ಜಯಮಾರ್ತಾಂಡನಿಂದ ಪ್ರಶಾಂತನವರೆಗೆ! ಮೈಸೂರು ದಸರಾದಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊತ್ತ ಗಜರಾಜರ ರೋಚಕ ಇತಿಹಾಸ

ಮೈಸೂರು ದಸರಾ ಅಂದ್ರೆ ಅರಮನೆ ದೀಪಾಲಂಕಾರ ಮಾತ್ರವಲ್ಲ, ಜಂಬೂಸವಾರಿಯೇ ಅದರ ಜೀವಾಳ. ಅರಮನೆಯಿಂದ ಬನ್ನಿಮಂಟಪದವರೆಗೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗುವ ಗಜರಾಜನನ್ನು ನೋಡುವುದು ಕಣ್ಣಿಗೆ ಹಬ್ಬ. ಆ 750 ಕೆಜಿ ಚಿನ್ನದ ಅಂಬಾರಿನ್ನ ಹೊತ್ತ ಆನೆಗಳ ರೋಮಾಂಚಕ ಇತಿಹಾಸ ಇಲ್ಲಿದೆ:
Mysore Dasara: The Legacy of Golden Howdah Elephants from Jayamarthanda to Prashantha
ಚಿನ್ನದ ಅಂಬಾರಿ ಹೊತ್ತ ಗಜರಾಜರ ರೋಚಕ ಇತಿಹಾಸOnline Desk
Updated on: 

ದಸರಾ ಗಜಪಡೆಯ ಕಥೆ: ಮೈಸೂರು ದಸರಾ ಅಂದ್ರೆ ಕಣ್ಣಿಗೆ ಹಬ್ಬ. ಅದರಲ್ಲೂ ಕೊನೆಯ ದಿನದ ಜಂಬೂಸವಾರಿ ನೋಡಲು ಲಕ್ಷಾಂತರ ಜನ ಕಾಯುತ್ತಾರೆ. ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಆ ಮೆರವಣಿಗೆಯಲ್ಲಿ ಎಲ್ಲರ ಕಣ್ಣು ಹುಡುಕುವುದು ಒಂದೇ ದೃಶ್ಯವನ್ನು, 750 ಕೆಜಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಗಜರಾಜನನ್ನು. ಈ ಆನೆಗೆ ಆಯ್ಕೆಯಾಗುವುದು ಸುಲಭವಲ್ಲ, ವರ್ಷಗಟ್ಟಲೆ ತರಬೇತಿ, ತೂಕ, ನಡಿಗೆ, ತಾಳ್ಮೆ ಎಲ್ಲವನ್ನೂ ಪರೀಕ್ಷಿಸಿ ಆಯ್ಕೆ ಮಾಡಲಾಗುತ್ತದೆ. ಕಳೆದ 416 ವರ್ಷಗಳ ಇತಿಹಾಸದಲ್ಲಿ ಈ ಗೌರವ ಸಿಕ್ಕಿರುವುದು ಬೆರಳೆಣಿಕೆಯ ಆನೆಗಳಿಗೆ ಮಾತ್ರ. ಅದರಲ್ಲೂ, ಕಳೆದ ಆರು ವರ್ಷಗಳಿಂದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅಭಿಮನ್ಯು ಈಗ 60 ವರ್ಷ ದಾಟಿದ್ದರಿಂದ ನಿವೃತ್ತಿ ಪಡೆದಿದ್ದಾನೆ. ಈಗ ಅವನ ಜಾಗಕ್ಕೆ 54 ವರ್ಷದ ಪ್ರಶಾಂತ ಆಯ್ಕೆಯಾಗಿದ್ದಾನೆ. ಹಾಗಾದ್ರೆ, ಅಂಬಾರಿ ಹೊತ್ತ ಮೊದಲ ಆನೆ ಯಾವುದು? ಆ ಕುರಿತ ವರದಿ ಇಲ್ಲಿದೆ:

