COOL ಡೌನ್

ಸೊಳ್ಳೆ ಓಡಿಸೋಕೆ, ಮಳೆ ಬರುತ್ತಾ ನೋಡೋಕೆ, ವಾತಾವರಣ ಅರಿಯೋಕೆ, ನಿಮ್ಮ ಬಿಪಿ ತಿಳಿಯೋಕೆ, ಭಾಷಾಂತರಕ್ಕೆ- ಹೀಗೆ...
COOL ಡೌನ್
Updated on

ಸೊಳ್ಳೆ ಓಡಿಸೋಕೆ, ಮಳೆ ಬರುತ್ತಾ ನೋಡೋಕೆ, ವಾತಾವರಣದ ಬಿಸಿ ಅರಿಯೋಕೆ, ನಿಮ್ಮ ಬಿಪಿ ತಿಳಿಯೋಕೆ, ಭಾಷಾಂತರಕ್ಕೆ- ಹೀಗೆ ಬಹುತೇಕ ಸಂದರ್ಭಗಳಲ್ಲಿ ಮೊಬೈಲ್ ಎಪಿಪಿಗಳು (ಅಪ್ಲಿಕೇಶನ್ಗಳು) ಸಹಾಯಕ್ಕೆ ಬರುತ್ತವೆ. ಮೊಬೈಲ್ ಅಪ್ಲಿಕೇಶನ್ಗಳು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿಡಲು ಕೂಡ ಸಹಾಯಮಾಡಲಿವೆ.
ಬೇಸಿಗೆಯಲ್ಲಿ ಧರಿಸಬೇಕಾದ ಬಟ್ಟೆ,ಸೇವಿಸಬೇಕಾದ ಆಹಾರ, ಎಷ್ಟು ಹೊತ್ತಿಗೆ ಹೊರಹೋಗಬೇಕು, ಎಷ್ಟು ನೀರು ಕುಡಿಯಬೇಕು, ಬಳಸಬೇಕಾದ ಶೃಂಗಾರ ಸಾಧನ ಹೀಗೆ ಪ್ರತಿಯೊಂದನ್ನೂ ಮೊಬೈಲ್ ಎಪಿಪಿಗಳು ನಿಮಗೆ ಅರುಹಲಿವೆ.
ನೀವು ಮಾಡಬೇಕಾದ್ದೆಂದರೆ ಅವುಗಳನ್ನು ಡೌನ್ಲೋಡ್ ಮಾಡಿಕೊಂಡು, ಓಪನ್ ಮಾಡಬೇಕು ಅಷ್ಟೇ. ಬೇಸಿಗೆಯ ಸುಡು ಬಿಸಿಯಲ್ಲೂ ತಂಪುಕೊಡುವ ಇನ್ನೊಂದು ಸಂಗತಿಯೆಂದರೆ ಬಹುತೇಕ ಎಪಿಪಿಗಳು ಉಚಿತವಾಗಿ ಲಭ್ಯವಿವೆ!
ಕೆಲವು ನಿಮ್ಮ ಸಹಾಯಕ್ಕಾಗಿ...

ಸನ್ ಶೈನ್ ಫುಡ್
ಬೇಸಿಗೆಯಲ್ಲಿ ಕೆಲವರಿಗೆ ಆಹಾರ ಸರಿಯಾಗಿ ಸೇರುವುದಿಲ್ಲ. ಅಲ್ಲದೇ ಬಿಸಿಲ ಬೇಗೆಗೆ ನಮ್ಮ ದೇಹದಲ್ಲಿನ ನೀರಿನಂಶ ಕಡಿಮೆಯಾಗುತ್ತದೆ. ಸೂಕ್ತ ಆರೋಗ್ಯ ಕಾಪಾಡಿಕೊಳ್ಳಲು ಸರಿಯಾದ ಆಹಾರ ಸೇವನೆ ಕೂಡ ಅಗತ್ಯ.
ಅದಕ್ಕಾಗಿ ನೀವು ತಲೆಕೆಡಿಸಿಕೊಳ್ಳಬೇಕಿಲ್ಲ. ಕೇವಲ ರು. 320 ಖರ್ಚುಮಾಡಲು ಸಿದ್ಧರಾದರೆ ಸಾಕು. ನೀವು ಮೊಬೈಲ್ನಲ್ಲಿ ಸನ್ಶೈನ್ ಫುಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡರೆ ಸಾಕು. ಈ ಅಪ್ಲಿಕೇಶನ್ನಲ್ಲಿ ಲಭ್ಯವಿರುವ ಅಡುಗೆಗಳನ್ನು ಮಾಡುವ ಬಗೆಯನ್ನು ಹಂತಹಂತವಾಗಿ ವಿಡಿಯೋದಲ್ಲಿ ನೋಡಬಹುದು.
ಭಾರತೀಯ ಮೊಬೈಲ್ ಗ್ರಾಹಕರಿಗೆ ಕೊಂಚ ಬೇಸರದ ಸಂಗತಿಯೆಂದರೆ ಭಾರತೀಯ ತಿನಿಸುಗಳು ಹೆಚ್ಚಾಗಿ ಲಭ್ಯವಿಲ್ಲ. ಕೆರಿಬಿಯನ್ ಮಾದರಿಯ ಅಡುಗೆಗಳು ಹೆಚ್ಚು ಲಭ್ಯವಿದೆ. ಕೆರಿಬಿಯನ್ ಮಾದರಿ ತಿನಿಸುಗಳ ರುಚಿ ನೋಡೋಣ ಎಂದುಕೊಂಡರೆ ಖಂಡಿತಾ ಇದು ಒಳ್ಳೆಯ ಅಪ್ಲಿಕೇಶನ್.

