ಮಿನುಗದ ನಕ್ಷತ್ರ

ಮಿನುಗದ ನಕ್ಷತ್ರ
Updated on: 

'Twinkle Twinkle Little Star
How I wonder what you are!'

'ಮಿನುಗುವ ನಕ್ಷತ್ರ'ಗಳನ್ನು ಕುರಿತು ಎರಡು ಶತಮಾನಗಳಿಗೂ ಹಿಂದೆ ಕವಿ ಜೇನ್ ಟೇಲರ್ ರಚಿಸಿದ ಈ ದ್ವಿಪದಿಯನ್ನು ಹಾಡಿ ಕುಪ್ಪಳಿಸದ ಕಂದಮ್ಮಗಳೇ ಇಲ್ಲವೆನ್ನಿ! ಅವುಗಳ ಉಲ್ಲಾಸದ ನಡುವೆಯೆ ವಿಜ್ಞಾನ ಅಪಸ್ವರವೊಂದನ್ನು ಎತ್ತುತ್ತದೆ. ಇಲ್ಲ ಇಲ್ಲ! ನಕ್ಷತ್ರಗಳು ಮಿನುಗುತ್ತವೆ, ಮಿಣುಕುತ್ತದೆ ಎನ್ನುವುದು ಕೇವಲ ಭ್ರಮೆ. ದೃಷ್ಟಿ ಭ್ರಮೆ.
ಅನತಿ ದೂರದ ತಾರೆಗಳ ಮಾತಿರಲಿ ಯಾವುದೇ ಬೆಳಕಿನ ಆಕರವಾಗಲಿ ಫಳಫಳ ಹೊಳೆಯುವುದಿಲ್ಲ. ಪ್ರಕ್ಷುಬ್ಧ ಮತ್ತು ಮಸುಕು ವಾತಾವರಣದ ಪ್ರಭಾವದಿಂದ ಆಕರದಿಂದ ನಮಗೆ ತಲುಪುವ ಬೆಳಕಿನ ದಂಡ ಬಾಗುತ್ತದೆ. ಇದರ ಫಲವಾಗಿಯೇ ದೃಷ್ಟಿಭ್ರಮೆ. ನಿದರ್ಶನವಾಗಿ ನೀವು ಬೀದಿ ದೀಪವೊಂದನ್ನು ನೋಡುತ್ತಿದ್ದೀರಿ ಅನ್ನೋಣ. ನಿಮ್ಮ ಹಾಗೂ ಆ ದೀಪದ ನಡುವಿನ ಗಾಳಿ ಸಮಸಮನಾಗಿ ಕಾವೇರಿರುವುದಿಲ್ಲ. ಮೇಲಾಗಿ ಅದು ಧೂಳು, ಹೊಗೆ ಮತ್ತು ನೀರಾವಿಯಿಂದ ಬೆರೆತಿರುತ್ತದೆ. ಯಾರೋ ಗೊಟಾಯಿಸುತ್ತಿರುವಂತೆ ತೋರುವ ಕಣಗಳು ಹಾಗೂ ನೀರ ಹನಿಗಳು ಪುಟ್ಟ ಪುಟ್ಟ ಕನ್ನಡಿಗಳ ಹಾಗೆ, ಮಸೂರಗಳ ಹಾಗೆ, ನೆರಳುಗಳ ಹಾಗೆ ವರ್ತಿಸುತ್ತವೆ. ಒಟ್ಟಾರೆ ನಿಮ್ಮ ಮತ್ತು ದೀಪದ ಮಧ್ಯ ಗೌಜು ಗೊಂದಲದ ವಾತಾವರಣ. ಬೆಳಕಿನ ಹಾದಿ ಸುಗಮವಾಗದೆ ನಿಮಗೆ ತಲುಪುತ್ತಲೆ ಅದು ಕೊಂಕಿರುತ್ತದೆ. ದೀಪ ಮಿಣುಕುತ್ತಿರುವಂತೆ ತೋರುತ್ತದೆ. ನೀವು ಬೆಳಕಿನ ಆಕರ ಸಮೀಪಿಸುತ್ತಿದ್ದಂತೆ ನಿಮ್ಮ ಕಣ್ಣುಗಳನ್ನು ತಲುಪುವ ಫೋಟಾನ್‌ಗಳ ಸಂಖ್ಯೆ ದ್ಯುತಿ ಕಣ (ಝ್ಟಡ್ಟಿಟಿ) ಸಂಖ್ಯೆ ತ್ವರಿತವಾಗಿ ಅಧಿಕಗೊಂಡು ಮಿನುಗುವುದೆನ್ನುವುದು ಕೇವಲ ಭ್ರಮೆಯೆಂಬ ಅರಿವಾಗುತ್ತದೆ.