ಮೊದಲ ಅಂಬಾರಿ ವೀರ ಜಯಮಾರ್ತಾಂಡ

ಒಡೆಯರ್ ಕಾಲದಲ್ಲಿ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಮೊದಲ ಹೆಮ್ಮೆಯ ಆನೆ ಜಯಮಾರ್ತಾಂಡ. ಮುಮ್ಮಡಿ ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ದಾಖಲೆಗಳಲ್ಲಿ ಉಲ್ಲೇಖವಾದ ಮೊದಲು ಅಂಬಾರಿ ಹೊತ್ತ ಆನೆಯಾಗಿದೆ. 1870 ರಿಂದ 1915 ರವರೆಗೆ ದಸರಾದಲ್ಲಿ ಭಾಗವಹಿಸಿ, 10ನೇ ಚಾಮರಾಜ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಹೊತ್ತಿತ್ತು. ಈ ಮೂಲಕ ಬರೋಬ್ಬರಿ 45 ವರ್ಷಗಳ ಕಾಲ ಅಂಬಾರಿ ಹೊತ್ತು ಇತಿಹಾಸ ನಿರ್ಮಿಸಿದೆ. ಅದರಲ್ಲೂ, ಇದರ ರಾಜಗಾಂಭೀರ್ಯ ಹಾಗೂ ನಿಷ್ಠೆಗೆ ಮೆಚ್ಚಿದ ಮಹಾರಾಜರು ಮೈಸೂರು ಅರಮನೆಯ ಮುಖ್ಯ ದ್ವಾರಗಳಲ್ಲೊಂದಕ್ಕೆ "ಜಯಮಾರ್ತಾಂಡ ದ್ವಾರ" ಎಂದು ಹೆಸರಿಟ್ಟಿದ್ದಾರೆ.

ಹಾಗಾದ್ರೆ, ಜಯಮಾರ್ತಾಂಡಗೂ ಮುನ್ನ ಅಂಬಾರಿ ಹೊರುತಿದ್ದವರು ಯಾರು?

1610ರಲ್ಲಿ ರಾಜ ಒಡೆಯರ್‌ ಅವರು ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಮಾದರಿಯಲ್ಲೇ ಮೈಸೂರು ದಸರಾ ಮಹೋತ್ಸವವನ್ನು ಪುನರಾರಂಭಿಸಿದರು. ಆ ಕಾಲದಿಂದಲೇ ಜಂಬೂಸವಾರಿಯಲ್ಲಿ ಪಟ್ಟದ ಆನೆಗಳ ಮೇಲೆ ಅಂಬಾರಿಯನ್ನು ಕಟ್ಟಿ ಮೆರವಣಿಗೆ ಮಾಡುವ ಪದ್ಧತಿ ಇತ್ತು. ಆದರೆ, ಜಯಮಾರ್ತಾಂಡ ಆನೆಗಿಂತ ಮುಂಚೆ ಅಂಬಾರಿಯನ್ನು ಹೊರುವ ಆನೆಗಳನ್ನ ದಾಖಲೆಗಳಲ್ಲಿ ಕೇವಲ ಪಟ್ಟದ ಆನೆ / ಮಂಗಲ ಗಜ ಎಂದಷ್ಟೇ ಉಲ್ಲೇಖವಾಗುತ್ತಿದ್ದವು.

ಜಯಮಾರ್ತಾಂಡನ ಉತ್ತರಾಧಿಕಾರಿಗಳು...

ಜಯಮಾರ್ತಾಂಡನ ನಂತರ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್ ರಾಜ್ ಮುಂತಾದ ಆನೆಗಳೂ ಅಂಬಾರಿ ಹೊತ್ತ ಇತಿಹಾಸ ಹೊಂದಿವೆ.

ಹಾಲಿವುಡ್‌ನಲ್ಲಿ ಮಿಂಚಿದ ಐರಾವತ

1935ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರ "ದಿ ಎಲಿಫೆಂಟ್ ಬಾಯ್"ಗೆ ಈ ಅಂಬಾರಿ ಆನೆಯಾದ ಐರಾವತನನ್ನು ಬಳಸಲಾಯಿತು. ಐರಾವತನ  ಮಾವುತನ ಮಗ ಸಾಬುನ ವೃತ್ತಿಜೀವನವನ್ನು ಆಧಾರಿಸಿತ್ತು.

