ಲಾಕ್ ಡೌನ್ ವಿರುದ್ಧ ಗ್ರಾಮೀಣ ಪ್ರದೇಶದ ಜನತೆ ದಂಗೆ ಎದ್ದರೂ ಆಶ್ಚರ್ಯವಿಲ್ಲ: ಸಿದ್ದರಾಮಯ್ಯ

ಲಾಕ್‌ಡೌನ್ ಗೊಂದಲದ ಗೂಡಾಗಿದ್ದು, ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಇಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on: 

ಬೆಂಗಳೂರು: ಲಾಕ್‌ಡೌನ್ ಗೊಂದಲದ ಗೂಡಾಗಿದ್ದು, ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಇಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕೋವಿಡ್ ರೋಗಕ್ಕಿಂತ ಹೆಚ್ಚಾಗಿ ಇಲ್ಲಿನ ರೋಗಗ್ರಸ್ತ ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆ ಬವಣೆ ಪಡುವಂತಾಗಿದೆ. ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್‌ಡೌನ್ ಗೊಂದಲದ ಗೂಡಾಗಿದ್ದು ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಇಲ್ಲ ಎಂದು ಹೇಳಿದ್ದಾರೆ. 

ಪರಿಷ್ಕೃತ ಲಾಕ್‌ಡೌನ್ ಅನ್ವಯ ಬೆಳಿಗ್ಗೆ ಆರರಿಂದ ಹತ್ತರ ವರೆಗೆ ದಿನಸಿ, ತರಕಾರಿ, ಮೀನು-ಮಾಂಸದ ಅಂಗಡಿಗಳು ತೆರೆಯಲು ಅವಕಾಶ ನೀಡಿ ಈ ಅವಧಿಯಲ್ಲಿ ವಾಹನ ಸಂಚಾರ ಮಾತ್ರ ನಿಷೇಧಿಸಿರುವುದು ಬಿಜೆಪಿ ಸರ್ಕಾರದ ಮೂರ್ಖತನದ ನಿರ್ಧಾರ. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು 2-3 ಕಿ.ಮೀ.ದೂರದಲ್ಲಿವೆ. ಅಲ್ಲಿಂದ ಮನೆ ಸಾಮಾನುಗಳನ್ನು ಹಿರಿಯರು, ಅಶಕ್ತರು ಹೊತ್ತುಕೊಂಡು ಬರಬೇಕೇ ಮುಖ್ಯಮಂತ್ರಿಗಳೇ? ಆಯಾಸ-ಪ್ರಯಾಸದಿಂದ  ಅವರಿಗೇನಾದರೂ ಆಗಿಬಿಟ್ಟರೆ ಯಾರು ಹೊಣೆ? ಈ ಸಾಮಾನ್ಯ ಜ್ಞಾನವೂ ಆಡಳಿತ ನಡೆಸುವವರಿಗೆ ಬೇಡವೇ?

ಹೊಸ‌ ಲಾಕ್‌ಡೌನ್ ನಿಯಮಾವಳಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕು, ಎಟಿಎಂ ಆಸ್ಪತ್ರೆ ತೆರೆದಿರುತ್ತದೆ. ಆದರೆ ಅಲ್ಲಿಗೆ ಗ್ರಾಹಕರು ಮತ್ತು ಅಸ್ವಸ್ಥರು  ವಾಹನ ಬಳಸಲು ನಿಷೇಧ ಇದೆ. ಹೊಟೇಲ್‌mfನಲ್ಲಿ ಪಾರ್ಸಲ್‌ಗೆ ಅವಕಾಶ ಇದೆ. ವಾಹನ ಮಾತ್ರ ಬಳಸುವಂತಿಲ್ಲ. ಇದೆಂತಹ ತುಘಲಕ್ ಸರ್ಕಾರ? ಹೊಸ ಲಾಕ್ ಡೌನ್ ಜಾರಿಗೆ ತರಲು ಹೊರಟಿರುವ ರಾಜ್ಯದ ಆಡಳಿತಗಾರರು ಮತ್ತು ಅಧಿಕಾರಿಗಳು ಮೊದಲು ಬೆಂಗಳೂರಿನ ಹವಾನಿಯಂತ್ರಿತ ಕಚೇರಿಯಿಂದ ಹೊರಬಂದು ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯಲಿ. 

ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಅನಿವಾರ್ಯ ಆಗಿರುವುದು ನಿಜ. ಆದರೆ, ಮುಖ್ಯಮಂತ್ರಿಗಳು  ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ ಜಿಲ್ಲಾಧಿಕಾರಿಗಳಿಂದ  ವಾಸ್ತವ ಸ್ಥಿತಿಯ ವರದಿ ಪಡೆಯಬೇಕಾಗಿತ್ತು. ಇದರಿಂದ ಪೊಲೀಸರು ಮತ್ತು ಜನತೆಯ ನಡುವಿನ‌ ಸಂಘರ್ಷವನ್ನು ತಪ್ಪಿಸಿದಂತಾಗುತ್ತಿತ್ತು ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಕೊರೊನಾ ನಿಯಂತ್ರಣಕ್ಕೆ ನಾಳೆಯಿಂದ ಕಠಿಣ ಕ್ರಮಗಳನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳಿರುವುದರಿಂದ ಈಗಾಗಲೇ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ದುಡಿಯುವ ವರ್ಗಕ್ಕೆ ನೆರವಾಗುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com