ಮೊಬಯಲು!

ಚೆಂದದ ಹುಡುಗಿಯ ಕೈ ಸ್ಪರ್ಶಕ್ಕಿಂತ, ಅಂದದ ಬೆಡಗಿಯ ಮುಖಾರವಿಂದಕ್ಕಿಂತ, ಸಿಕ್ಸ್ ಪ್ಯಾಕ್ ಹುಡುಗನ...
ಮೊಬಯಲು!
Updated on

ಚೆಂದದ ಹುಡುಗಿಯ ಕೈ ಸ್ಪರ್ಶಕ್ಕಿಂತ, ಅಂದದ ಬೆಡಗಿಯ ಮುಖಾರವಿಂದಕ್ಕಿಂತ, ಸಿಕ್ಸ್ ಪ್ಯಾಕ್ ಹುಡುಗನ ದೇಹಕ್ಕಿಂತ ಇವತ್ತಿನ ಯುವಕ, ಯುವತಿಯರನ್ನು ಹೆಚ್ಚು ಟೆಂಪ್ಟ್ ಮಾಡುತ್ತಿರುವ ವಿಷಯವಿದ್ದರೆ ಅದು ಸ್ಮಾರ್ಟ್‌ಫೋನ್ ಮಾತ್ರ!
ಹೇಗೆಲ್ಲ ಸ್ಮಾರ್ಟ್‌ಫೋನ್‌ಗಳು ಬರಬಹುದು, ಹೀಗೂ ಇರಬಹುದೇ, ಇನ್ನು ಏನೇನು ಬರಬಹುದು ಎಂಬೆಲ್ಲ ನಿರೀಕ್ಷೆ, ಉತ್ಪ್ರೇಕ್ಷೆ ಹಾಗೂ ನಂಬಿಕೆಗಳನ್ನು ಹುಟ್ಟಿಸುವಷ್ಟರ ಮಟ್ಟಿಗೇ ಮೊಬೈಲ್ ತಯಾರಕ ಕಂಪನಿಗಳು ಸ್ಮಾರ್ಟ್ ಆಗಿವೆ. ವರ್ಷಕ್ಕೊಂದು ವಿಶಿಷ್ಟ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದ ಮೊಬೈಲ್ ಕಂಪನಿಗಳಿಂದು ಪ್ರತಿ 3ರಿಂದ 6 ತಿಂಗಳಿಗೊಂದು ಹೊಸ ಮೊಬೈಲ್‌ಗಳನ್ನು ಮಾರುಕಟ್ಟೆಗೆ ತರುತ್ತಿವೆ. ಈ ಮೊಬೈಲ್‌ಗಳು ನಮ್ಮ ಮನೆಯಲ್ಲಿರುವ ಸಾಮಾನ್ಯ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಿಂತಲೂ ಹೆಚ್ಚಿನ ರ್ಯಾಮ್ ಹೊಂದಿವೆ.
ಗ್ರಾಹಕರು ತಮ್ಮ ಆಯ್ಕೆಗಳಲ್ಲಿ ಸ್ಮಾರ್ಟ್ ಆಗುತ್ತಿರುವಂತೆ ಕಂಪನಿಗಳು ಅತಿ ಬುದ್ಧಿವಂತಿಕೆ ತೋರಿಸುತ್ತಿವೆ. ಗ್ರಾಹಕರು ತಮ್ಮ ಬ್ರ್ಯಾಂಡ್‌ಗಳಿಂದ ದೂರವಾಗದಿರಲೆಂದು ಎಲ್ಲ ಕಂಪನಿಗಳು ಒಂದೇ ಅವಧಿಯಲ್ಲಿ ಒಂದೇ ಥರದ ಸ್ಪೆಸಿಫಿಕೇಷನ್ ಹೊಂದಿರುವ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಿವೆ. ತನ್ನ ಇಷ್ಟದ ಬ್ರ್ಯಾಂಡ್ ಅನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ನೆರವಾದರೂ, ಮಾರುಕಟ್ಟೆಯಲ್ಲಿನ ಆಯ್ಕೆ ನೋಡಿ ತಲೆ ಗಿರಿಕ್ ಎನ್ನದೇ ಇರಲಾರದು.
ಕಳೆದ 3 ತಿಂಗಳಿಂದ ಎಚ್‌ಟಿಸಿ ಒನ್, ಸ್ಯಾಮ್‌ಸಂಗ್ ಎಸ್-4, ಸೋನಿ ಎಕ್ಸ್‌ಪೀರಿಯಾ ಝಡ್ ಹಾಗೂ ಎಲ್‌ಜಿ ಆಪ್ಟಿಮಸ್ ಜಿ ಕುರಿತಂತೆ ಅಂತೆಕಂತೆಗಳ ಹರಟೆ ಹರಿದಾಡುತ್ತಿತ್ತು. ಮೊಬೈಲ್ ಗ್ರಾಹಕರಲ್ಲಿ ಹೆಚ್ಚಿನವರು ಬ್ರ್ಯಾಂಡ್ ಪ್ರೀತಿ ಬೆಳೆಸಿಕೊಂಡಿರುತ್ತಾರೆ. ತಮ್ಮ ಇಷ್ಟದ ಬ್ರ್ಯಾಂಡ್‌ಗಳ ನಿರೀಕ್ಷಿತ ಮೊಬೈಲ್ ಬಗ್ಗೆ ತಮ್ಮದೇ ಆಲೋಚನೆಗಳನ್ನು ಹರಿಬಿಟ್ಟಿದ್ದರು. ಈಗ ಅವೆಲ್ಲ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಎಲ್ಲ ಮೊಬೈಲ್‌ಗಳ ಟೆಕ್ನಿಕಲ್ ಸ್ಪೆಸಿಫಿಕೇಷನ್ ಬಹುತೇಕವಾಗಿ ಒಂದೇ ತೆರನಾಗಿದೆ, ಆದರೆ ಪ್ರತಿಯೊಂದು ಮೊಬೈಲ್ ಕೂಡ ಪ್ರತ್ಯೇಕ ವೈಶಿಷ್ಯ್ಟಗಳಿಂದ ಮಿಂಚುತ್ತಿದೆ.
ತರಕಾರಿ ತೊಳೆದ ಹಾಗೆ ಮೊಬೈಲ್‌ನ್ನು ತೊಳೆಯಬಹುದು ಎಂದು ಸೋನಿ ಕಂಪನಿ ಹೇಳಿಕೊಂಡರೆ, ಗಾಳಿಯಲ್ಲಿ ಕೈ ಆಡಿಸಿಯೇ ಮೊಬೈಲ್ ಆಪರೇಟ್ ಮಾಡಿ ಎಂದು ಸ್ಯಾಮ್‌ಸಂಗ್ ಹೇಳುತ್ತದೆ. ನೀವು ಸಂತೆಯಲ್ಲಿದ್ದು ಕರೆ ಸ್ವೀಕರಿಸಿದರೂ ಕರೆ ಮಾಡಿದವರ ಧ್ವನಿ ಸ್ಪಷ್ಟವಾಗಿ ಕೇಳುವಂಥ ತಂತ್ರಜ್ಞಾನ ನಾವು ನೀಡಿದ್ದೇವೆ ಎನ್ನುತ್ತದೆ ಎಚ್‌ಟಿಸಿ.
ಇವೆಲ್ಲ ಮೊಬೈಲ್‌ಗಳ ವಿಶೇಷತೆ ಹಾಗೂ ತಾಂತ್ರಿಕ ವಿವರಣೆಯನ್ನು ನಿಮಗಾಗಿ ನೀಡಿದ್ದೇವೆ. ಇದನ್ನು ಓದಿ ಟೆಂಪ್ಟ್ ಆಗುವುದು, ಬಿಡುವುದು ನಿಮಗೆ ಬಿಟ್ಟ ವಿಚಾರ.

