ಮೈಸೂರು: ಮಾಥುಲ್ಯ ಬಾರಿಸಿದ ಎರಡು ಗೋಲ್‌ಗಳ ಸಹಾಯದೊಂದಿಗೆ ತ್ರಿವೇಂಡ್ರಂನ ಸಾಯ್ ಸ್ಪೋರ್ಟ್ಸ್ ಹಾಸ್ಟೆಲ್ ತಂಡ, ಕರ್ನಾಟಕದ ಕೂಡ್ಗಿ ಸ್ಪೋರ್ಟ್ಸ್ ಶಾಲೆ ವಿರುದ್ಧ 5-0 ಅಂತರದ ಗೆಲುವು ಸಾಧಿಸಿದೆ.
ಮೈಸೂರು ವಿವಿ ಸ್ಫೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ಮೇಜರ್ ಧ್ಯಾನ್‌ಚಂದ್ ಆಹ್ವಾನಿತ ಮಹಿಳೆಯರ ಹಾಕಿ ಪಂದ್ಯಾವಳಿಯ 'ಎ' ಗುಂಪಿನ ಲೀಗ್ ಪಂದ್ಯಾವಳಿಯಲ್ಲಿ ತ್ರಿವೇಂಡ್ರಂ ತಂಡ ಜಯಗಳಿಸಿತು. ಮಾಥುಲ್ಯ ಪಂದ್ಯದ 36 ಮತ್ತು 53ನೇ ನಿಮಿಷದಲ್ಲಿ ಬಾರಿಸಿದ ಗೋಲ್‌ಗಳು ತಂಡದ ಗೆಲುವಿಗೆ ಸಹಾಯವಾಯಿತು. ಉಳಿದಂತೆ ಅಥಿರ, ಐಶ್ವರ್ಯ ಮತ್ತು ರೇಷ್ಮಾ ಸಹ ಗೋಲ್ ಬಾರಿಸಿದ್ದಾರೆ. ಇದಕ್ಕೂ ಮುನ್ನ ತ್ರಿವೇಂಡ್ರಂನ ಎಸ್‌ಎಐ ತಂಡವು ಸಹರನ್‌ಪುರ್ ವಿರುದ್ಧ 6-2 ಅಂತರದ ಗೆಲುವು ಸಾಧಿಸಿತು.
'ಬಿ' ಗುಂಪಿನ ಪಂದ್ಯಾವಳಿಯಲ್ಲಿ ಮೈಸೂರು ಸ್ಪೋರ್ಟ್ಸ್ ಹಾಸ್ಟೆಲ್ ಮತ್ತು ಭೂಪಾಲ್‌ನ ಸಾಯ್ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು ತಲಾ 1 ಅಂಕ ಪಡೆದುಕೊಂಡವು.