ನಾಯಕತ್ವ ಬದಲಾವಣೆಗೆ 'ಕೈ' ಕಮಾಂಡ್ ಕಸರತ್ತು?: ಎದುರಾಳಿಗಳಿಗೆ ಟಕ್ಕರ್ ಕೊಡಲು ಸಿದ್ದು ತಂತ್ರ!

ಬೆಂಗಳೂರು: ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣ ಇಡೀ ಕಾಂಗ್ರೆಸ್ ಪಕ್ಷಕ್ಕೆ ಕಳಂಕವನ್ನು ತಂದಿದೆ.. ಅದರಲ್ಲೂ ರಾಜಕೀಯ ಇತಿಹಾಸದಲ್ಲಿ ಒಂದೂ ಭ್ರಷ್ಟಾಚಾರದ ಆರೋಪ ಇಲ್ಲದ ಸಿದ್ದರಾಮಯ್ಯ ಕೊರಳಿಗೆ ಮುಡಾ ಹಗರಣ ಸುತ್ತಿಕೊಂಡಿದ್ದು ಭಾರೀ ಮುಜುಗರ ತಂದಿದೆ.
ಮೇಲ್ನೋಟಕ್ಕೆ ಸಿದ್ದರಾಮಯ್ಯ ನಾನು ತಪ್ಪು ಮಾಡಿಲ್ಲ, ಬಿಜೆಪಿ ಆರೋಪಗಳು ಸುಳ್ಳು ಎಂದು ಎದೆ ತಟ್ಟಿ ಹೇಳುತ್ತಿದ್ದರೂ ಕೂಡ, ಈ ಆರೋಪ ಸಿದ್ದರಾಮಯ್ಯ ಅವರನ್ನು ದುರ್ಬಲರಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.. ಮತ್ತೊಂದೆಡೆ ಹೈಕಮಾಂಡ್ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ ಎಂದು ಬಿಂಬಿಸಿದರು ಕೂಡ ಒಳಗೊಳಗೆ ನಾಯಕತ್ವದ ಬದಲಾವಣೆ ಬಗ್ಗೆ ಲೆಕ್ಕಾಚಾರ ಹಾಕುತ್ತಿದೆ ಎಂಬ ಮಾಹಿತಿ ಇದೆ.
ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು, ತಮ್ಮ ವಿರುದ್ಧ ದಂಗೆ ಎದ್ದಿರುವ ನಾಯಕರನ್ನು ಹಣಿಯಲು ತಂತ್ರ ರೂಪಿಸಿದ್ದಾರೆಂದು ತಿಳಿದುಬಂದಿದೆ.
ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಮುಂದಾಗಿದ್ದೇ ಆದರೆ, ತಮ್ಮ ಸಚಿವ ಸಂಪುಟದಲ್ಲೇ ಇರುವ ಆಪ್ತರೊಬ್ಬರ ಹೆಸರನ್ನು ಪ್ರಸ್ತಾಪಿಸಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ಮೂಲಕ ಮುಖ್ಯಮಂತ್ರಿ ಹುದ್ದೆಗೇರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹಾದಿ ತಡೆಯಲು ತಂತ್ರ ರೂಪಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಯಾರನ್ನೇ ಆಗಲಿ ವೈಯಕ್ತಿಕವಾಗಿ ಗುರಿ ಮಾಡಬಾರದು. ಸಿದ್ದರಾಮಯ್ಯ ವರ್ಚಸ್ಸಿಗೆ ಕಳಂಕ ಹಚ್ಚುವ ಮೂಲಕ ಕಾಂಗ್ರೆಸ್ ಪಕ್ಷಕ್ಕೂ ಹಾನಿ ಮಾಡುವುದು ಬಿಜೆಪಿ ಉದ್ದೇಶ. ಯಾರೇ ಆದರೂ ಇಂದು ಇರಬಹುದು, ನಾಳೆ ಬದಲಾಗಬಹುದು. ಆದರೆ, ಪಕ್ಷ ಮುಂದುವರಿಯುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳು ಹೆಚ್ಚಾಗುವಂತೆ ಮಾಡಿದೆ.
