

ಮೆಲ್ಬೋರ್ನ್: ಆಸ್ಟ್ರೇಲಿಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಭಾರತಕ್ಕೆ ಸರಣಿ ಸೋಲಾಗಿದೆ.
ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ಆಸ್ಟ್ರೇಲಿಯ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಕಂಡಿದ್ದು, ಇಂದು ಮೊಲ್ಬೋರ್ನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಸಿಡ್ನಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯ ಕೇಲವ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ನಾಲ್ಕನೇ ದಿನದಾಟಕ್ಕೆ ಆಸ್ಟ್ರೇಲಿಯ 7 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿದ್ದರು. ಟೆಸ್ಟ್ ಕ್ರಿಕೆಟ್‌ನ ಐದನೇ ದಿನ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯ 318 ರನ್ ಗಳಿಸಿದ್ದಾಗ ಎರಡನೇ ಇನ್ನಿಂಗ್ಸ್‌ಗೆ ಡಿಕ್ಸೇರ್ ನೀಡಿತು. 383 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 174 ಗಳಿಸಿತು. ಇದರೊಂದಿಗೆ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಎರಡನೇ ಇನಿಂಗ್ಸ್‌ನಲ್ಲಿ ಭಾರತ ಪರ ಮುರಳಿ ವಿಜಯ್ ಕೇವಲ 11 ರನ್ ಹಾಗೂ ಶಿಖರ್ ಧವನ್ ಶೂನ್ಯಕ್ಕೆ ಔಟಾದರು. ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ಗೆ ಪಾರ್ದಾಪಣೆ ಮಾಡಿದ ಕರ್ನಾಟಕದ ಕೆ.ಎಲ್ ರಾಹುಲ್ ಕೇವಲ 1 ರನ್ ಗಳಿಸಿ ಭರವಸೆ ಹುಸಿ ಮಾಡಿದರು.
ಬಳಿಕ ವಿರಾಟ್ ಕೊಹ್ಲಿ 54, ಅಜಿಂಕ್ಯಾ ರಹಾನೆ 48, ಪೂಜಾರ 21, ನಾಯಕ ಧೋನಿ ಅಜೇಯ 24 ಹಾಗೂ ಅಶ್ವಿನ್ ಅಜೇಯ 8 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯ ಪರ ಜಾನ್ಸನ್, ಹ್ಯಾರಿಸ್ ಹಾಗೂ ಹ್ಯಾಜಲ್‌ವುಡ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.