ಟಚ್ಚಿಸುವ ಅಗತ್ಯವಿಲ್ಲ!
ಪ್ರಸಕ್ತ ಸ್ಮಾರ್ಟ್‌ಫೋನ್ ಯುಗದ ಅತಿ ವೇಗದ ಎಂಬ ಖ್ಯಾತಿಯನ್ನು ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್-4 ಹೊಂದಿದೆ. ಫೋನ್‌ನಲ್ಲಿ ಎರಡು ಕ್ವಾಡ್ ಕೋರ್‌ನ ಪ್ರೊಸೆಸರ್ ಅಳವಡಿಸಿರುವುದರಿಂದ ಆಕ್ಟಾಕೋರ್ ವೇಗದಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಟಚ್ ಸ್ಕ್ರೀನ್, ವಿಡಿಯೋ, ರೆಸಲೂಷನ್ ಹಾಗೂ ಇನ್ನು ಕೆಲವು ವಿಚಾರದಲ್ಲಿ ಎಸ್-4ನ ತಂತ್ರಜ್ಞಾನ ಹುಬ್ಬೇರಿಸುವಂತಿದೆ.
ವಿಡಿಯೋ ನೋಡುತ್ತಿರುವಾಗ ಸ್ಕ್ರೀನ್ ನಮ್ಮ ದೃಷ್ಟಿ ಪಕ್ಕಕ್ಕೆ ಸರಿದರೆ ವಿಡಿಯೋ ಅಲ್ಲಿಗೆ ಪಾಸ್ ಆಗುತ್ತದೆ. ಗ್ಯಾಲರಿಯಲ್ಲಿನ ಫೋಟೋ ನೋಡುವಾಗ, ಕರೆಯನ್ನು ಸ್ವೀಕರಿಸುವಾಗ, ಮ್ಯೂಸಿಕ್‌ಗಳನ್ನು ಬದಲಾಯಿಸುವಾಗ ಟಚ್‌ಸ್ಕ್ರೀನ್ ಸ್ಪರ್ಶಿಸಿ ಬದಲಾಯಿಸುವ ಅಗತ್ಯವಿಲ್ಲ. ಟಚ್‌ಸ್ಕ್ರೀನ್ ಮೇಲೆ ಕೇವಲ ಕೈಯನ್ನು ಅಲ್ಲಾಡಿಸಿದರೇ ಬದಲಾಗುತ್ತವೆ. ಇದಲ್ಲದೇ ಸ್ಯಾಮ್‌ಸಂಗ್ ಹಬ್ ರೂಪಿಸಿಕೊಂಡು ಗೇಮಿಂಗ್, ಮ್ಯೂಸಿಕ್‌ಗಳನ್ನು ಗೆಳೆಯರ ಜತೆಗೆ ಕೇಳಬಹುದು, ನೋಡಬಹುದು. ಇದರ ಫ್ರಂಟ್ ಕ್ಯಾಮರಾವು ಒಂದು ವಿಶೇಷತೆ ಹೊಂದಿದ್ದು, ಹಿಂದಿನ ಕ್ಯಾಮರಾದಲ್ಲಿ ಫೋಟೋ ತೆಗೆಯುತ್ತಿರುವಾಗ ಫ್ರಂಟ್ ಕ್ಯಾಮರಾ ಮೂಲಕ ಫೋಟೋ ತೆಗೆಯುತ್ತಿರುವವರ ಚಿತ್ರವನ್ನು ಅದೇ ಫ್ರೇಮ್‌ನಲ್ಲಿ ಸೆಟ್ ಮಾಡಿ ಕ್ಲಿಕ್ಕಿಸಲು ಅವಕಾಶವಿದೆ.