Mysore Dasara: The Legacy of Golden Howdah Elephants from Jayamarthanda to Prashantha
'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

ಅಂಬಾರಿ ಆನೆಗಳಲ್ಲೇ ದೈತ್ಯ ಬಿಳಿಗಿರಿ

ಅಂಬಾರಿ ಹೊತ್ತ ಆನೆಗಳಲ್ಲಿ ಅತ್ಯಂತ ದೈತ್ಯ ಎಂದರೆ ಅದು ಬಿಳಿಗಿರಿ ಆನೆ. ಸುಮಾರು 10.5 ಅಡಿ ಎತ್ತರ ಹಾಗೂ 7,000 ಕೆ.ಜಿ. ತೂಕವಿದ್ದ ಬಿಳಿಗಿರಿಯು ಮಹಾರಾಜರನ್ನು ಹೊತ್ತೊಯ್ದ ಕೊನೆಯ ಆನೆ ಎಂಬ ಹೆಗ್ಗಳಿಕೆ ಹೊಂದಿದೆ.

ಡಾ. ರಾಜ್‌ ಹೊತ್ತು ಮೆರೆಸಿದ ರಾಜೇಂದ್ರ

ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಅಚ್ಚುಮೆಚ್ಚಿನ ಆನೆಯಾಗಿ ರಾಜೇಂದ್ರನು ಗಂಧದ ಗುಡಿ ಚಿತ್ರದಲ್ಲಿ ಅಣ್ಣಾವ್ರನ್ನು ತನ್ನ ದಂತದ ಮೇಲೆ ಕುಳಿಸಿಕೊಂಡು ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿಗೆ ಸ್ಟೆಪ್ ಹಾಕಿದ್ದ! ಇದರೊಂದಿಗೆ, ರಾಜರ ನಂತರ ಮೊದಲ ಬಾರಿಗೆ ಚಾಮುಂಡೇಶ್ವರಿ ದೇವಿಯ ವಿಗ್ರಹದೊಂದಿಗೆ ಅಂಬಾರಿ ಹೊತ್ತ ಆನೆ ಎಂಬ ಖ್ಯಾತಿಯು ಈತನ ಪಾಲಿಗಿದೆ.

ದಾಖಲೆಗಳ ಸರದಾರ ದ್ರೋಣ

ನಾಗರಹೊಳೆ ಕಾಡಿನಿಂದ ಬಂದಿದ್ದ ದ್ರೋಣ, ಪ್ರಜಾಪ್ರಭುತ್ವದ ಆರಂಭದ ದಿನಗಳಲ್ಲಿ ಅರ್ಥಾತ್ 1980ರಿಂದ 1998ರವರೆಗೆ ಸತತ 18 ವರ್ಷಗಳ ಕಾಲ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿ ಕನ್ನಡಿಗರ ಮನಗೆದ್ದಿದ್ದನು. ಜೊತೆಗೆ, ಟಿವಿಯಲ್ಲಿ ಪ್ರಸಾರವಾದ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಧಾರಾವಾಹಿಯಲ್ಲೂ ನಟಿಸಿದ್ದ. ಸಾರ್ವಜನಿಕರ ಭಾರೀ ಕೋಲಾಹಲ, ಶಬ್ದಗಳ ನಡುವೆಯೂ ಕಿಂಚಿತ್ತೂ ವಿಚಲಿತನಾಗದೆ ಸಾಗುತ್ತಿದ್ದ ದ್ರೋಣ, ದುರದೃಷ್ಟವಶಾತ್ 1998ರಲ್ಲಿನಾಗರಹೊಳೆಯಲ್ಲಿ ವಿದ್ಯುತ್ ತಂತಿ ತಗುಲಿ ದ್ರೋಣ ಮೃತಪಟ್ಟಾಗ ಇಡೀ ನಾಡೇ ಕಣ್ಣೀರಿಟ್ಟಿತು.

ಶಾಂತಮೂರ್ತಿ ಬಲರಾಮ

ದಸರಾ ಇತಿಹಾಸದ ಅತ್ಯಂತ ಶಾಂತ ಹಾಗೂ ಬುದ್ಧಿವಂತ ಆನೆಗಳಲ್ಲಿ ದ್ರೋಣನ ನಂತರ ಬಂದ ಬಲರಾಮ ಅಗ್ರಗಣ್ಯ. ಒಂದು ಕಣ್ಣಿನಲ್ಲಿ ದೃಷ್ಟಿ ಇಲ್ಲದಿದ್ದರೂ ರಾಜಗಾಂಭೀರ್ಯದಿಂದ, 1999ರಿಂದ 2011ರವರೆಗೆ 13 ಬಾರಿ ಅಂಬಾರಿ ಹೊತ್ತ ಬಲರಾಮ, ಅತ್ಯಂತ ಮಿತಾಹಾರಿ ಮತ್ತು ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದ.

