಸಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಸಚಿವ ಸಂಪುಟದಲ್ಲಿ ಸ್ಥಾವನ ಸಿಗಲಿಲ್ಲವೆಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ಎಂಬಿ ಪಾಟೀಲ್ ನಿವಾಸಕ್ಕೆ ಕುಮಾರ ಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಿದ್ದಕ್ಕೆ ಹಲವು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಪಕ್ಷದ ಹೈಕಮಾಂಡ್ ಈ ಎಲ್ಲಾ ಬೆಳವಣಿಗಳನ್ನು ಮೌನವಾಗಿ ನೋಡಿಕೊಂಡಿರುವುದರ ಜೊತೆಗೆ ಕುಮಾರ ಸ್ವಾಮಿಗೆ ಬೆಂಬಲ ನೀಡುತ್ತಿದೆ.ಇತ್ತೀಚೆಗೆ ಕಾಂಗ್ರೆಸ್ ಶಾಸಕ ಸಿ ಶಿವಳ್ಳಿ ಅವರು ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿರುವುದು ಕಾಂಗ್ರೆಸ್ ನಾಯಕರ ಉರಿವ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿದೆ. 
ರಾಹುಲ್ ಕುಮಾರ ಸ್ವಾಮಿ ಒಡನಾಟ ರಾಜ್ಯ ಕಾಂಗ್ರೆಸ್ ಸಂಸದರ ನಿದ್ದೆಗೆಡಿಸಿದೆ. ಮುಂದಿನ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೇ ಜೆಡಿಎಸ್ 28 ರಲ್ಲಿ 10 ಲೋಕಸಭೆ ಕ್ಷೇತ್ರಗಳನ್ನು ಕೇಳುವ ಸಾಧ್ಯತೆಯಿದೆ. ತುಮಕೂರು. ಕೋಲಾರ ಮತ್ತು ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್ ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ, ಕುಮಾರ ಸ್ವಾಮಿ ಮತ್ತು ದೇವೇಗೌಡ ಅವರ ಈ ಡೀಲ್ ಗೆ ರಾಹುಲ್ ಗಾಂಧಿ ಒಂದು ವೇಳೆ ಸಮ್ಮತಿಸಿದ್ದರೇ, ನಮ್ಮ ಭವಿಷ್ಯ ಏನು ಎಂದು ಕೆಲ ಸಂಸದರು ಕಂಗಲಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com