

ಮೈಸೂರು: ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆಯಾಗಿಲ್ಲ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಎರಡು ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಬಾಕಿಯಿದೆ. ಚುನಾವಣೆ ನಡೆಯಬೇಕು, ಹೊಸ ಶಾಸಕರು ಆಯ್ಕೆಯಾಗಿ ಅವರ ಅಭಿಪ್ರಾಯ ಪಡೆದು ಹೈಕಮಾಂಡ್ ಸಿಎಂ ಯಾರಾಗಬೇಕೆಂದು ತೀರ್ಮಾನ ಮಾಡುತ್ತಾರೆ. ಇದುವರೆಗೆ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆಯೇ ಆಗಿಲ್ಲ, ಇಲ್ಲದ ವಿಚಾರಗಳ ಬಗ್ಗೆ ಈಗ ಚರ್ಚೆ ಏಕೆ ಎಂದರು.
ನಮ್ಮಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸಿಗರು ಎಂಬ ಬೇಧವಿಲ್ಲ, ನಾನು ಹೊರಗಿನಿಂದ ಬಂದು ಐದು ವರ್ಷ ಸಿಎಂ ಆಗಲಿಲ್ಲವೇ, ಸೊಸೆ ಮನೆಗೆ ಬರುವವರೆಗೆ ಮಾತ್ರ ಹೊರಗಿನವಳು, ಬಂದ ಮೇಲೆ ಮನೆಯವಳೇ ಆಗುತ್ತಾಳೆ, ಹಾಗಾಗಿ ನಮ್ಮ ಪಕ್ಷದಲ್ಲಿ ಮೂಲ ಇದ್ದವರು, ಹೊರಗಿನಿಂದ ಬಂದವರು ಎಂಬ ಬೇಧವಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆ ಇದೆ, ಅದರ ಬಗ್ಗೆ ಅವರನ್ನೇ ಕೇಳಿ, ಅದಕ್ಕೂ ನನಗೂ ಸಂಬಂಧವಿಲ್ಲ, ನನ್ನ ಮತ್ತು ಡಿ ಕೆ ಶಿವಕುಮಾರ್ ಮಧ್ಯೆ ಯಾವುದೇ ಸಮಸ್ಯೆಯಿಲ್ಲ, ನಮ್ಮಿಬ್ಬರ ಮಧ್ಯೆ ಹೊಂದಾಣಿಕೆಯಿಲ್ಲ ಎಂಬುದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.