

ಬ್ರಿಸ್ಬೇನ್: ಅಡಿಲೇಡ್‌ನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಭರ್ಜರಿ ಜಯ ಗಳಿಸಿದ್ದ ಆಸ್ಟ್ರೇಲಿಯ, ದ್ವಿತೀಯ ಟೆಸ್ಟ್‌ನಲ್ಲೂ ಪಾರಮ್ಯ ಮೆರೆದಿದೆ.
128 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯ 6 ವಿಕೆಟ್ ನಷ್ಟಕ್ಕೆ 130 ಗಳಿಸುವ ಮೂಲಕ ನಾಲ್ಕು ವಿಕೆಟ್‌ಗಳಿಂದ ಜಯ ದಾಖಲಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಪೈಕಿ ಆಸ್ಟ್ರೇಲಿಯ ಎರಡು ಪಂದ್ಯಗಳನ್ನು ಕೈವಶ ಮಾಡಿಕೊಂಡಿದೆ.
ಆಸ್ಟ್ರೇಲಿಯ ಪರ ಆರಂಭಿಕ ಆಟಗಾರ ಕ್ರಿಸ್ ರೋಜರ್ಸ್ 55 ರನ್ ಗಳಿಸಿ ಔಟಾದರೆ, ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೇವಲ 6 ರನ್ ಗಳಿಸಿ ನಿರ್ಗಮಿಸಿದ್ದರು. ಶೇನ್ ವಾಟ್ಸನ್ ಶೂನ್ಯಕ್ಕೆ ಔಟಾದರೆ ಸ್ಟೀವೆನ್ ಸ್ಮಿತ್ 28 ರನ್ ಸಿಡಿಸಿ ರನ್ ಔಟಾದರು. ಮಾರ್ಶ್ 17 ರನ್ ಗಳಿಸಿದರು.
ಬಳಿಕ ಬಂದ ಮಿಚೆಲ್ ಮಾರ್ಶ್ ಅಜೇಯ 6 ರನ್ ಹಾಗೂ ಮಿಚೆಸ್ ಜಾನ್ಸನ್ ಅಜೇಯ 2 ರನ್‌ನೊಂದಿಗೆ ಆಸ್ಟ್ರೇಲಿಯ ಗೆಲುವಿನ ನಗೆ ಬೀರಿತು.
ಭಾರತ ಪರ ಇಶಾಂತ್ ಶರ್ಮಾ 3 ವಿಕೆಟ್ ಪಡೆದರೆ, ಉಮೇಶ್ ಯಾದವ್ 2 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಆರಂಭಿಕ ಆಟಗಾರ ಶಿಖರ್ ಧವನ್(81) ರನ್ ಬಿಟ್ಟರೆ ಮತ್ಯಾರು 50ರ ಗಡಿ ದಾಟಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 144 ರನ್ ಗಳಿಸಿದ್ದ ಮುರಳಿ ವಿಜಯ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 27 ರನ್‌ಗೆ ಔಟಾದರು.
ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಚೇತೇಶ್ವರ ಪೂಜಾರ 43 ರನ್‌ಗೆ ಔಟಾದರೆ, ಭರವಸೆಯ ಆಟಗಾರ ವಿರಾಟ್ ಕೊಹ್ಲಿ 1 ರನ್ ಗಳಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಅಂಜಿಕ್ಯಾ ರಹಾನೆ 10 ರನ್, ರೋಹಿತ್ ಶರ್ಮಾ ಹಾಗೂ ತಂಡದ ನಾಯಕ ಎಂ.ಎಸ್ ಧೋನಿ ಶೂನ್ಯಕ್ಕೆ ಔಟಾದರು.
ಬಳಿಕ ಬಂದ ಆರ್. ಅಶ್ವಿನ್ 19, ಉಮೇಶ್ ಯಾದವ್ 30, ವರುಣ್ ಅರೋರ 3 ರನ್‌ಗೆ ಔಟಾದರು.
ಆಸ್ಟ್ರೇಲಿಯ ಪರ ಮಿಚೇಲ್ ಜಾನ್ಸನ್ 4 ವಿಕೆಟ್ ಪಡೆದರೆ, ಹ್ಯಾಝಲ್‌ವುಡ್, ಸ್ಟಾರ್ಕ್, ಲಯೋನ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್ 408 ಹಾಗೂ ದ್ವಿತೀಯ ಇನ್ನಿಂಗ್ಸ್ 224
ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್ 505, ದ್ವೀತಿಯ ಇನ್ನಿಂಗ್ಸ್ 6 ವಿಕೆಟ್ ನಷ್ಟಕ್ಕೆ 130