ಸಮ್ಮರ್ ಸ್ಟೈಲ್ ಬುಕ್
ನಿಮ್ಮ ಕಪಾಟನ್ನು ಸರಿಯಾಗಿ ಪೇರಿಸಲು ಮತ್ತು ಕಾಲಕ್ಕೆ ತಕ್ಕ ದಿರಿಸು ಆಯ್ಕೆ ಮಾಡಿಕೊಳ್ಳಲು ಇದು ನಿಮ್ಮ ಸಹಾಯಕ್ಕೆ ಬರುತ್ತೆ. ನೀವು ನಿಮ್ಮ ದಿರಿಸಿನ ಫೋಟೊ ತೆಗೆದರಾಯಿತು. ಅವುಗಳನ್ನು ಬೇರೆ ಬೇರೆ ವಿಭಾಗದಲ್ಲಿ ಪೇರಿಸಿಡಲು ಅಪ್ಲಿಕೇಶನ್ ಸಹಾಯಮಾಡುತ್ತದೆ. ಇದರಲ್ಲಿ ಡ್ರೆಸ್ಸಸ್, ಬಾಟಮ್ಸ್, ಶೂಸ್ ಹೀಗೆ ಕೆಲವು ವಿಭಾಗಗಳಿವೆ.
ನಿಮ್ಮ ದಿರಿಸುಗಳ ಫೋಟೋ ತೆಗೆದಾದ ಮೇಲೆ ನೀವು ಅಪ್ಲಿಕೇಶನ್ನಲ್ಲಿರುವ 90 ಬೇರೆ ಬೇರೆ ಸಾಧನಗಳನ್ನು ಉಪಯೋಗಿಸಿ, ನಿಮ್ಮ ದಿರಿಸನ್ನು ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸಿ, ಮ್ಯಾಚ್ ಮಾಡಿ ನೋಡಲು ಸಾಧ್ಯವಿದೆ. ಇದ್ದ ದಿರಿಸಿನಲ್ಲಿಯೇ ಹೊಸ ಕಾಂಬಿನೇಶನ್ಗಳ ಮೂಲಕ ಮಿಂಚಲು ಈ ಅಪ್ಲಿಕೇಶನ್ ಸಹಕಾರಿ. ಆದರೆ ಇದಕ್ಕಾಗಿ ನೀವು ರು. 300 ತೆರಲು ಸಿದ್ಧರಿರಬೇಕು. ಯಾಕೆಂದರೆ ಈ ಅಪ್ಲಿಕೇಶನ್ ಉಚಿತವಲ್ಲ.

