ದಾರಿ ತಪ್ಪಿದೆ!

ಸುತ್ತಮುತ್ತಲಿನ ದಾರಿಗಳನ್ನು, ವಸ್ತುಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗದೇ ಗೊಂದಲಕ್ಕೀಡಾಗುವ...
ದಾರಿ ತಪ್ಪಿದೆ!
Updated on: 

ರೀನಾ ಒಂದು ವರ್ಷದಿಂದ ಬೆಂಗಳೂರಿನ ಅಪಾರ್ಟ್‌ಮೆಂಟೊಂದರಲ್ಲಿ ವಾಸಿಸುತ್ತಿದ್ದಾಳೆ. ಆದರೆ ಪ್ರತಿ ಬಾರಿಯೂ ಹೊರಗೆ ಹೋಗಿ ವಾಪಸಾಗುವಾಗ ಆಕೆಗೆ ಮನೆಯೇ ದಾರಿ ನೆನಪಾಗುವುದಿಲ್ಲ. ಯಾವುದೋ ಕ್ರಾಸ್‌ಗೆ ಹೋಗಬೇಕಾದವಳು ಮತ್ತ್ಯಾವುದೋ ಗಲ್ಲಿಯೊಳಗೆ ನುಗ್ಗುತ್ತಾಳೆ...
ಇದು ಹೇಗೆ ಸಾಧ್ಯ? ಒಂದು ವರ್ಷದಿಂದ ಅಲ್ಲಿರುವವಳಿಗೆ ಅವಳ ಮನೆಯ ದಾರಿಯೇ ತಪ್ಪಿಹೋಗುತ್ತದೆಂದರೆ ನಂಬುವ ವಿಚಾರವೇ? ಈ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ಇದೊಂದು ಮಾನಸಿಕ ಸಮಸ್ಯೆ. ಸುತ್ತಮುತ್ತಲಿನ ದಾರಿಗಳನ್ನು, ವಸ್ತುಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗದೇ ಗೊಂದಲಕ್ಕೀಡಾಗುವ ಸಮಸ್ಯೆಯನ್ನು ಡೆವಲಪ್‌ಮೆಂಟಲ್ ಟೋಪೋಗ್ರಾಫಿಕಲ್ ಡಿಸ್‌ಒರಿಯಂಟೇಷನ್ (ಡಿಟಿಡಿ) ಎನ್ನುತ್ತಾರೆ.