ಸ್ಯಾಮ್‌ಸಂಗ್ ಎಸ್4
ತೂಕ- 130 ಗ್ರಾಂ
ರೆಸಲೂಷನ್- 1920್ಗ1080, 441ಪಿಪಿಐ
ಸ್ಕ್ರೀನ್ ಅಳತೆ- 5 ಇಂಚು
ಬ್ಯಾಟರಿ-2,600 ಎಂಎಎಚ್
ಇಂಟರ್ನಲ್ ಮೆಮೊರಿ- 16 ಜಿಬಿ
ಎಕ್ಸ್‌ಟರ್ನಲ್ ಮೆಮೊರಿ- 64 ಜಿಬಿ
ರ್ಯಾಮ್ ಮೆಮೊರಿ- 2 ಜಿಬಿ
ಓಎಸ್- ಆ್ಯಂಡ್ರಾಯ್ಡ್ 4.2.2
ಕ್ಯಾಮೆರಾ- 13 ಎಂಪಿ (2 ಎಂಪಿ)
ಪ್ರೊಸೆಸರ್- 1.6 ಜಿಎಚ್‌ಝಡ್ ಕ್ವಾಡ್‌.1.2 ಜಿಎಚ್‌ಝಡ್ ಕ್ವಾಡ್
ದರ- ರು. 41,500

