

ಮಂಗಳೂರು: ಆಳ ಸಮುದ್ರ ಮೀನುಗಾರಿಕೆ ಎಂದರೆ ಕಠಿಣ ಶ್ರಮ, ಬಿರುಗಾಳಿ, ಭಾರೀ ಅಲೆಗಳು ಹಾಗೂ ಅಸಾಧಾರಣ ಪರಿಸ್ಥಿತಿಗಳ ನಡುವೆ ನಡೆಯುವ ಸಾಹಸಮಯ ವೃತ್ತಿ. ಸಾಮಾನ್ಯವಾಗಿ ಪುರುಷರೇ ಆಳ್ವಿಕೆ ನಡೆಸುವ ಈ ಕ್ಷೇತ್ರದಲ್ಲಿ ಮಹಿಳೆಯರ ಉಪಸ್ಥಿತಿ ಬಹಳ ವಿರಳ. ಆದರೆ, ಮಂಗಳೂರಿನ ಈ ಯುವತಿ ಸಂಪ್ರದಾಯದ ಗಡಿಗಳನ್ನು ಮೀರಿ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.
26 ವರ್ಷದ ಪ್ರಾಪ್ತಿ ಮೆಂಡನ್ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದು, ಸಾಧನೆ ಮಾಡುತ್ತಿದ್ದಾರೆ. ಬೋಟ್‌ನಲ್ಲಿ ಪುರುಷ ಸಿಬ್ಬಂದಿಯೊಂದಿಗೆ ಸಮಾನವಾಗಿ ಕೆಲಸ ಮಾಡುತ್ತಾ, ಬಲೆ ಬೀಸುವುದು, ಬಲೆ ಎಳೆಯುವುದು, ಮೀನುಗಳನ್ನು ವಿಂಗಡಿಸುವುದು ಸೇರಿದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಾರೆ.
ಪ್ರಾಪ್ತಿ ಅವರಿಗೆ ಸಮುದ್ರ ಮೇಲಿದ ಪ್ರೀತಿ ಬಾಲ್ಯದಲ್ಲೇ ಆರಂಭವಾಗಿತ್ತು. ಅವರ ತಂದೆ ಜಯಪ್ರಕಾಶ್ ಮೆಂಡನ್ ಸುಮಾರು 15 ವರ್ಷಗಳ ಕಾಲ ನೈಜೀರಿಯಾದಲ್ಲಿ ಮೀನುಗಾರಿಕಾ ಹಡಗಿನಲ್ಲಿ ಕ್ಯಾಪ್ಟನ್ ಆಗಿ ಕೆಲಸ ಮಾಡಿದ್ದರು. ನಂತರ ಮಂಗಳೂರಿಗೆ ಬಂದು ತಮ್ಮದೇ ಮೀನುಗಾರಿಕಾ ಬೋಟ್‌ಗಳನ್ನು ನಡೆಸಲು ಆರಂಭಿಸಿದರು.
ತಂದೆಯ ಕೆಲಸವನ್ನು ಹತ್ತಿರದಿಂದ ನೋಡುತ್ತಾ ಬೆಳೆದ ಪ್ರಾಪ್ತಿ ಅವರಿಗೆ ಸಮುದ್ರದ ಬಗ್ಗೆ ಕುತೂಹಲ ಹೆಚ್ಚಿತು. 2010ರಲ್ಲಿ ಕುಟುಂಬ ಉಡುಪಿ ಜಿಲ್ಲೆಯಿಂದ ಮಂಗಳೂರಿಗೆ ಬಂದ ಬಳಿಕಆ ಆಸಕ್ತಿ ಮತ್ತಷ್ಟು ಗಟ್ಟಿಯಾಗಿದೆ. ಶಾಲೆಯಲ್ಲಿ ಓದುತ್ತಿದ್ದಾಗಲೇ ವಾರಾಂತ್ಯಗಳಲ್ಲಿ ತಂದೆಯೊಂದಿಗೆ ಸಮುದ್ರಕ್ಕೆ ತೆರಳಿ ಮೀನುಗಾರಿಕೆಯ ಅನುಭವ ಪಡೆದುಕೊಳ್ಳುತ್ತಿದ್ದರು.
ಮೊದಲಿಗೆ ಈ ವೃತ್ತಿಯ ಅಪಾಯಗಳನ್ನು ಗಮನಿಸಿ ಅವರ ತಾಯಿ ಕಲಾವತಿ ಜೆ. ಮಗಳ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಮುದ್ರದ ಮಧ್ಯೆ ಎದುರಾಗುವ ಅಪಾಯಗಳು ಮತ್ತು ಕಠಿಣ ಪರಿಸ್ಥಿತಿಗಳ ಬಗ್ಗೆ ಅವರಿಗೆ ಭಯವಿತ್ತು. ಆದರೆ, ಮಗಳ ದೃಢಸಂಕಲ್ಪ ಮತ್ತು ಆಸಕ್ತಿ ನೋಡಿ ಬಳಿಕ ಅವರಬ ಸಹ ಬೆಂಬಲ ನೀಡಿದರು.
