ದಾವಣಗೆರೆ: 'ಸಮರ್ಥ್ ಸೋಲಿಸಲು ಕಾಂಗ್ರೆಸ್ ನಿಂದಲೇ ಸಂಚು'; ಮುಸ್ಲಿಂ ನಾಯಕರಿಂದ ಸ್ಫೋಟಕ ಹೇಳಿಕೆ

“ನಮ್ಮದೇ ಪಕ್ಷದ ಕೆಲ ಹಿರಿಯ ನಾಯಕರು ಕಾಂಗ್ರೆಸ್‌ನ್ನು ಸೋಲಿಸಲು ಸಂಚು ರೂಪಿಸಿರುವುದು ದುಃಖಕರ. ಇದ್ರಲ್ಲೂ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.
Congress leaders with Davanagere South bypoll candidate samarth mallikarjun
ದಾವಣಗೆರೆ ದಕ್ಷಿಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಜೊತೆ ಕಾಂಗ್ರೆಸ್ ನಾಯಕರುonline desk
Updated on

ಬೆಂಗಳೂರು: ದಾವಣಗೆರೆ ಕಾಂಗ್ರೆಸ್‌ನೊಳಗಿನ ಭಿನ್ನಮತ ಬಹಿರಂಗಗೊಂಡಿದೆ.

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದ ಒಂದು ದಿನದ ನಂತರ, ಪಕ್ಷದ ಕೆಲ ಮುಸ್ಲಿಂ ನಾಯಕರು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಲು ತಮ್ಮದೇ ಪಕ್ಷದ ಹಿರಿಯ ನಾಯಕರು ‘ಸಂಚು’ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಕಾಂಗ್ರೆಸ್ ಮುಸ್ಲಿಮರನ್ನು ‘ವಂಚಿಸಿದೆ’ ಎಂಬ ಭಾವನೆ ಮೂಡಿಸಲು ಕೆಲವರು ಯತ್ನಿಸಿದರೂ, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಮಲ್ಲಿಕಾರ್ಜುನ್ ಗೆಲುವು ಸಾಧಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಪ್ರಭಾವ ಗಮನಾರ್ಹವಾಗಿದೆ. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರು ರಿಜ್ವಾನ್ ಅರ್ಶದ್, ಯಾಸಿರ್ ಅಹ್ಮದ್ ಖಾನ್ ಪಠಾಣ್, ವಿಧಾನ ಪರಿಷತ್ ಸದಸ್ಯೆ ಬಿಲ್ಕಿಸ್ ಬಾನೋ ಹಾಗೂ ಇತರ ಕಾಂಗ್ರೆಸ್ ನಾಯಕರು ಈ ಕುರಿತು ಪಕ್ಷ ಕಚೇರಿಯಲ್ಲಿ ಸಂಯುಕ್ತ ಪತ್ರಿಕಾಗೋಷ್ಠಿ ನಡೆಸಿದರು.

“ನಮ್ಮದೇ ಪಕ್ಷದ ಕೆಲ ಹಿರಿಯ ನಾಯಕರು ಕಾಂಗ್ರೆಸ್‌ನ್ನು ಸೋಲಿಸಲು ಸಂಚು ರೂಪಿಸಿರುವುದು ದುಃಖಕರ. ಇದ್ರಲ್ಲೂ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಈ ವಿಷಯ ತಿಳಿದಿದೆ. ಜನರು ಕಾಂಗ್ರೆಸ್‌ಗೆ, ಅದರ ತತ್ವಕ್ಕೆ ಮತ್ತು 5 ಭರವಸೆ ಯೋಜನೆಗಳಿಗೆ ಮತ ನೀಡಿದ್ದಾರೆ,” ಎಂದು ಅಹ್ಮದ್ ಹೇಳಿದರು.

ಸಮರ್ಥ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡುವ ಮೊದಲು ಪಕ್ಷದ ಎಲ್ಲಾ ಅಲ್ಪಸಂಖ್ಯಾತ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಒಪ್ಪಿಗೆಯ ಮೇರೆಗೆ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು. “ಆದರೆ ನಂತರ ಕೆಲವು ತಪ್ಪು ಕಲ್ಪನೆಗಳ ಹಿನ್ನೆಲೆಯಲ್ಲಿ ಸಂಚುಗಳು ನಡೆಯಿತು. ಆದರೂ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಗೆಲ್ಲುವರೆಂಬ ವಿಶ್ವಾಸ ನನಗಿದೆ,” ಎಂದರು. ಪಕ್ಷದ ಮೂಲಗಳ ಪ್ರಕಾರ, ದಾವಣಗೆರೆ ದಕ್ಷಿಣದಲ್ಲಿ ನಡೆಯುತ್ತಿರುವ ‘ಆಂತರಿಕ ಭಿನ್ನಮತದ’ ಕುರಿತು ಈ ಮುಸ್ಲಿಂ ನಾಯಕರು ಎಐಸಿಸಿ ಮತ್ತು ರಾಜ್ಯ ನಾಯಕತ್ವಕ್ಕೂ ದೂರು ನೀಡಿದ್ದಾರೆ.