ಅಲ್ಟ್ರಾಕ್ಯಾಮರಾ, ಸ್ಪೆಷಲ್ ಸೌಂಡ್
ಸ್ಯಾಮ್‌ಸಂಗ್ ಎಸ್-4ಗೆ ಸ್ಪರ್ಧೆ ನೀಡಬಹುದಾಂಥ ಫೋನ್ ಎಂದರೆ ಎಚ್‌ಟಿಸಿ-1. ಪ್ರೊಸೆಸರ್ ಹಾಗೂ ಕೆಲ ಅಪ್ಲಿಕೇಷನ್‌ಗಳನ್ನು ಹೊರತುಪಡಿಸಿದರೆ ಇವರೆಡೂ ಫೋನಿಗೆ ಅಂಥ ವ್ಯತ್ಯಾಸವಿಲ್ಲ. ಆದರೆ ಡಿಸೈನ್‌ನಲ್ಲಿ ಎಚ್‌ಟಿಸಿ-1 ಉತ್ತಮವಾಗಿದೆ, ಎಸ್-4ಗಿಂತ ಒಂದು ಕೈ ಮೇಲು. ಅಲ್ಯೂಮಿನಿಯಂ ಪ್ಯಾನಲ್ ಹಾಗೂ ಎಚ್‌ಟಿಸಿಯ ಟಿಪಿಕಲ್ ಸ್ಲಿಮ್ ಡಿಸೈನ್‌ನಲ್ಲಿ ಮಿಂಚುತ್ತಿದೆ.
ಕ್ಯಾಮರಾ ಹಾಗೂ ಮೈಕ್ರೋಫೋನ್‌ನಲ್ಲಿ ಎಚ್‌ಟಿಸಿ-1 ವಿಭಿನ್ನವಾಗಿದೆ. ಇದೇ ಮೊದಲ ಬಾರಿಗೆ ಕ್ಯಾಮರಾದಲ್ಲಿ ಮೆಗಾ ಪಿಕ್ಸಲ್ ಬದಲು ಅಲ್ಟ್ರಾ ಪಿಕ್ಸಲ್ ಎಂಬ ತಂತ್ರಜ್ಞಾನ ಬಳಸಲಾಗಿದೆ. ತಂತ್ರಜ್ಞರ ಪ್ರಕಾರ ಇದು 8 ಮೆಗಾ ಪಿಕ್ಸಲ್‌ಗೆ ಸಮನಾಗಿದ್ದರೂ, ಫೋಟೋ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಇನ್ನು ಕ್ಯಾಮರಾದ ಪಕ್ಕದಲ್ಲಿಯೇ ಹೆಚ್ಚುವರಿ ಮೈಕ್ರೋಫೋನ್ ಅಳವಡಿಸಲಾಗಿದೆ. ಇದೇ ಕಾರಣದಿಂದ ನಾವು ಜನಜಂಗುಳಿಯಲ್ಲಿದ್ದಾಗಲೂ ಕರೆ ಸ್ವೀಕರಿಸಿ ಮಾತನಾಡಬಹುದು. ಸುತ್ತಲಿನ ಧ್ವನಿ ಗ್ರಹಣಮಾಡಿ ಕರೆ ಮಾಡುತ್ತಿರುವವ ಧ್ವನಿಯನ್ನು ನಮಗೆ ಕೇಳಿಸುವಷ್ಟು ಹೆಚ್ಚಿಸುತ್ತದೆ. ನಾಯ್ಸ್ ರಿಡಕ್ಷನ್ ತಂತ್ರಜ್ಞಾನವನ್ನು ಇಲ್ಲಿ ಉನ್ನತಿಕರಿಸಲಾಗಿದೆ.