ಪ್ರಾಪ್ತಿ ಮಂಗಳೂರಿನ ಫಿಷರೀಸ್ ಕಾಲೇಜಿನಲ್ಲಿ ಫಿಷರೀಸ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಮುದ್ರದ ಪ್ರಕ್ರಿಯೆಗಳು, ಮೀನುಗಾರಿಕೆ ವಿಧಾನಗಳು, ಬೋಟ್ ನಿರ್ವಹಣೆ, ಬಲೆ ಬೀಸುವ ಮತ್ತು ಎಳೆಯುವ ತಂತ್ರಗಳ ಕುರಿತು ಅವರು ಅಧ್ಯಯನ ನಡೆಸಿದರು.
ಮೀನುಗಾರಿಕೆಯ ಪ್ರಾಯೋಗಿಕ ಅನುಭವ ನನ್ನ ಶಿಕ್ಷಣಕ್ಕೆ ಬಹಳ ಸಹಾಯವಾಗಿದೆ. ಪುಸ್ತಕದಲ್ಲಿ ಕಲಿತದ್ದನ್ನು ಸಮುದ್ರದಲ್ಲಿ ಅನುಭವಿಸುವುದರಿಂದ ಸಂಶೋಧನೆಗೆ ದೊಡ್ಡ ಬೆಂಬಲ ದೊರಕಿತು ಎಂದು ಪ್ರಾಪ್ತಿ ಹೇಳಿದ್ದಾರೆ.
ಕಾಲಕ್ರಮೇಣ ಅನುಭವ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ. ನನಗೆ ಸಮುದ್ರದ ಕುರಿತು ಯಾವುದೇ ಭಯ ಇಲ್ಲ ಎಂಬುದನ್ನು ನೋಡಿ ನನ್ನ ತಂದೆಯೂ ಸಂತೋಷಪಟ್ಟರು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಂಜೇಶ್ವರದಲ್ಲಿ ನಡೆದ ಘಟನೆಯೊಂದನ್ನು ಸಾಕ್ಷಿಯವರು ಸ್ಮರಿಸಿದ್ದು, ಮೀನುಗಾರಿಕೆಗೆ ತೆರಳಿದಾಗ ಸ್ಥಳೀಯ ಮೀನುಗಾರರು ಬೋಟ್‌ನಲ್ಲಿ ನಾನು ಕೆಲಸ ಮಾಡುತ್ತಿರುವುದನ್ನು ನೋಡಿ ಆಶ್ಚರ್ಯಪಟ್ಟರು. ಕೆಲವರು ‘ನಿನ್ನನ್ನು ಯಾರಾದರೂ ಅಪಹರಿಸಿದ್ದಾರೆಂಯೇ?’ ಎಂದು ಪ್ರಶ್ನಿಸಿದ್ದರು ಎಂದು ತುಸು ನಕ್ಕರು ಎಂದು ಹೇಳಿದರು.
ಕಳೆದ ಆರು ವರ್ಷಗಳಿಂದ ಪ್ರಾಪ್ತಿ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಬೋಟ್‌ನಲ್ಲಿ ಇತರ ಸಿಬ್ಬಂದಿಯಂತೆ ಕೆಲಸ ಮಾಡುತ್ತಾ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆ ಏಳುತ್ತದೆ. ಈ ಸಮಯದಲ್ಲಿ ಮೀನುಗಾರಿಕೆ ಅತ್ಯಂತ ಕಷ್ಟಕರವಾಗಿರುತ್ತದೆ. ಆದರೆ, ಈ ಸವಾಲುಗಳನ್ನೂ ಎದುರಿಸುತ್ತಾ ಪ್ರಾಪ್ತಿ ತಮ್ಮ ಪ್ರಯಾಣವನ್ನು ಮುಂದುವರಿಸಿದ್ದಾರೆ.
ಪ್ರಾಪ್ತಿ ಮೆಂಡನ್ ಅವರ ಕಥೆ ಕೇವಲ ಮೀನುಗಾರಿಕೆಯ ಕಥೆಯಲ್ಲ. ಅದು ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂಬ ಸಂದೇಶವನ್ನು ನೀಡುತ್ತದೆ. ಸಮುದ್ರದ ಅಲೆಗಳನ್ನು ಎದುರಿಸಿ ತಮ್ಮ ಕನಸನ್ನು ಬೆನ್ನಟ್ಟುತ್ತಿರುವ ಈ ಯುವತಿ ಇತರ ಮಹಿಳೆಯರಿಗೂ ಪ್ರೇರಣೆಯಾಗಿದ್ದಾರೆ.
ಇಂದು ಪ್ರಾಪ್ತಿ ಮೆಂಡನ್ ಅಲೆಗಳ ಮಧ್ಯೆ ಜೀವನ ಕಟ್ಟಿಕೊಂಡು, ‘ಸಾಹಸಕ್ಕೆ ಯಾವುದೇ ಲಿಂಗ ಭೇದವಿಲ್ಲ’ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಅವರ ಕಥೆ ಮೀನುಗಾರಿಕೆ ಲೋಕದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ.
Advertisement