ಕೊವಿಡ್-19 ವೈದ್ಯಕೀಯ ಪರೀಕ್ಷಾ ವರದಿ ಮೊದಲು ದೆಹಲಿಗೇಕೆ?: ಪ್ರಿಯಾಂಕ್ ಖರ್ಗೆ ಪ್ರಶ್ನೆ

ರಾಜ್ಯದಲ್ಲಿ ನಡೆಯುತ್ತಿರುವ ಕೊರೋನಾ ಶಂಕಿತರ ವೈದ್ಯಕೀಯ ಪರೀಕ್ಷಾ ವರದಿ ಮೊದಲು ದೆಹಲಿಗೆ ಏಕೆ ನೀಡಲಾಗುತ್ತಿದೆ? ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ
Updated on: 

ಕಲಬುರಗಿ: ರಾಜ್ಯದಲ್ಲಿ ನಡೆಯುತ್ತಿರುವ ಕೊರೋನಾ ಶಂಕಿತರ ವೈದ್ಯಕೀಯ ಪರೀಕ್ಷಾ ವರದಿ ಮೊದಲು ದೆಹಲಿಗೆ ಏಕೆ ನೀಡಲಾಗುತ್ತಿದೆ? ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಕೊರೋನಾ ವೈರಸ್ ಕುರಿತು ಯುಎನ್ಐ ಕನ್ನಡ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶಾಸಕರು, ಕೊರೋನಾ ಶಂಕಿತರ ವೈದ್ಯಕೀಯ ಪರೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಮೊದಲು ನೀಡದೆ, ದೆಹಲಿಯ ಐಸಿಎಂಆರ್ ಗೆ ಕಳುಹಿಸಿಕೊಡಲಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಬೇಕು ಎಂದು ಅವರು ಆಗ್ರಹಿಸಿದರು.

ಈಗಾಗಲೇ ಜಿಲ್ಲೆಯಲ್ಲಿನ ಕೊವಿಡ್-19 ಸಮಸ್ಯೆ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದಲ್ಲದೇ, ವೈಯಕ್ತಿಕವಾಗಿ ಭೇಟಿ ಆಗಿದ್ದೇನೆ. ಟೆಸ್ಟ್ ಲ್ಯಾಬ್ ನಲ್ಲಿ ಆಗುತ್ತಿರುವ ಟೆಸ್ಟಿಂಗ್ ವರದಿ ನೇರವಾಗಿ ರಾಜ್ಯ ಸರ್ಕಾರಕ್ಕೆ ತಲುಪುತ್ತಿಲ್ಲ. ಬದಲಾಗಿ ದೆಹಲಿಯ ಐಸಿಎಂಆರ್ ಗೆ ಕಳುಹಿಸಿಕೊಡಲಾಗುತ್ತಿದೆ. ವಾಡಿಯಲ್ಲಿನ 2 ವರ್ಷದ ಮಗುವಿಗೆ ಕೊರೋನಾ ಸೋಂಕು ಇರುವುದು ತಮಗೆ ಮೊದಲೇ ತಿಳಿದಿತ್ತು. ಆದರೆ, ರಾಜ್ಯ ಸರ್ಕಾರ 24 ಗಂಟೆಗಳ ನಂತರ ಅದನ್ನು ದೃಢಪಡಿಸಿದೆ. ವೈದ್ಯಕೀಯ ವರದಿ ನೇರವಾಗಿ ದೆಹಲಿಗೆ ಹೋಗುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೆ ಮಾಹಿತಿ ವಿಳಂಬವಾಗುತ್ತಿದೆ ಎಂದು ಅವರು ಆರೋಪಿಸಿದರು.

ಪ್ರತಿ ದಿನ 16ರಿಂದ 20 ಕೋವಿಡ್-19 ಪರೀಕ್ಷೆ ಮಾಡಿದರೇ ಸಾಲದು, ಕನಿಷ್ಠ ಪಕ್ಷ 90 ಜನ ಶಂಕಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾತ್ರ ಕೊರೊನಾ ಬಹುಬೇಗನೆ ನಿಯಂತ್ರಿಸಲು ಸಾಧ್ಯ. ವೈದ್ಯಕೀಯ ವರದಿ ಎದುರಿಗಿರದೇ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚು ಹೆಚ್ಚು ಟೆಸ್ಟ್ ಆದಾಗ, ಸೋಂಕು ಇದ್ದವರಿಗೆ ಬೇಗನೇ ಗುಣಮುಖಪಡಿಸುವ ಮೂಲಕ‌ ನಿಯಂತ್ರಿಸಬಹುದು ಎಂದರು.

ಕೊರೋನಾ ಒಂದು ಕಣ್ಣಿಗೆ ಕಾಣದ ಭಯಂಕರ ವೈರಸ್ ಆಗಿದ್ದು, ಈಗಾಗಲೇ ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಧಿಕ ಅರಿವು ಮೂಡಿಸಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಿದೆ. ಆದರೂ, ಲಾಕ್ ಡೌನ್ ನಿಯಮವನ್ನು ಗಾಳಿಗೆ ತೂರಿ ದೇವಸ್ಥಾನಗಳಲ್ಲಿ ರಥೋತ್ಸವ ಜರುಗುತ್ತಿವೆ. ಇದು ಕೊರೋನಾ ಬಗ್ಗೆ ಅರಿವಿಲ್ಲದೇ ಜರುಗುತ್ತಿರುವುದಲ್ಲ. ಅವರ ನಿರ್ಲಕ್ಷ್ಯ ದಿಂದ ಜರುಗುತ್ತಿದ್ದು, ಇದಕ್ಕೆ ದೇವಸ್ಥಾನದ ಸಮಿತಿಯೇ ನೇರಹೊಣೆ ಎಂದು ಅವರು ಅಸಮಾಧಾನ ಹೊರಹಾಕಿದರು.

ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ 2 ವರ್ಷದ ಮಗುವಿನಲ್ಲಿ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಗಾಗಲೇ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ದಿನ ಬಳಕೆಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.

ಸದ್ಯ ಬರಗಾಲವಿದ್ದು, ಬೇಸಿಗೆ ಕಾಲವಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಇತ್ತೀಚೆಗೆ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ಕೋವಿಡ್-19 ರಕ್ಷಕರಿಗೆ ರಕ್ಷಣೆ ಇಲ್ಲದಂತಾಗಿದೆ. ಸಿಬ್ಬಂದಿಗೆ ರಕ್ಷಣೆ ನೀಡುವುದು ಸರ್ಕಾರದ ಕೆಲಸ. ಹಲ್ಲೆ ಮಾಡಿದವರೂ ಯಾರೇ ಆಗಿರಲಿ. ಅಂತಹವರನ್ನು ಯಾವುದೇ ಮುಲಾಜಿಲ್ಲದೇ ಜೈಲಿಗೆ ಅಟ್ಟಬೇಕು ಎಂದು ಅವರು ಕಿಡಿಕಾರಿದರು.

ಕೊರೋನಾ ಜಾತಿ, ಧರ್ಮ, ಪಕ್ಷ ನೋಡಿ ಬರುವುದಿಲ್ಲ. ಈ ವಿಷಯದಲ್ಲಿ ಯಾರೂ ಸಹಕಾರ ನೀಡುವುದಲ್ಲವೋ ಅಂತಹವರನ್ನು ತಾವು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.ಜನರು ಕೂಡ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಮನವಿ ಮಾಡಿದರು‌.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com