ಎಚ್‌ಟಿಸಿ 1
ತೂಕ- 143 ಗ್ರಾಂ
ರೆಸಲೂಷನ್- 1080, 46 8ಪಿಪಿಐ
ಸ್ಕ್ರೀನ್ ಅಳತೆ- 4.7 ಇಂಚು
ಬ್ಯಾಟರಿ-2,300 ಎಂಎಎಚ್
ಇಂಟರ್ನಲ್ ಮೆಮೊರಿ- 32 ಜಿಬಿ
ಎಕ್ಸ್‌ಟರ್ನಲ್ ಮೆಮೊರಿ- 64 ಜಿಬಿ
ರ್ಯಾಮ್ ಮೆಮೋರಿ- 2 ಜಿಬಿ
ಓಎಸ್- ಆ್ಯಂಡ್ರಾಯ್ಡ್ 4.2.2
ಕ್ಯಾಮೆರಾ- 4 ಎಂಪಿ ಅಲ್ಟ್ರಾಪಿಕ್ಸೆಲ್ (2.1 ಎಂಪಿ)
ಪ್ರೊಸೆಸರ್- 1.7 ಜಿಎಚ್‌ಝಡ್ ಕ್ವಾಡ್‌ಕೋರ್
ದರ- ರು. 42,000

ತೊಳೆದುಬಿಡಿ ಅಂತು ಸೋನಿ
ಮೊಬೈಲ್ ಅನ್ನು ಸರ್ಫ್ ಎಕ್ಸೆಲ್ ಹಾಕಿ ತೊಳೆದುಬಿಡಿ ಎಂದಿನ್ನು ತಮಾಷೆಗೂ ಹೇಳುವಹಾಗಿಲ್ಲ. ಏಕೆಂದರೆ ಸೋನಿ ಎಕ್ಸ್‌ಪೀರಿಯಾ ಝಡ್ ಫೋನ್ ಅನ್ನು ನೀವು ತೊಳೆಯಬಹುದು. ವಿಶಿಷ್ಟ ತಂತ್ರಜ್ಞಾನದೊಂದಿಗೆ ಡಸ್ಟ್- ವಾಟರ್ ರೆಸಿಸ್ಟನ್ಸ್ ಅನ್ನು ಇದು ಹೊಂದಿದೆ. ಝಿರೋ ಗ್ಯಾಪ್ ತಂತ್ರಜ್ಞಾನದಿಂದ ಇದನ್ನು ರೂಪಿಸಲಾಗಿದೆ. ಡಿಸೈನ್‌ನಲ್ಲಿ ಮತ್ತದೇ ಹಳೆಯ ರೂಪವನ್ನೇ ಉಳಿಸಿಕೊಂಡಿರುವುದು ಸ್ವಲ್ಪ ಬೇಜಾರಿನ ಸಂಗತಿ. ಮತ್ತೊಂದೆಡೆ ಆಪರೇಟಿಂಗ್ ಸಿಸ್ಟಮ್‌ನಲ್ಲಿಯೂ ಜೆಲ್ಲಿ ಬೀನ್‌ನ ಮೊದಲ ಮಾದರಿಯನ್ನೇ ಉಳಿಸಿಕೊಳ್ಳಲಾಗಿದೆ. ಆದರೆ 4.2 ಮಾದರಿಗೆ ಅಪ್‌ಡೇಟ್ ಮಾಡಿಕೊಳ್ಳಲು ಅವಕಾಶಮಾಡಿಕೊಡಲಾಗಿದೆ. ಉಳಿದಂತೆ ಎಚ್‌ಟಿಸಿ-1 ಹಾಗೂ ಇದಕ್ಕೆ ವಿಶೇಷ ಬದಲಾವಣೆಯಿಲ್ಲ.

ಸೋನಿ ಎಕ್ಸ್‌ಪೀರಿಯಾ ಝಡ್
ತೂಕ- 146 ಗ್ರಾಂ
ರೆಸಲೂಷನ್- 1920್ಗ1080
ಸ್ಕ್ರೀನ್ ಅಳತೆ- 4.7 ಇಂಚು
ಬ್ಯಾಟರಿ-2330 ಎಂಎಎಚ್
ಇಂಟರ್ನಲ್ ಮೆಮೊರಿ- 16 ಜಿಬಿ
ಎಕ್ಸ್‌ಟರ್ನಲ್ ಮೆಮೊರಿ- 32 ಜಿಬಿ
ರ್ಯಾಮ್ ಮೆಮೊರಿ- 2 ಜಿಬಿ
ಓಎಸ್- ಆ್ಯಂಡ್ರಾಯ್ಡ್ 4.1.2
ಕ್ಯಾಮೆರಾ- 13 ಎಂಪಿ (2.2 ಎಂಪಿ)
ಪ್ರೊಸೆಸರ್- 1.5ಜಿಎಚ್‌ಝಡ್ ಕ್ವಾಡ್‌ಕೋರ್
ದರ- ರು. 38,990