ಗಜಪಡೆ ಶಕ್ತಿಶಾಲಿ ನಾಯಕ ಅರ್ಜುನ

ದ್ರೋಣನ ನಂತರ 1998ರಲ್ಲಿ ಒಮ್ಮೆ ಅಂಬಾರಿ ಹೊತ್ತಿದ್ದ ಅರ್ಜುನ, ಮಾವುತನನ್ನು ಕೊಂದ ಆರೋಪದಿಂದ ಅಂಬಾರಿ ಆನೆ ಪಟ್ಟದಿಂದ ಕೆಳಗೆ ಇಳಿಸಲಾಗಿತ್ತು. ಆದರೆ, ಬಲರಾಮನಿಗೆ ವಯಸ್ಸಾದ ಕಾರಣ 2012 ರಿಂದ 2019ರ ತನಕ ಒಟ್ಟು 8 ಬಾರಿ ಅಂಬಾರಿ ಅಂಬಾರಿ ಹೊತ್ತ. ಅದರಲ್ಲೂ, ಭೀಕರ ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಕುಂಕಿ ಆನೆಯಾಗಿ ಅಪ್ರತಿಮ ಸಾಹಸ ಮೆರೆದಿದ್ದ ಮಹಾ ಯೋಧ ಈತ 4 ಡಿಸೆಂಬರ್ 2023 ರಂದು ಹಾಸನದ ಸಕಲೇಶಪುರದ ಯಸಳೂರಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಕಾಡು ಸಲಗದ ದಾಳಿಗೆ ವೀರಮರಣ ಹೊಂದಿದ.

ಮಹಾಯೋಧ ಸಕಲಕಲಾವಲ್ಲಭ ಅಭಿಮನ್ಯು 

ಅರ್ಜುನನ ಉತ್ತರಾಧಿಕಾರಿಯಾಗಿ  ಸತತ 6 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ವಿಜೃಂಭಣೆಯಿಂದ ಹೆಜ್ಜೆ ಹಾಕಿದ್ದ, ಏಷ್ಯಾದ ನಂ.1 ಕುಮ್ಕಿ ಆನೆಯಾದ ಅಭಿಮನ್ಯು, 2020ರಿಂದ 2025ರವರೆಗೆ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಮರೆದಿದ್ದಾನೆ. ಅದರಲ್ಲೂ, ಸುಮಾರು 25 ವರ್ಷಗಳಿಗೂ ಅಧಿಕ ಕಾಲ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಮತ್ತಿಗೋಡು ಶಿಬಿರದ ಈ ರಣ ಬೇಟೆಗಾರ, 150ಕ್ಕೂ ಹೆಚ್ಚು ಕಾಡಾನೆ, 50 ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾನೆ. ಅದರಂತೆ, ಈಗ  ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ಪಡೆದಿದ್ದು, ನಿಶಾನೆ ಆನೆಯಾಗಿ ಭಾಗವಹಿಸುತ್ತಿದ್ದಾನೆ.

ನೂತನ ಅಂಬಾರಿ ಗಜರಾಜ ಪ್ರಶಾಂತ

ಈ ಶ್ರೇಷ್ಠ ಇತಿಹಾಸದ ಸಾಲಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವ ದುಬಾರೆ ಆನೆ ಶಿಬಿರದ ಗಜರಾಜ ಪ್ರಶಾಂತ, ತನ್ನ ಪ್ರಶಾಂತ ಹಾಗೂ ಗಂಭೀರ ಹೆಜ್ಜೆಗಳ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ದೈವಿಕ ಜವಾಬ್ದಾರಿಯನ್ನು ನಿರ್ವಹಿಸಲು ಸಜ್ಜಾಗಿದ್ದಾನೆ. ಸತತ 18 ಬಾರಿ ದಸರಾದ ಭಾಗವಾಗಿರುವ ಪ್ರಶಾಂತ ಈ ಬಾರಿ ಅಂಬಾರಿ ಹೊತ್ತು ಸಾಗುತ್ತಿದ್ದರೆ, ಮತ್ತೊಂದು ಬಲಿಷ್ಠ ಗಜ ಧನಂಜಯ ಮೀಸಲು ಅಂಬಾರಿ ಆನೆಯಾಗಿ ಸಾಥ್ ನೀಡಲಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com