ಯುವಿ ಸೇಫ್ ಟೈಮರ್
ಬಿಸಿಲಿಗೆ ಹೊರ ಹೋಗೋಕೇ ಭಯ. ಬೆಳ್ಳಗಿದ್ದವರಂತೂ ಬಿಸಿಲು ಅಂದರೆ ಹೊರಗೇ ಬೀಳೋದಿಲ್ಲ. ಇತ್ತೀಚೆಗೆ ಅದೇನೋ ಯುವಿ ಕಿರಿಣಗಳ ಕಾಟ. ಯುವಿ ಕಿರಣಗಳನ್ನು ತಡೆಯುವ ಕನ್ನಡಕಗಳು ಕೂಡ ಬಂದುಬಿಟ್ಟಿವೆ. ಬಿಸಿಲಿನಿಂದ ನಿಮ್ಮ ಚರ್ಮ ಕಪ್ಪಾಗುವುದನ್ನು ತಡೆಯಲು ಸನ್ಸ್ಕ್ರೀನ್ ಲೋಶನ್ಗಳು ಸೇರಿದಂತೆ ಸಾಕಷ್ಟು ಸಾಧನಗಳು ಬಂದಿವೆ. ಮೊಬೈಲ್ ಅಪ್ಲಿಕೇಶನ್ ಹೊಸ ಸೇರ್ಪಡೆ.
ಈ ಅಪ್ಲಿಕೇಶನ್ ನೀವಿರುವ ಸ್ಥಳ ಮತ್ತು ಅಲ್ಲಿನ ಹವಾಮಾನದ ಸ್ಥಿತಿ, ನೀವಿರುವ ಸ್ಥಳದ ಯುವಿ ಇಂಡೆಕ್ಸ್ಗಳನ್ನು ಪತ್ತೆ ಮಾಡಿ, ಲೆಕ್ಕ ಹಾಕಿ ಯಾವ ಸಮಯದಲ್ಲಿ ಯುವಿ ಕಿರಣಗಳು ಕಡಿಮೆ ಇರುತ್ತವೆ ಎಂಬುದನ್ನು ಅಪ್ಲಿಕೇಶನ್ ತೋರಿಸುತ್ತದೆ. ನಿಮ್ಮ ಸ್ಕಿನ್ ಯಾವ ರೀತಿಯದ್ದು ಮತ್ತು ನೀವು ಬಳಸಿರುವ ಸನ್ಸ್ಕ್ರೀನ್ ಯಾವ ಮಾದರಿಯದ್ದು ಎಂಬುದನ್ನು ಅಪ್ಲಿಕೇಶನ್ಗೆ ಹೇಳಿದರೆ, ನೀವು ಬಿಸಿಲಿನಲ್ಲಿ ಹೋಗಬಹುದೇ ಬೇಡವೇ ಎಂಬುದನ್ನು ಅಪ್ಲಿಕೇಶನ್ ತಿಳಿಸುತ್ತದೆ.

ವಾಟರ್ ಯುವರ್ ಬಾಡಿ
ಕೆಲವರ ಪ್ರಕಾರ ದಿನಕ್ಕೆ 4 ಲೀಟರ್ ನೀರು ಕುಡಿಯಬೇಕು. ಮತ್ತೆ ಕೆಲವರು 3 ಬಾಟಲು ನೀರು ಕುಡಿಯಬೇಕು. ಇನ್ನು ಕೆಲವರು ಹೆಚ್ಚು ನೀರು ಕುಡಿದರೂ ಆರೋಗ್ಯಕ್ಕೆ ಹಾನಿ ಎಂದು ಹೆದರಿಸುತ್ತಾರೆ. ಸಾಕಷ್ಟು ಜನರಿಗೆ ಕೆಲಸದ ಒತ್ತಡದಲ್ಲಿ ನೀರು ಕುಡಿಯಲು ನೆನಪಿರುವುದಿಲ್ಲ. ಇದೆಲ್ಲ ಸಮಸ್ಯೆಗೂ ಒಂದೇ ಪರಿಹಾರವೆಂದರೆ ವಾಟರ್ ಯುವರ್ ಬಾಡಿ ಎಂಬ ಅಪ್ಲಿಕೇಶನ್.
ಅಪ್ಲಿಕೇಶನ್ ಡೌನ್ಲೋಡ್ ಮಾಡಿ ನಿಮ್ಮ ದೇಹದ ಭಾರ ಎಷ್ಟು ಎಂಬುದನ್ನು ಅಪ್ಲಿಕೇಶನ್ಗೆ ಹೇಳಿದರೆ ಸಾಕು. ನೀವು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ಅಪ್ಲಿಕೇಶನ್ ಹೇಳುತ್ತದೆ. ನಿಗದಿತ ಸಮಯಕ್ಕೆ ಎಷ್ಟು ಪ್ರಮಾಣದ ನೀರು ಕುಡಿಯಬೇಕು ಎಂಬುದನ್ನು ನೆನಪಿಸು ಎಂದು ಹೇಳಿದರೆ ಅಪ್ಲಿಕೇಶನ್ ಅದನ್ನೂ ಮಾಡುತ್ತದೆ! ಅದೂ ಉಚಿತವಾಗಿ!!

- ವಕ್ರದಂತ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com