ದುರ್ಬಲ ನೆಲೆಯರಿವು...
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕೂಡಲೇ ಬಾತ್‌ರೂಂಗೆ ಹೋಗಲು ಮಂಚದಿಂದ ಏಳುತ್ತೀರಿ. ಸುತ್ತಲೂ ಕಗ್ಗತ್ತಲಿದ್ದರೂ ಸ್ವಲ್ಪವೂ ತಪ್ಪದೇ ಬಾತ್‌ರೂಂ ಕಡೆ ಹೆಜ್ಜೆಹಾಕುತ್ತೀರಿ. ಸರಿಯಾಗಿ ಸ್ವಿಚ್ ಬೋರ್ಡ್ ಕಡೆಗೇ ನಿಮ್ಮ ಕೈ ಹೋಗುತ್ತದೆ. ಲೈಟ್ ಆನ್ ಮಾಡಿ ಒಳ ಹೋಗುತ್ತೀರಿ. ಇದು ಹೇಗೆ ಸಾಧ್ಯವಾಗುತ್ತದೆ? ಇದಕ್ಕೆ ಕಾರಣ ನಿಮ್ಮ ನೆಲೆಯರಿವು. ಅಂದರೆ ಮೊದಲೇ ನೋಡಿರುವಂಥ ಒಂದು ಪ್ರದೇಶಕ್ಕೆ ಹೋಗಲು ನಿಮ್ಮ ಮನಸ್ಸು ಕಂಡುಕೊಂಡಿರುವ ಸಾಮರ್ಥ್ಯ. ಇಲ್ಲಿ ಬಾತ್‌ರೂಂ ನಿಮ್ಮ ಮನಸ್ಸಲ್ಲಿ ಹೇಗೆ ಫೀಡ್ ಆಗಿರುತ್ತದೆಂದರೆ ಕರೆಂಟ್ ಇಲ್ಲದಿದ್ದರೂ ನೀವು ನೇರವಾಗಿ ಅಲ್ಲಿಗೆ ಹೋಗುತ್ತೀರಿ. ಅಂಥ ಸಾಮರ್ಥ್ಯ ಇಲ್ಲದವರೇ ರೀನಾಳಂತೆ ದಾರಿ ತಪ್ಪುವುದು. ಅವರ ನೆಲೆಯರಿವು ದುರ್ಬಲವಾಗಿರುತ್ತದೆ. ಆದರೆ, ಈ ಡಿಟಿಡಿ ಸಮಸ್ಯೆ ಇರುವವರು ದಿನಾ ನೋಡಿರುವ ಸ್ಥಳಗಳನ್ನೇ ಮರೆತುಬಿಡುತ್ತಾರೆ. ಅವರ ಮೆದುಳಿಗಾಗಲೀ ಅಥವಾ ನರವ್ಯವಸ್ಥೆಗಾಗಲೀ ಯಾವುದೇ ಹಾನಿಯಾಗಿರುವುದಿಲ್ಲ. ಮರೆಗುಳಿ ರೋಗವೂ ಇರುವುದಿಲ್ಲ. ಆದರೂ ಸಮಸ್ಯೆ ಕಾಡುತ್ತಿರುತ್ತದೆ. ಈ ರೀತಿಯಾದಾಗ ಆ ವ್ಯಕ್ತಿಯ ಮನಸ್ಸಿನಲ್ಲಿ ಎಂಥ ಆಲೋಚನೆಗಳು ಬರುತ್ತವೆ ಎಂಬ ಬಗ್ಗೆ ಅಧ್ಯಯನಗಳು ಆರಂಭವಾಗಿವೆ.

ಸಂವೇದನಾ ನಕ್ಷೆ
ಇಲ್ಲಿ ರೀನಾ ತನ್ನ ನೆಲೆಯರಿವು ಸಾಮರ್ಥ್ಯ ಕಳೆದುಕೊಂಡಿದ್ದಾಳೆ. ಅಂದರೆ, ಸಂವೇದನಾ ನಕ್ಷೆಯನ್ನು ರಚಿಸಲು ಅಸಮರ್ಥಳಾಗಿದ್ದಾಳೆ. ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಮನಸ್ಸಿನಲ್ಲಿಯೇ ಒಂದು ನಕ್ಷೆ ರಚಿಸಿರುತ್ತೇವೆ. ಅದನ್ನು ನೆನಪಲ್ಲಿಟ್ಟುಕೊಂಡು, ಮನಸ್ಸಿನಲ್ಲಿಯೇ ಆ ಪ್ರದೇಶಗಳನ್ನು ಫೀಡ್ ಮಾಡಿಟ್ಟುಕೊಂಡು ಮುಂದಿನ ಬಾರಿ ಬಂದಾಗ ಅದನ್ನು ಬಳಸಿ ದಾರಿ ಕಂಡುಕೊಳ್ಳುತ್ತೇವೆ. ಈ ನಕ್ಷೆ ಫೀಡ್ ಮಾಡಲು ಬಳಸುವ ಮೆದುಳಿನ ಪ್ರದೇಶವನ್ನು ಹಿಪ್ಪೋಕ್ಯಾಂಪಸ್ ಎನ್ನುತ್ತೇವೆ. ಕಿವಿಯ ಮೇಲ್ಭಾಗದಲ್ಲಿ ಮೆದುಳಿನ ಎರಡೂ ಬದಿಯಲ್ಲಿ ಇದು ಇರುತ್ತದೆ. ಇದರ ಪ್ರಾಮುಖ್ಯತೆಯನ್ನು ಕಂಡುಕೊಂಡಿದ್ದು ಹೇಗೆ ಗೊತ್ತೇ? ಟ್ಯಾಕ್ಸಿ ಚಾಲಕರ ಮೂಲಕ.