ಎಲ್‌ಜಿನೂ ಓಕೆಜಿ
ಉಳಿದ 3 ಫೋನ್ ಹಾಗೂ ಇದಕ್ಕೆ ಅಂಥ ಯಾವುದೇ ವ್ಯತ್ಯಾಸವಿಲ್ಲ. ಆದರೆ ಈ ಹಿಂದಿನ ಡಿಸೈನ್‌ನಿಂದ ಹೊರಬರಲು ಎಲ್‌ಜಿ ಅಲ್ಪಮಟ್ಟಿಗೆ ಪ್ರಯತ್ನಿಸಿದೆ. ಬಿಳಿ ಬಣ್ಣದಲ್ಲಿಯೂ ಎಲ್‌ಜಿ ಲಭ್ಯವಿರುವುದು ಸ್ವಲ್ಪ ಸಮಾಧಾನಕರ ವಿಚಾರ. ಸ್ಕ್ರೀನ್ ಅಳತೆಯ ವಿಚಾರಕ್ಕೆ ಬಂದರೆ ಎಸ್-4 ಹೊರತುಪಡಿಸಿ ಉಳಿದವು 4.7 ಇಂಚು ಹೊಂದಿವೆ. ಆದರೆ ಎಕ್ಸ್‌ಟರ್ನಲ್ ಮೆಮೋರಿಯನ್ನು 32 ಜಿಬಿವರೆಗೆ ಮಾತ್ರ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಉಳಿದೆಲ್ಲ ಮೊಬೈಲ್‌ಗಳಿಗಿಂತ ಕಡಿಮೆ ದರವನ್ನು ಇದು ಹೊಂದಿದೆ. ಬ್ಯಾಟರಿ ಸಾಮರ್ಥ್ಯವೂ ತುಸು ಕಡಿಮೆಯಿದೆ.

ಎಲ್‌ಜಿ ಆಪ್ಟಿಮಸ್ ಜಿ
ತೂಕ- 145 ಗ್ರಾಂ
ರೆಸಲೂಷನ್- 1280 ್ಗ768 320 ಪಿಪಿಐ
ಸ್ಕ್ರೀನ್ ಅಳತೆ- 4.7 ಇಂಚು
ಬ್ಯಾಟರಿ-2100 ಎಂಎಎಚ್
ಮೆಮೊರಿ- 16 ಜಿಬಿ ಇಂಟರ್ನಲ್ ಮೆಮೊರಿ ಮತ್ತು 16 ಜಿಬಿಯ ಮೆಮೊರಿ ಕಾರ್ಡ್
ಎಕ್ಸ್‌ಪ್ಯಾಂಡಬಲ್ ಮೆಮೊರಿ- 64 ಜಿಬಿವರೆಗೆ
ಬಾಕ್ಸ್ ಕ್ಲೌಡ್ ಮೆಮೊರಿ - 50 ಜಿಬಿ
ರ್ಯಾಮ್ ಮೆಮೊರಿ- 2 ಜಿಬಿ
ಓಎಸ್- ಆ್ಯಂಡ್ರಾಯ್ಡ್ 4.1.2
ಕ್ಯಾಮೆರಾ- 13 ಎಂಪಿ (1.3 ಎಂಪಿ)
ಪ್ರೊಸೆಸರ್- 1.7 ಗಿಗಾಹರ್ಟ್ಸ್ ಕ್ವಾಡ್‌ಕೋರ್
ದರ- ರು. 35,500

