ಸಿದ್ದರಾಮಯ್ಯ ಇಂದು ಇರಬಹುದು ನಾಳೆ ಇಲ್ಲದೆ ಇರಬಹುದು: ನಾಯಕತ್ವ ಬದಲಾವಣೆ ವಿಚಾರಕ್ಕೆ ಪುಷ್ಠಿ ನೀಡಿದ ಖರ್ಗೆ ಹೇಳಿಕೆ..!

ಯಾರನ್ನೇ ಆಗಲಿ ವೈಯಕ್ತಿಕವಾಗಿ ಗುರಿ ಮಾಡಬಾರದು. ಸಿದ್ದರಾಮಯ್ಯ ವರ್ಚಸ್ಸಿಗೆ ಕಳಂಕ ಹಚ್ಚುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೂ ಹಾನಿ ಮಾಡುವುದು ಬಿಜೆಪಿ ಉದ್ದೇಶ. ಯಾರೇ ಆದರೂ ಇಂದು ಇರಬಹುದು, ನಾಳೆ ಬದಲಾಗಬಹುದು. ಆದರೆ, ಪಕ್ಷ ಮುಂದುವರಿಯುತ್ತದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on: 

ಬೆಂಗಳೂರು: ಸಿದ್ದರಾಮಯ್ಯ ಇಂದು ಇರಬಹುದು, ನಾಳೆ ಇಲ್ಲದೆ ಇರಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆಯು ನಾಯಕತ್ವ ಬದಲಾವಣೆಯಾಗುವ ಕುರಿತು ಊಹಾಪೋಹಗಳು ಹೆಚ್ಚಾಗುವಂತೆ ಮಾಡಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಯಾರನ್ನೇ ಆಗಲಿ ವೈಯಕ್ತಿಕವಾಗಿ ಗುರಿ ಮಾಡಬಾರದು. ಸಿದ್ದರಾಮಯ್ಯ ವರ್ಚಸ್ಸಿಗೆ ಕಳಂಕ ಹಚ್ಚುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೂ ಹಾನಿ ಮಾಡುವುದು ಬಿಜೆಪಿ ಉದ್ದೇಶ. ಯಾರೇ ಆದರೂ ಇಂದು ಇರಬಹುದು, ನಾಳೆ ಬದಲಾಗಬಹುದು. ಆದರೆ, ಪಕ್ಷ ಮುಂದುವರಿಯುತ್ತದೆ. ಮುಡಾ ಪ್ರಕರಣದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿಲ್ಲ. ದೋಷಿ ಎಂದೂ ಕೂಡ ತೀರ್ಮಾನವಾಗಿಲ್ಲ. ಆದರೂ ಪ್ರತಿದಿನ ಈ ಕುರಿತೇ ಹೆಚ್ಚು ಚರ್ಚೆಯಾಗುತ್ತಿದೆ. ಈ ಮೂಲಕ ಕಾಂಗ್ರೆಸ್‌‍ ಪಕ್ಷದ ವರ್ಚಸ್ಸನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ.

ಈ ಹಿಂದೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾ ಹತ್ಯಾಕಾಂಡ ನಡೆದಿತ್ತು. ಆ ವೇಳೆ ಅವರು ರಾಜೀನಾಮೆ ನೀಡಿದ್ದರೇ? ಅಮಿತ್ ಶಾ ವಿರುದ್ಧವೂ ಹಲವು ಪ್ರಕರಣಗಳು ಬಾಕಿ ಇದ್ದವು. ಅವರೂ ಕೂಡ ರಾಜೀನಾಮೆ ನೀಡಿರಲಿಲ್ಲ. ಬಿಜೆಪಿಯವರು ಯಾವುದೋ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಕಾನೂನು ತನ್ನ ನಿರ್ಧಾರವನ್ನು ತೆಗೆದುಕೊಳ್ಳಲಿ. ಆ ಸಂದರ್ಭ ಎದುರಾದಾಗ ನಾವು ಪರಿಶೀಲನೆ ನಡೆಸುತ್ತೇವೆ. ಈಗ ಏನೂ ಇಲ್ಲ. ಆದರೂ ಪ್ರತಿದಿನ ಮುಡಾ … ಮುಡಾ… ಎಂದು ಚರ್ಚೆಗಳಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಅನುಮಾನಗಳು ಹೆಚ್ಚಾಗತೊಡಗಿವೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು.

ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಇಂದು ಇರಬಹುದು ನಾಳೆ ಇಲ್ಲದೆ ಇರಬಹುದು! ಪಕ್ಷ ಮುಂದುವರಿಯುತ್ತದೆ: ಕುತೂಹಲ ಮೂಡಿಸಿದ ಖರ್ಗೆ ಹೇಳಿಕೆ

ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ನಂತರ, ಸಿದ್ದರಾಮಯ್ಯ ಅವರು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಈ ವೇಳೆ ಪ್ರತಿಪಕ್ಷಗಳಿಂದಲೂ ಹೆಚ್ಚಿನ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲದೆ, ಪಕ್ಷದೊಳಗಿನ ಕೆಲವರಿಂದಲೂ ರಾಜೀನಾಮೆಗೆ ಒತ್ತಡಗಳು ಹೆಚ್ಚಾಗಬಹುದು ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಆದರೆ, ಸದ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಪಕ್ಷದ ಹಿತಕ್ಕಾಗಿ ನಿರ್ಣಯಗಳು ಅನಿವಾರ್ಯವಾಗಬಹುದು ಎಂಬ ಗೊಂದಲ ಹೇಳಿಕೆಯನ್ನು ನೀಡಿದ್ದಾರೆ.

ಈ ನಡುವೆ ಕುತೂಹಲವೆಂಬಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಅವರ ಬೆಂಬಲವನ್ನು ಹೊಂದಿರುವ ಸಿದ್ದರಾಮಯ್ಯ ಅವರು, ಶುಕ್ರವಾರ ಬೆಂಗಳೂರಿನಲ್ಲಿ ಖರ್ಗೆ ಅವರಿದ್ದರೂ, ಭೇಟಿಯಾಗಿರಲಿಲ್ಲ. ಡಿಕೆ.ಶಿವಕುಮಾರ್ ಅವರೂ ಕೂಡ ಭೇಟಿಯಾಗದೇ ಇರುವುದು ಊಹಾಪೋಹಗಳಿಗೆ ಕಾರಣವಾಗಿದೆ.

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದೇ ಆದರೆ, ಪಕ್ಷದ ವರ್ಚಸ್ಸಿಗೆ ಧಕ್ಕೆ ಬಾರದಿರುವ ಕುರಿತು ಈಗಾಗಲೇ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದ್ದು, ಈ ಕಾರಣದಿಂದಲೇ ಇಬ್ಬರೂ ನಾಯಕರು ಖರ್ಗೆಯವರನ್ನು ಭೇಟಿಯಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಈ ನಡುವೆ ಮುಡಾ ಪ್ರಕರಣದ ದೂರುದಾರರಲ್ಲಿ ಒಬ್ಬರುಾಗಿರುವ ಸ್ನೇಹಮಯಿ ಕೃಷ್ಣ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com