ಟ್ಯಾಕ್ಸಿ ಚಾಲಕರ ಹಿಪ್ಪೋಕ್ಯಾಂಪಸ್ ಸ್ಕ್ಯಾನ್
1990ರಲ್ಲಿ ಯುನಿವರ್ಸಿಟಿ ಕಾಲೇಜ್ ಲಂಡನ್‌ನ ವಿಜ್ಞಾನಿಗಳು ಅಲ್ಲಿನ ಟ್ಯಾಕ್ಸಿ ಚಾಲಕರ ಮೆದುಳಿನ ಮೂಲಕ ಅಧ್ಯಯನ ಕೈಗೊಂಡರು. ಅವರ ಮೆದುಳಿನಲ್ಲಿನ ಹಿಪ್ಪೋಕ್ಯಾಂಪಸ್ ಅನ್ನು ಸ್ಕ್ಯಾನ್ ಮಾಡಲಾಯಿತು. ವಿಚಿತ್ರವೆಂದರೆ, ಅವರ ಹಿಪ್ಪೋಕ್ಯಾಂಪಸ್ ಅಸಾಮಾನ್ಯವಾಗಿ ಬೆಳೆದಿತ್ತು. ನಗರದ ಗೊಂದಲಮಯ ರಸ್ತೆಗಳಲ್ಲಿರುವ ಪ್ರತಿ ಸ್ಥಳಗಳ ನಕ್ಷೆಯನ್ನೂ ಅವರು ಸ್ಟೋರ್ ಮಾಡಿಟ್ಟುಕೊಂಡಿದ್ದೇ ಇದಕ್ಕೆ ಕಾರಣ ಎಂಬುದನ್ನು ಕಂಡುಕೊಳ್ಳಲಾಯಿತು.

ನಿರ್ಲಕ್ಷ್ಯವೂ ಕಾರಣ
ದಾರಿ ತಪ್ಪಿದಾಗ ವ್ಯಕ್ತಿಯು ಗೊಂದಲಕ್ಕೀಡಾಗುತ್ತಾನೆ. ಆತ ತಾನು ಹೋಗಬೇಕಾದ ದಾರಿಯಲ್ಲಿ ನದಿಯಿತ್ತೇ, ಲೈಟ್ ಕಂಬವಿತ್ತೇ, ಹೋಟೆಲ್ ಇತ್ತೇ, ಬೆಟ್ಟವಿತ್ತೇ ಎಂಬುದನ್ನು ನೆನಪಿಸಿಕೊಳ್ಳುವ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಾನೆ. ಹೆಚ್ಚಾಗಿ ಆತ ಈ ಎಲ್ಲ ಪ್ರಮುಖ ಲ್ಯಾಂಡ್‌ಮಾರ್ಕ್‌ಗಳ ಬಗ್ಗೆ ಗಮನ ಹರಿಸಿಯೇ ಇರುವುದಿಲ್ಲ. ಮತ್ತೆ ಕೆಲವು ಸಂದರ್ಭಗಳಲ್ಲಿ ದಾರಿ ತಪ್ಪಿದ ವ್ಯಕ್ತಿಯು ತನ್ನೆದುರೇ ಸರಿಯಾದ ದಾರಿಯಿದ್ದರೂ, ಅದಕ್ಕೆ ಪೂರಕವಾದ ಅಂಶಗಳು ಕಂಡುಬಂದರೂ ಮತ್ತೊಂದು ದಾರಿಯಲ್ಲಿ ಸಾಗುತ್ತಾನೆ. ಆತನ ಮನಸ್ಸು ಹೇಗೆ ಹೇಳುತ್ತದೋ ಅದನ್ನೇ ಕೇಳುತ್ತಾನೆ ಎನ್ನುವುದು ವಿಜ್ಞಾನಿಗಳ ವಾದ. ಆ ದಾರಿ ತಪ್ಪಿದ ಲೋಕದಲ್ಲಿ ನಾವೂ ಒಂದು ಸುತ್ತು ಹೊಡೆಯೋಣ...

ನಿಸರ್ಗ ಛಾಯಾಗ್ರಾಹಕರಾಗಿ...
ಬೇಟೆಗಾರರು ಮತ್ತು ಟ್ರ್ಯಾಕರ್‌ಗಳು ಹೆಚ್ಚಾಗಿ ಒಂದು ಕಡೆ ಹೋದರೆ ದಾರಿ ತಪ್ಪುವುದು ಬೇಗ. ನಿಸರ್ಗ ಛಾಯಾಗ್ರಾಹಕರು ಮತ್ತು ಕಾಲ್ನಡಿಗೆಯಲ್ಲಿ ತೆರಳುವವರು ಅಷ್ಟು ಬೇಗ ದಾರಿ ತಪ್ಪುವುದಿಲ್ಲ ಎನ್ನುತ್ತಾರೆ 'ನಾಪತ್ತೆ ತಜ್ಞ ಪ್ರೊ. ಕೆನ್ ಹಿಲ್. ಫೋಟೋಗ್ರಫಿಯಂಥ ಹವ್ಯಾಸಗಳು ನಿಮ್ಮನ್ನು ಪರಿಸರೀಯ ಕ್ಲೂಗಳ ಮೇಲೆ ಫೋಕಸ್ ಮಾಡಿಸುತ್ತವೆ. ಹಾಗಾಗಿ ಅಂಥವರಿಗೆ ದಾರಿ ತಪ್ಪುವುದಿಲ್ಲ.

ತೊರೆಗಳ ಜಾಡಿನಲ್ಲಿ...
ತೊರೆ, ಹಳ್ಳಗಳ ನೀರು ಎತ್ತ ಕಡೆ ಮುಖಮಾಡಿ ಹರಿಯುತ್ತವೆಯೋ ಆ ಕಡೆ ಹೋದರೆ ಜನವಸತಿ ಪ್ರದೇಶ ಸಿಗುತ್ತದೆ ಎಂಬ ನಂಬಿಕೆ ಸುಳ್ಳು. ಹಾಗಾಗಿ ನದಿಯನ್ನು ನಂಬಿಕೊಂಡು ಹೋದರೆ ಯಾವುದೇ ಜಲಪಾತ ತಲುಪುತ್ತೀರಿ.
ಮನಸ್ಸನ್ನೇ ಪ್ರಶ್ನಿಸಿ...
ದಾರಿ ತಪ್ಪಿಹೋದಾಗ ಸಂಪೂರ್ಣವಾಗಿ ಮನಸ್ಸನ್ನೇ ಅವಲಂಬಿಸದಿರಿ ಎನ್ನುತ್ತಾರೆ ನರರೋಗ ತಜ್ಞರು. ನಿಮ್ಮ ಮನಸ್ಸು ಹೇಳುತ್ತಿರುವುದಕ್ಕೂ, ಸುತ್ತಲಿನ ಪ್ರದೇಶದಲ್ಲಿ ಕಾಣುವ ವಸ್ತುಗಳಿಗೂ ವಿರೋಧಾಭಾಸ ಇದ್ದರೆ ಮನಸ್ಸಿನ ಮಾತು ಕೇಳಬೇಡಿ. ಹೊರಗೆ ಕಾಣುತ್ತಿರುವ ವಸ್ತುಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಿ.

ಮೂರರ ರೂಲ್
ಒಂದು ಪ್ರದೇಶಕ್ಕೆ ಹೋದಾಗ ಮೂರರ ರೂಲ್ ಪಾಲಿಸಿ. ಅಂದರೆ, ಅಲ್ಲಿರುವ ಮೂರು ಲ್ಯಾಂಡ್‌ಮಾರ್ಕ್‌ಗಳನ್ನು ಗುರುತಿಸಿಕೊಳ್ಳಿ. ಹೋಟೆಲ್, ಬ್ಯಾಂಕ್, ಸಿನಿಮಾ ಥಿಯೇಟರ್ ಹೀಗೆ. ಆದರೆ ಇವುಗಳ ಒಂದು ಬದಿಯನ್ನು ಮಾತ್ರ ನೋಡದಿರಿ. ಬೇರೆ ಬೇರೆ ಕೋನಗಳಿಂದ ಗಮನಹರಿಸಿ.