ಆರೋಪ ಮಾಡುತ್ತಿರುವ ನಾಯಕರ ಗುರಿ ಯಾರು ಎಂಬುದನ್ನು ಅವರು ನೇರವಾಗಿ ಹೇಳದಿದ್ದರೂ, ಪಕ್ಷದ ಹಲವಾರು ಮೂಲಗಳು ಅವರ ಅಸಮಾಧಾನ ವಸತಿ ಸಚಿವ ಬಿ.ಝೆಡ್ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಕೆಲವರತ್ತ ಇದೆ ಎಂದು ಹೇಳುತ್ತಿವೆ. ದಾವಣಗೆರೆ ದಕ್ಷಿಣಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಖಾನ್ ಬಹಿರಂಗವಾಗಿ ಒತ್ತಾಯಿಸಿದ್ದರು. ನಂತರ ಅವರು ಕೇರಳ ಚುನಾವಣಾ ಜವಾಬ್ದಾರಿಯನ್ನು ಉಲ್ಲೇಖಿಸಿ, ಆರಂಭದಲ್ಲಿ ಈ ಕ್ಷೇತ್ರದ ಪ್ರಚಾರದಿಂದ ದೂರ ಉಳಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವಿಯ ಮೇರೆಗೆ, ಸಮರ್ಥ್ ತಂದೆ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

Congress leaders with Davanagere South bypoll candidate samarth mallikarjun
ಶಾಮನೂರು ಭದ್ರಕೋಟೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಬಲ ಪ್ರದರ್ಶನವೋ? 'ಸಮರ್ಥ್' ಸಾಮರ್ಥ್ಯ ದರ್ಶನವೋ?

ಶಾಸಕ ರಿಜ್ವಾನ್ ಅರ್ಶದ್ ಅವರ ಪ್ರಕಾರ, ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ‘ವಂಚಿಸಿದೆ’ ಎಂಬ ಆರೋಪದ ಆಧಾರದ ಮೇಲೆ ಬಿಜೆಪಿ, ಎಸ್‌ಡಿಪಿಐ ಮತ್ತು ಸ್ವತಂತ್ರ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ನಡೆಸಿದರು. ಪಕ್ಷದೊಳಗಿನ ಕೆಲವರು ಕೂಡ ಇದೇ ಭಾವನೆಯನ್ನು ಬಲಪಡಿಸಲು ಪ್ರಯತ್ನಿಸಿದರು. “ನಾವು ನಿಜವಾಗಿಯೂ ಅಲ್ಪಸಂಖ್ಯಾತರಿಗೆ ಟಿಕೆಟ್ ಬೇಡಿಕೊಂಡಿದ್ದೇವೆ, ಪಕ್ಷವೂ ಅದನ್ನು ಪರಿಗಣಿಸಿತು. ಆದರೆ ಅಲ್ಪಸಂಖ್ಯಾತ ನಾಯಕರಾದ ನಾವು ಒಗ್ಗಟ್ಟಿನ ಅಭ್ಯರ್ಥಿಯನ್ನು ಸೂಚಿಸಬೇಕಾಗಿತ್ತು. ಆ ಸಂದರ್ಭದಲ್ಲಿ ಆ ಪ್ರದೇಶದ ವಿಧಾನ ಪರಿಷತ್ ಸದಸ್ಯರಾಗಿರುವ ಅಬ್ದುಲ್ ಜಬ್ಬಾರ್ ಅವರೇ ಒತ್ತಡ ಹೇರಿದ ಕಾರಣ, ಅವರ ಹೆಸರನ್ನೇ ನಾವು ಮುಂದಿಟ್ಟೆವು. ಇಲ್ಲಿ ನಾವು ಮೊದಲ ತಪ್ಪು ಮಾಡಿದ್ದೇವೆ ಎಂದು ನನಗೆ ಅನಿಸುತ್ತದೆ, ಏಕೆಂದರೆ ಕಾರ್ಯಕರ್ತರು ಅವರನ್ನು ಒಪ್ಪಲಿಲ್ಲ, ಕೆಲ ನಾಯಕರು ಅವರ ಜನಪ್ರಿಯತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದರು,” ಎಂದು ಹೇಳಿದ್ದಾರೆ.