ನಮ್ಮ ಪೂರ್ವಿಕರ ಜಾಣತನಕ್ಕೆ ತಲೆದೂಗಲೇಬೇಕು. ಅವರು ಅತಿ ಸುಲಭ, ಸರಳವಾಗಿ ಬಾನಂಗಳದಲ್ಲಿ ಗ್ರಹ ಮತ್ತು ನಕ್ಷತ್ರಗಳ ಭೇದ ತಿಳಿದಿದ್ದರು. ಗ್ರಹಗಳು ಭೂಮಿಗೆ ಸಮೀಪವಿವೆ. ಅತ್ಯಂತ ಪ್ರಕ್ಷುಬ್ಧ ವಾತಾವರಣವಿದ್ದಾಗ ಮಾತ್ರವೇ ಅವು ಮಿನುಗುವುದು. ಇನ್ನು ನಕ್ಷತ್ರಗಳೋ ಬಹು ಅಂತರದಲ್ಲಿರುವುದರಿಂದ ಅಷ್ಟು ಅಗಾಧ ಹಾನಿಯನ್ನು ಅದರ ಬೆಳಕು ಕ್ರಮಿಸುವಾಗ ಕೊಂಕುವುದು ಸಹಜ, ಅನಿವಾರ್ಯ. ಹಾಗಾಗಿ ನಿರ್ಮಲ ಆಗಸದಲ್ಲಂತೂ ಇಂಥದ್ದು ಗ್ರಹ, ಇಂಥದ್ದು ನಕ್ಷತ್ರ ಅಂತ ಸರಾಗವಾಗಿ ನಿರ್ಧರಿಸಬಹುದು. ನೀವು ಗಮನಿಸಿರಬಹುದು. ಬೆಂಕಿಯ ಮೇಲೆ ಭುಗಿಲೇಳುವ ಬಿಸಿಗಾಳಿಯ ಮೂಲಕ ನೀವು ದೃಷ್ಟಿಸುವ ಯಾವುದೇ ವಸ್ತು ಕಂಪಿಸುವಂತೆ ಭಾಸವಾಗುತ್ತದೆ. ಭಿನ್ನ ಸಾಂದ್ರತೆಯುಳ್ಳ ಬಿಸಿಗಾಳಿ ಮೂಲಕ ಬೆಳಕು ಸಾಗುವಾಗ ವಕ್ರೀಭವನ ಹೊಂದುವುದೇ ಈ ಭ್ರಮೆಗೆ ಕಾರಣ. ಗೋಧೂಳಿ ಮುಹೂರ್ತದಲ್ಲಿ ಬೀದಿ ದೀಪಗಳು ಮಿರಮಿರ ಮಿಂಚಲು ಬಹುತೇಕ ಆ ವೇಳೆಯಲ್ಲಿ ನೆಲದಿಂದ ಕಾವೇರಿದ ಗಾಳಿ ಮೇಲೇರಿ ತಂಪಾದ ಗಾಳಿಯನ್ನು ಬೆರೆಯುವುದೇ ಕಾರಣ.
ಬಿಸಿಗಾಳಿಯ ಸಾಂದ್ರತೆ ತಂಪು ಗಾಳಿಯದಕ್ಕಿಂತ ಕಡಿಮೆ. ಭಿನ್ನ ವಿಭಿನ್ನ ಉಷ್ಣತೆಗಳಲ್ಲಿ ಬೆಳಕು ಯಾನಿಸುವಾಗ ಅದರ ಪಥ ಕೊಂಚ ಬದಲಾಗುತ್ತದೆ. ಗಾಳಿ ಚಲಿಸುತಿದ್ದರಂತೂ ಪಥ ಅಲ್ಲೋಲಕಲ್ಲೋಲ. ಗಾಳಿ ದಟ್ಟವಾದಷ್ಟೂ ಅಧಿಕ ಉಷ್ಣವ್ಯತ್ಯಯ ಚುರುಕು ಸಂಚಲನ. ಫಲವಾಗಿಯೇ ಬೆಳಕಿನ ಆಕರಗಳು ಮಿರುಗುತ್ತಯೆಂಬ ಭ್ರಾಂತಿ.
