

ಕೆಜಿಎಫ್(ಕೋಲಾರ): ದೇಶದ ಪ್ರತಿ ರಾಜ್ಯಗಳು ಕೆಲವು ವಿಶೇಷ ಕಾರ್ಯಕ್ರಮಗಳಿಗೆ ಜನಪ್ರಿಯವಾಗಿರುತ್ತದೆ. ಕೃಷಿಗೆ ಉತ್ತೇಜನ, ಕೈಗಾರಿಕೆಗಳಿಗೆ ಪ್ರಾಮುಖ್ಯತೆ, ನೀರಿನ ಸಮಸ್ಯೆ ಬಗೆಹರಿಸಲು ಅಣೆಕಟ್ಟುಗಳ ನಿರ್ಮಾಣ ಇತ್ಯಾದಿಗಳನ್ನು ಸರ್ಕಾರಗಳು ಮಾಡುತ್ತವೆ. ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಮಾತ್ರ ಹೆಸರುವಾಸಿಯಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.
ಕೆಜಿಎಫ್ ನಲ್ಲಿ ನಿನ್ನೆ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜನರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದ್ದು ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಪದ್ಧತಿಗೆ ಹೆಸರುವಾಸಿಯಾಗಿದೆ ಮತ್ತು ಭ್ರಷ್ಟಾಚಾರರಹಿತ ಮಾರ್ಗಗಳನ್ನು ಅನುಸರಿಸುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿರುವ ಬೆಂಗಳೂರು ನಗರ ಇಂದು ಕೆಲವು ಮಾಫಿಯಾಗಳ ಕೈಗೆ ಸಿಕ್ಕಿ ಅದು ಬ್ರಾಂಡ್ ಬೆಂಗಳೂರಿಗೆ ಧಕ್ಕೆಯನ್ನುಂಟುಮಾಡುತ್ತಿದೆ ಎಂದು ದೂರಿದರು.
ಸಚಿವರುಗಳಾದ ಕೆಜೆ ಜಾರ್ಜ್ ಮತ್ತು ರೋಶನ್ ಬೇಗ್, ಶಾಸಕ ಎನ್ ಎ ಹ್ಯಾರಿಸ್ ಅವರ ವಿರುದ್ಧ ನೇರ ಆರೋಪ ಮಾಡಿರುವ ಅಮಿತ್ ಶಾ, ಬೆಂಗಳೂರು ನಗರ ಇಂದು ಈ ಮೂವರ ಕೈಗೆ ಸಿಲುಕಿ ನಲುಗಿ ಹೋಗಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ ಎಂದು ಪ್ರತಿಪಾದಿಸಿದರು.
ಇಂದು ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯನವರ ಮಾತುಗಳನ್ನು ಮಾತ್ರ ಕೇಳುವ ಸ್ಥಿತಿಯಲ್ಲಿದ್ದಾರೆ. ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರು ಎರಡೂ ಕ್ಷೇತ್ರಗಳಲ್ಲಿ ಸೋಲನುಭವಿಸಲಿದ್ದಾರೆ ಎಂದು ಟೀಕಿಸಿದರು.
ಕೆಜಿಎಫ್ ನ ಜನರು ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ, ಬಂಗಾರಪೇಟೆಯ ವೆಂಕಟಮುನಿ ಮತ್ತು ಮುಳಬಾಗಿಲಿನ ಅಮರೀಶ್ ಅವರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿಕೊಂಡರು.