ಅಡಿಲೇಡ್ ಟೆಸ್ಟ್: ಆಸ್ಟ್ರೇಲಿಯಾಗೆ ದಿನದ ಗೌರವ

ಮೊದಲ ಟೆಸ್ಟ್ ಮೊದಲ ದಿನದಾಟ ಅಂತ್ಯವಾಗಿದ್ದು, ಅತಿಥೇಯ ತಂಡ 6 ವಿಕೆಟ್ ನಷ್ಟಕ್ಕೆ 354ರನ್‌ಗಳನ್ನು ಗಳಿಸಿ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದೆ.
ಅಮೋಘ ಶತಕ ಗಳಿಸಿದ ಆಸ್ಟ್ರೇಲಿಯಾ ತಂಡದ ಡೇವಿಡ್ ವಾರ್ನರ್ ಶತಕವನ್ನು ದಿ.ಫಿಲಿಪ್ ಹ್ಯೂಸ್‌ಗೆ ಅರ್ಪಿಸಿದ ಕ್ಷಣ.
ಅಮೋಘ ಶತಕ ಗಳಿಸಿದ ಆಸ್ಟ್ರೇಲಿಯಾ ತಂಡದ ಡೇವಿಡ್ ವಾರ್ನರ್ ಶತಕವನ್ನು ದಿ.ಫಿಲಿಪ್ ಹ್ಯೂಸ್‌ಗೆ ಅರ್ಪಿಸಿದ ಕ್ಷಣ.
Updated on: 

ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಮೊದಲ ದಿನದಾಟ ಅಂತ್ಯವಾಗಿದ್ದು, ಅತಿಥೇಯ ತಂಡ 6 ವಿಕೆಟ್ ನಷ್ಟಕ್ಕೆ 354ರನ್‌ಗಳನ್ನು ಗಳಿಸಿ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ನಾಯಕ ಮೈಕೆಲ್ ಕ್ಲಾರ್ಕ್ ಅವರು ಮೊದಲು ಬ್ಯಾಟಿಂಗ್ ಆರಿಸಿಕೊಂಡರು. ಆರಂಭಿಕರಾಗಿ ಸಿಜೆಎಲ್ ರೋಜರ್ಸ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ಕ್ರೀಸ್‌ಗೆ ಇಳಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ಆರಂಭಿಸಿದ ಡೇವಿಡ್ ವಾರ್ನರ್ ತಮ್ಮ ಎಂದಿನ ಶೈಲಿಯಲ್ಲಿಯೇ ವೇಗವಾಗಿ ರನ್ ಕಲೆಹಾಕುತ್ತಾ ಹೋದರು. ಆದರೆ ಮತ್ತೊಂದು ತುದಿಯಲ್ಲಿ ಕ್ರೀಸ್‌ಗೆ ಅಂಟಿಕೊಳ್ಳಲು ಹೆಣಗಾಡುತ್ತಿದ್ದ ರೋಜರ್ಸ್ ಆಸಿಸ್ ತಂಡದ ಮೊತ್ತ 50 ರನ್‌ಗಳಿದ್ದಾಗ ಇಶಾಂತ್ ಶರ್ಮಾ ಅವರ ಎಸೆತವನ್ನು ತಪ್ಪಾಗಿ ಅರ್ಥೈಸಿ ಶಿಖರ್ ಧವನ್ ಕ್ಯಾಚಿತ್ತು ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

ಈ ವೇಳೆ ರೋಜರ್ಸ್ ಅವರ ವೈಯುಕ್ತಿಕ ಮೊತ್ತ ಕೇವಲ 9 ರನ್ ಗಳಾಗಿತ್ತು. ಬಳಿಕ ಬಂದ ವಾಟ್ಸನ್ (14 ರನ್)ಕೂಡ ನಿಧಾನ ಗತಿಯ ಮೊರೆ ಹೋಗಿ ಭಾರತ ವೇಗಿ ವರುಣ್ ಆರೋನ್‌ಗೆ ವಿಕೆಟ್ ಒಪ್ಪಿಸಿದರು. ದಿಢೀರ್ ಕುಸಿತಗೊಂಡ ಆಸಿಸ್ ತಂಡಕ್ಕೆ ನಾಯಕ ಮೈಕೆಲ್ ಕ್ಲಾರ್ಕ್ ಮತ್ತು ಡೇವಿಡ್ ವಾರ್ನರ್ ಆಸರೆಯಾದರು. ವಾರ್ನರ್ ತಮ್ಮ ಸ್ಫೋಟಕ ಆಟದಿಂದ ರನ್ ಕದಿಯುತ್ತಿದ್ದರೆ, ಕ್ಲಾರ್ಕ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಹೀಗಾಗಿ ಈ ಜೋಡಿಯನ್ನು ಬೇರ್ಪಡಿಸಲು ಭಾರತದ ಬೌಲರ್‌ಗಳು ಹೆಣಗಾಡಬೇಕಾಯಿತು. ಇದೇ ಸಂದರ್ಭದಲ್ಲಿಯೇ ಸ್ಫೋಟಕ ಆಟವಾಡುತ್ತಿದ್ದ ವಾರ್ನರ್ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು. ಕೇವಲ 106 ಎಸೆತಗಳಲ್ಲಿ ವಾರ್ನರ್ ಶತಕ ಗಳಿಸಿದ್ದರು. ಶತಕದ ಬಳಿಕ ಇತ್ತೀಚೆಗೆ ನಿಧನರಾದ ಫಿಲಿಪ್ ಹ್ಯೂಸ್‌ಗೆ ತಮ್ಮ ಶತಕವನ್ನು ಅರ್ಪಿಸಿದರು. ವಾರ್ನರ್ ಮತ್ತು ಕ್ಲಾರ್ಕ್ ಜೋಡಿ ಬರೊಬ್ಬರಿ 118ರನ್ ಗಳನ್ನು ಕಲೆಹಾಕಿತ್ತು.

ಅಂತಿಮವಾಗಿ ಪಂದ್ಯದ 44ನೇ ಓವರ್‌ನಲ್ಲಿ ಸ್ನಾಯು ಎಳೆತಕ್ಕೆ ಒಳಗಾದ ನಾಯಕ ಮೈಕೆಲ್ ಕ್ಲಾರ್ಕ್ ಗಾಯಗೊಂಡು ಮೈದಾನದಿಂದ ಹೊರನಡೆದರು. ಆಗ ತಂಡದ ಮೊತ್ತ 2 ವಿಕೆಟ್ ನಷ್ಟಕ್ಕೆ 206ರನ್‌ಗಳಾಗಿತ್ತು. ಕ್ಲಾರ್ಕ್ ಬಳಿಕ ವಾರ್ನರ್‌ರೊಂದಿಗೆ ಕ್ರೀಸ್ ಹಂಚಿಕೊಂಡ ಮಧ್ಯಮ ಕ್ರಮಾಂಕದ ಆಟಗಾರ ಸ್ಮಿತ್, ವಾರ್ನರ್ ಅವರ ಜೊತೆಗೂಡಿ ಅರ್ಧ ಶತಕದ ಜೊತೆಯಾಟ ನೀಡಿದರು.

ತಂಡದ ಮೊತ್ತ 258ರನ್‌ಗಳಾಗಿದ್ದಾಗ ವಾರ್ನರ್ ಕೂಡ ಕೆವಿ ಶರ್ಮಾ ಅವರ ಬೌಲಿಂಗ್‌ನಲ್ಲಿ ಇಶಾಂತ್‌ಗೆ ಕ್ಯಾಚ್ ನೀಡಿ ಹೊರ ನಡೆದರು. ಈ ವೇಳೆ ವಾರ್ನರ್ 145ರನ್‌ಗಳನ್ನು ಕಲೆಹಾಕಿದ್ದರು. ಬಳಿಕ ಸ್ಮಿತ್ ಜೊತೆಗೂಡಿದ ಶಾನ್ ಮಾರ್ಷ್ ಅವರು ಮತ್ತೆ ಭಾರತಕ್ಕೆ ದುಬಾರಿಯಾಗುವ ಸೂಚನೆ ನೀಡಿದರು. ಭಾರತದ ಬೌಲರ್‌ಗಳನ್ನು ಸಾಕಷ್ಟು ಹೊತ್ತು ಕಾಡಿದ ಈ ಜೋಡಿ 87ರನ್ ಕಲೆಹಾಕಿತು. 45ನೇ ಓವರ್‌ನಲ್ಲಿ ಆರೋನ್ ಅವರ ಪ್ರಭಾವಿ ಎಸೆತವನ್ನು ಆಡುವಲ್ಲಿ ವಿಫಲವಾದ ಮಾರ್ಷ್ ಕೊಹ್ಲಿಗೆ ಕಾಚಿತ್ತು ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಮಾರ್ಷ್ ಬಳಿಕ ಕ್ರೀಸ್‌ಗೆ ಬಂದ ಲಿಯಾನ್ ಮತ್ತು ಹಡ್ಡೀನ್  ಅವರು ಬಂದಷ್ಟೇ ವೇಗವಾಗಿ ವಿಕೆಟ್ ಒಪ್ಪಿಸಿ ಹೊರನಡೆದರು. ಒಟ್ಟಾರೆ ದಿನದಂತ್ಯಕ್ಕೆ ಆಸ್ಟ್ರೇಲಿಯಾ ತಂಡ 6 ವಿಕೆಟ್ ನಷ್ಟಕ್ಕೆ 354ರನ್‌ಗಳ ಉತ್ತಮ ಮೊತ್ತವನ್ನು ಕಲೆಹಾಕಿದ್ದಾರೆ.

ಉಳಿದಂತೆ ಭಾರತದ ಬೌಲರ್‌ಗಳಾದ ಮಹಮದ್ ಶಮಿ ಮತ್ತು ವರುಣ್ ಆರೋನ್ ತಲಾ 2 ವಿಕೆಟ್ ಕಬಳಿಸಿದರೆ, ಇಶಾಂತ್ ಶರ್ಮಾ ಮತ್ತು ಕೆವಿ ಶರ್ಮಾ ತಲಾ 1 ವಿಕೆಟ್ ಗಳಿಸಿದರು. ನಾಳೆ ಎರಡನೇ ದಿನದಾಟ ಆರಂಭವಾಗಲಿದ್ದು, ನಾಯಕ ಕ್ಲಾರ್ಕ್ (60ರನ್ ) ಮತ್ತು ಸ್ಮಿತ್ (72 ರನ್) ಕ್ರೀಸ್ ಕಾಯ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com