ಹೇಳಿಕೆ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಜತೆ ಸಭೆ ನಡೆಸಿದ್ದಾರೆ.ಅಹಿಂದ ಗುಂಪಿನಲ್ಲಿರುವ ಎಸ್‌ಸಿ ಅಥವಾ ಎಸ್‌ಟಿ ನಾಯಕರೊಬ್ಬರು ಸಿಎಂ ಆಗಬೇಕೆಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. ಅಲ್ಲದೆ, ಸತೀಶ್ ಅವರು ಈ ಸಂದೇಶವನ್ನು ದೆಹಲಿ ಭೇಟಿ ನೀಡಿ ಖರ್ಗೆ ಅವರಿಗೂ ತಿಳಿಸಿದ್ದರು. ಆದರೆ, ಹೈಕಮಾಂಡ್ ಈ ಮನವಿಯನ್ನು ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಸಿದ್ದರಾಮಯ್ಯ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಅವರ ಬೆಂಬಲವಿದ್ದು, ರಾಜೀನಾಮೆ ನೀಡುವ ಸಾಧ್ಯತೆ ಇಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಾಯಕತ್ವ ಬದಲಾವಣೆ ಮಾಡಬೇಕಾದರೆ ಸಿದ್ದರಾಮಯ್ಯ ಅವರ ಸಲಹೆಗಳನ್ನು ಕೇಳಿ, ಸುಗಮ ರೀತಿಯಲ್ಲಿ ಅಧಿಕಾರ ಹಸ್ತಾಂತರಿಸಲು ಕಾಂಗ್ರೆಸ್ ಚಿಂತನೆ ಮುಂದಾಗಬಹುದು ಎಂದೂ ತಿಳಿಸಿದ್ದಾರೆ.
ಒಂದು ಹೈಕಮಾಂಡ್ ಸಿದ್ದರಾಮಯ್ಯ ಅವರ ಸಲಹೆಯನ್ನು ತೆಗೆದುಕೊಂಡಿದ್ದೇ ಆದರೆ, ಸತೀಶ್ ಜಾರಕಿಹೊಳಿಯವರು ಮುಂದಿನ ಸಿಎಂ ಆಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ದಲಿತರು ಉನ್ನತ ಹುದ್ದೆಗೆ ಈಗ ಪ್ರಯತ್ನ ಮಾಡದಿದ್ದರೆ, ಮತ್ತೆಂದೂ ಅವಕಾಶ ಸಿಗದಿರಬಹುದು. ಹೀಗಾಗಿ ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದು ಸಭೆ ನಡೆಸಿದ್ದೇವೆಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
2 ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ದೆಹಲಿಗೆ ತೆರಳಿದ್ದ ಸತೀಶ್ ಅವರು ನನಗೆ 68 ಶಾಸಕರ ಬೆಂಬಲವಿದ್ದು, ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದೇ ಆದರೆ, ಸಿಎಂ ಆಗಲು ಅರ್ಹನಿರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದರು ಎಂದು ಕಾಂಗ್ರೆಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಆದರೆ, ಖರ್ಗೆಯವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಅವರು, ರಾಜಕೀಯ ವಿಚಾರದ ಬಗ್ಗೆ ಚರ್ಚಿಸಿದ್ದೇವೆಂದು ಹೇಳಿ, ವಿವರಗಳನ್ನು ಬಹಿರಂಗಪಡಿಸಲಿಲ್ಲ.
ಪಕ್ಷದ ನಾಯಕ್ವತ ಕೂಡ ಸತೀಶ್ ಅವರ ಜನಪ್ರಿಯತೆ, ಶಾಸಕರು ಹಾಗೂ ಹಿಂದುಳಿದ ಸಮುದಾಯಗಳ ಬೆಂಬಲವನ್ನು ಗಮನಿಸಿದರೆ ಸಿಎಂ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಹಿಂದಿಕ್ಕಬಹುದು ಎಂದು ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಶನಿವಾರ ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದ್ದಾರೆ.
ಪಕ್ಷದ ನಾಯಕರು ಪಕ್ಷದ ಅಧ್ಯಕ್ಷರನ್ನು ಹೊರತುಪಡಿಸಿ ಬೇರೆ ಯಾರನ್ನು ಭೇಟಿ ಮಾಡಬೇಕು? ನಾವು ಮಾಧ್ಯಮಗಳೊಂದಿಗೆ ಸಂಬಂಧ ಹೊಂದಿರುವಂತೆ ನಮ್ಮ ನಾಯಕರು ನಮ್ಮ ಅಧ್ಯಕ್ಷರೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ನಾನು ಪ್ರತಿ ಬಾರಿ ದೆಹಲಿಗೆ ಭೇಟಿ ನೀಡಿದಾಗಲೂ ನಮ್ಮ ಅಧ್ಯಕ್ಷರನ್ನು ಭೇಟಿಯಾಗುತ್ತೇನೆ. ನಾನು ಪ್ರತಿದಿನ ಅವರೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷದ ಬೆಳವಣಿಗೆಗಳ ಕುರಿತು ವರದಿ ನೀಡುತ್ತಿರುತ್ತೇನೆಂದು ತಿಳಿಸಿದ್ದಾರೆ.
ಅಕ್ಟೋಬರ್ 15 ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ. ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು. ಈ ಸಮಯದಲ್ಲಿ ನಾನು ದೆಹಲಿಗೆ ಹೋಗುವ ಅಗತ್ಯವೂ ಇಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