ಭೂತದ ಭಯ ಬೇಡ
ದಟ್ಟ ಅರಣ್ಯದಲ್ಲಿ ಕಳೆದುಹೋದಾಗ ಎಲ್ಲೋ ಅಜ್ಜಿ ಹೇಳಿದ ಭೂತ, ಪ್ರೇತಗಳ ಕಥೆಯನ್ನು ನೆನಪುಮಾಡಿಕೊಳ್ಳಬೇಡಿ. ಅದೆಲ್ಲ ಸುಳ್ಳು. ಆತಂಕ ಹೆಚ್ಚಿದರೆ ಸರಿ ದಾರಿ ಕಂಡುಹಿಡಿಯುವುದು ಕಷ್ಟ. ಅಲ್ಲದೆ, ಪರಿಚಿತ ಪ್ರದೇಶವನ್ನು ಗುರುತು ಹಿಡಿಯಲೂ ಅಸಾಧ್ಯವಾಗುತ್ತದೆ. ಕೂಲ್ ಆಗಿ ಪರಿಸ್ಥಿತಿಯನ್ನು ನಿಭಾಯಿಸಿ.

ಫೋನ್ ಸ್ವಿಚ್ ಆಫ್ ಮಾಡಿ...
ಜಿಪಿಎಸ್ ವ್ಯವಸ್ಥೆಯುಳ್ಳ ಮೊಬೈಲ್ ಫೋನ್ ಹೊಂದಿರುವವರು, ಅಂಥ ವ್ಯವಸ್ಥೆಯಿಲ್ಲದ ಮೊಬೈಲ್ ಹೊಂದಿರುವವರಿಂತ ಬೇಗನೆ ದಾರಿ ತಪ್ಪುತ್ತಾರೆ. ಏಕೆಂದರೆ ಮೊಬೈಲ್‌ನಲ್ಲಿ ಮ್ಯಾಪ್ ಸಿಗುತ್ತದೆ ಎಂಬ ಧೈರ್ಯ ಅವರಿಗಿರುತ್ತದೆ. ಹಾಗಾಗಿ ಅವರ ಹಿಪ್ಪೋಕ್ಯಾಂಪಸ್ ಹಾಗೂ ಸಂವೇದನಾ ನಕ್ಷೆಯನ್ನು ಕಾರ್ಯನಿರ್ವಹಿಸುವುದನ್ನೇ ಸ್ಥಗಿತಗೊಳಿಸಿರುತ್ತದೆ.

ಸಾಂಸ್ಕೃತಿಕ ಪ್ರಭಾವ
ಕೆಲವೊಂದು ಪ್ರದೇಶಗಳಲ್ಲಿ ಜನ ಯಾವುದೇ ತಂತ್ರಜ್ಞಾನವಿಲ್ಲದೆಯೂ ದಿಶೆಗಳನ್ನು ಹೇಳುತ್ತಾರೆ. ಪಶ್ಚಿಮ ಪೆಸಿಫಿಕ್‌ನ ಪೋಲೋವ್ಯಾಟ್ ಐಲ್ಯಾಂಡ್‌ನ ಜನ ನೀರಿನ ಹರಿವು ಮತ್ತು ನಕ್ಷತ್ರಗಳನ್ನು ನೋಡಿಯೇ ದಿಕ್ಕು ಹೇಳುತ್ತಾರೆ. ಬ್ಯಾರೋದ ಜನ ಬಾಲ್ಯದಲ್ಲಿಯೇ ದಿಕ್ಕು ಗುರುತಿಸುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ನರವ್ಯೂಹ ತಜ್ಞರು ಹೇಳುವಂತೆ, ಎಲ್ಲಿ ಹೋದರೂ ಕೆಲವೊಂದು ಪ್ರಮುಖ ಲ್ಯಾಂಡ್‌ಮಾರ್ಕ್‌ಗಳನ್ನು ನೋಡಿಕೊಂಡರೆ ಅದು ನಮ್ಮ ಹಿಪ್ಪೋಕ್ಯಾಂಪಸ್‌ನಲ್ಲಿ ಸಂವೇದನಾ ನಕ್ಷೆ ರಚಿಸಲು ನೆರವಾಗುತ್ತದೆ.

- ದಿಯಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com