ಅರ್ಶದ್ ಅವರ ಪ್ರಕಾರ, ಎಲ್ಲಾ ಅಂಶಗಳನ್ನು ಪರಿಶೀಲಿಸಿ, ಎಲ್ಲಾ ಮುಸ್ಲಿಂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಪಕ್ಷವು ಅಂತಿಮವಾಗಿ ಸಮರ್ಥ ಮಲ್ಲಿಕಾರ್ಜುನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತು. “ಆದರೂ ಪಕ್ಷದ ಅಧಿಕೃತ ಅಭ್ಯರ್ಥಿಗಾಗಿ ಕೆಲಸ ಮಾಡಿದ ನಮ್ಮ ಕೆಲ ಮುಸ್ಲಿಂ ನಾಯಕರನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ವಿರೋಧಿಗಳಂತೆ ಚಿತ್ರಿಸಲಾಯಿತು,” ಎಂದು ಅವರು ದೂರಿದರು.

Congress leaders with Davanagere South bypoll candidate samarth mallikarjun
ರಾಜ್ಯದಲ್ಲಿ ಚುನಾವಣಾ ಪರ್ವ: ಬೈಎಲೆಕ್ಷನ್ ಬೆನ್ನಲ್ಲೇ ಸಾಲುಸಾಲು ಚುನಾವಣೆ? ರಣತಂತ್ರದೊಂದಿಗೆ ಮೂರು ಪಕ್ಷಗಳು ಸಜ್ಜು!

ಅಭ್ಯರ್ಥಿ ಆಯ್ಕೆ ಕುರಿತು ನಡೆದ ಸಭೆಯಲ್ಲಿ ಸಮರ್ಥ್ ಹೆಸರನ್ನು ಒಪ್ಪಿಕೊಂಡಿದ್ದ ಕೆಲ ನಾಯಕರು ನಂತರ ಪರೋಕ್ಷ ವಿರೋಧ ತೋರಿದರೆಂದು ಅವರು ಹೇಳಿದರು. “ಕಾಂಗ್ರೆಸ್ ಮುಸ್ಲಿಮರನ್ನು ವಂಚಿಸಿದೆ ಎಂಬ ಭಾವನೆ ಮೂಡಿಸಲು, ಪಕ್ಷದೊಳಗಿನ ಕೆಲವರನ್ನೂ ಒಳಗೊಂಡಂತೆ, ಇತರರು ಪ್ರಯತ್ನಿಸಿದರು. ಇದು ನಮಗೆ ನೋವುಂಟುಮಾಡಿದೆ,” ಎಂದರು. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಗುರುವಾರ ಉಪಚುನಾವಣೆ ನಡೆದಿತ್ತು. ದಾವಣಗೆರೆ ದಕ್ಷಿಣದ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಬಾಗಲಕೋಟೆಯ ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ಈ ಚುನಾವಣೆ ಅಗತ್ಯವಾಯಿತು.

ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಸಮುದಾಯದ ಅಸಮಾಧಾನ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಸ್ಪರ್ಧೆಯಲ್ಲಿರುವ 25 ಅಭ್ಯರ್ಥಿಗಳಲ್ಲಿ 14 ಮಂದಿ ಮುಸ್ಲಿಂ ಸಮುದಾಯದವರಾಗಿರುವುದರಿಂದ, ಮತ ವಿಭಜನೆಯ ಭೀತಿ ಪಕ್ಷದೊಳಗೆ ಇದೆ; ಇದು ಬಿಜೆಪಿಗೆ ಲಾಭವಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಪ್ರಭಾವ ಹೆಚ್ಚಿರುವುದರಿಂದ, ದಾವಣಗೆರೆ ದಕ್ಷಿಣಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂಬ ಅವರ ಒತ್ತಾಯ ತೀವ್ರವಾಗಿತ್ತು. ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುವುದನ್ನು ಪಕ್ಷದ ಕೆಲವು ಗುಂಪುಗಳು ವಿರೋಧಿಸಿದ್ದವು. ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಯಲು ಕಾಂಗ್ರೆಸ್ ಮನವೊಲಿಸಿದರೂ, ನಾಮಪತ್ರ ಹಿಂಪಡೆಯುವ ಗಡುವು ಮುಗಿದ ನಂತರ ಅವರು ಹಿಂದೆ ಸರಿದ ಕಾರಣ, ಅವರು ಕಣದಲ್ಲೇ ಉಳಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com