ಸುಮ್ಮನೇ ಒಂದು ಹೋಲಿಕೆ

ವಿನ್ಯಾಸ

ಈ 4 ಫೋನ್‌ಗಳನ್ನು ಪಕ್ಕಕ್ಕಿಟ್ಟರೇ ಎಚ್‌ಟಿಸಿ-1ನ್ನು ಒಮ್ಮೆ ಕೈನಲ್ಲಿ ಹಿಡಿದುಕೊಳ್ಳಬೇಕು ಎನಿಸದೇ ಇರಲಾರದು. ಎಚ್‌ಟಿಸಿ ಹೊರತುಪಡಿಸಿ ಮತ್ತ್ಯಾವ ಕಂಪನಿಗಳು ತಮ್ಮ ಫೋನ್‌ಗಳ ಹೊರ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಸ್ಕ್ರೀನ್ ಅಳತೆಯಲ್ಲಿ ಎಸ್-4 ತುಸು ದೊಡ್ಡದಾಗಿದ್ದರೂ ಎಚ್‌ಟಿಸಿ-1 ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಐಫೋನ್ ಹೊರತುಪಡಿಸಿದರೇ ಇದೇ ಮೊದಲ ಬಾರಿಗೆ ಎಚ್‌ಟಿಸಿಯಲ್ಲೂ ಅಲ್ಯೂಮಿನಿಯಂ ಪ್ಯಾನಲ್ ಬಳಿಸಿರುವುದು ಈ ಆಕರ್ಷಣೆಗೆ ಕಾರಣ. ಸ್ಯಾಮ್‌ಸಂಗ್ ಎಸ್- 4 ಉಳಿದೆಲ್ಲ ವಿಚಾರಗಳಲ್ಲಿ ಅಭಿವೃದ್ಧಿಯಾಗಿದ್ದರೂ ವಿನ್ಯಾಸದಲ್ಲಿ ಎಸ್- 3ಯ ಎಲ್ಲ ಅಂಶಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಬಾಳಿಕೆ
ಬಾಳಿಕೆಯ ವಿಚಾರ ಬಂದಾಗ ಸೋನಿ ಎಕ್ಸ್‌ಪೀರಿಯಾ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಝಿರೋ ಗ್ಯಾಪ್ ತಂತ್ರಜ್ಞಾನವು ಇದಕ್ಕೆ ಕಾರಣ. ಇದರಿಂದ ಡಸ್ಟ್ ಹಾಗೂ ವಾಟರ್ ರಸಿಸ್ಟನ್ಸ್ ಅನ್ನು ಇದು ಹೊಂದಿರುವುದರಿಂದ ನಮ್ಮ ವಾತಾವರಣಕ್ಕೆ ಹೆಚ್ಚು ಬಾಳಿಕೆ ಬರಲಿದೆ. ಬಹುತೇಕ ಸ್ಮಾರ್ಟ್‌ಫೋನ್‌ಗಳು ಧೂಳಿನ ಕಾರಣದಿಂದಲೇ ಅಂದಗೆಡುತ್ತವೆ. ಈ ವಿಚಾರದಲ್ಲಿ ಎಲ್‌ಜಿ ಹಾಗೂ ಸ್ಯಾಮ್‌ಸಂಗ್ ಕೊನೆಯ ಸ್ಥಾನದಲ್ಲಿ ನಿಲ್ಲುತ್ತವೆ. ಅಲ್ಯೂಮಿನಿಯಂ ಪ್ಯಾನೆಲ್ ಹೊಂದಿರುವ ಎಚ್‌ಟಿಸಿಗೆ ದ್ವಿತೀಯ ಸ್ಥಾನ ನೀಡಬಹುದು.
ಕಾರ್ಯದಕ್ಷತೆ
ಇದರಲ್ಲಿ ಎಸ್-4ಗೆ ನಿರ್ದಾಕ್ಷಿಣ್ಯವಾಗಿ ಹೆಚ್ಚಿನ ಅಂಕ ನೀಡಬಹುದು. ಎರಡು ಪ್ರೊಸೆಸರ್ ಹೊಂದಿರುವುದರಿಂದ ಇದನ್ನು ಆಕ್ಟಾ ಕೋರ್ ಎಂದು ಹೇಳಲಾಗಿದೆ. ಇದೇ ಕಾರಣದಿಂದ ವಿಶ್ವದ ಅತಿ ವೇಗದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಎಸ್-4 ಪಾತ್ರವಾಗಿದೆ. ಉಳಿದೆಲ್ಲ ಫೋನ್‌ಗಳ ಪ್ರೊಸೆಸರ್ 1.7 ಜಿಎಚ್‌ಝಡ್ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿವೆ.

- ರಾಧೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com