ಅಂದಹಾಗೆ, ನಕ್ಷತ್ರಗಳ ನಯನ ಮನೋಹರ ಥಳಥಳ ನೋಟ ನಮಗೆ ಗರಿಷ್ಠತಮದಲ್ಲಿ ಅನುಭವವಾಗಬೇಕಾದರೆ ಆಗಸ ಶುಭ್ರವಾಗಿರಬೇಕು. ಗಾಳಿ ಬಿರುಸಾಗಿ ಬೀಸುತ್ತಿರಬೇಕು. ನೆತ್ತಿ ಮೇಲಿನ ತಾರೆಗಳಿಗಿಂತಲೂ ಬಾನಂಚಿನವು ಪಸಂದಾಗಿ ಹೊಳೆಯುತ್ತವೆ. ಏಕೆಂದರೆ ಬಾನಂಚಿಗೂ ನಮಗೂ ಹೆಚ್ಚಿನ ವಾತಾವರಣವಿದ್ದು ಬೆಳಕು ಅದರ ಮೂಲಕ ಹೇಗೋ ಸಾಗಲೇಬೇಕಲ್ಲವೆ? ಸಹಜವಾಗಿಯೇ ಒಂದು ಪ್ರಶ್ನೆ. ಚಂದ್ರನೇಕೆ ಮಿನುಗುವುದಿಲ್ಲ? ವಿವರಣೆ ಹೀಗಿದೆ; ಚಂದ್ರನಿಂದ ಅಗಾಧ ಬೆಳಕು ನಮಗೆ ತಲುಪುತ್ತಿದೆ. ಸಣ್ಣ ಚುಕ್ಕಿಯಂತೆ ಕಾಣುವ ದೈತ್ಯಕಾಯ ನಕ್ಷತ್ರ. ಬೃಹತ್ ಚೆಂಡಿನಂತೆ ಕಾಣುವ ಕಿರಿಕಾಯ ಚಂದ್ರ. ವಾತಾವರಣ ತಾರೆಯನ್ನು ಬಚ್ಚಿಟ್ಟುಕೊಳ್ಳುವಷ್ಟು ಸುಲಭವಾಗಿ ಚಂದ್ರನನ್ನು ಮರೆಮಾಡಲಾದೀತೆ! ಹಾಗಾಗಿ ಚಂದ್ರನ ಮಿನುಗನ್ನು ಸವಿಯಲು ಅವನ ಕಾಂತಿಯೇ ನಮಗೆ ಅಡ್ಡಿಯಾಗುತ್ತದೆ. ನಮಗೆ ಅತ್ಯಂತ ಅತ್ಯಲ್ಪ ದೂರದಲ್ಲಿರುವ ಚಂದ್ರ ಎಲ್ಲಿ, ಅನತಿ ದೂರದ ತಾರೆಗಳೆಲ್ಲಿ! ಗ್ರಹಗಳಾದ ಗುರು, ಶುಕ್ರ, ಶನಿಗಳದ್ದೂ ಇದೇ ಕಥೆ. ಅವು ನಮಗೆ ಸಮೀಪದ ಆಕಾಶಕಾಯಗಳು. ಚುಕ್ಕೆಯ ಗಾತ್ರಕ್ಕೂ ದೊಡ್ಡವಲ್ಲ. ಆದ್ದರಿಂದ ಅವು ಥಳಥಳಿಸವು. ಚಂದ್ರನಲ್ಲೋ ತೀರಾ ವಿಚಿತ್ರ ಸ್ಥಿತಿ. ಅಲ್ಲಿ ನಿಂತು ವಿಶಾಲ ಆಗಸ ದಿಟ್ಟಿಸಿದರೆ ಕಡು ಬಣ್ಣದ ಕವುಚಿದ ಪರದೆ ಮೇಲೆ ಅಲ್ಲಲ್ಲಿ ಶ್ವೇತ ಬಿಂದುಗಳು!

- ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com