ಕ್ರೀಡೆ

ಸೋಮ್ ಮುನ್ನಡೆ, ಸೋತ ಯುಕಿ

Published On :

ನವದೆಹಲಿ: ಎರಡನೇ ಶ್ರೇಯಾಂಕಿತ ಆಟಗಾರ ಸೋಮ್‌ದೇವ್ ದೇವ್‌ವರ್ಮನ್ ದೆಹಲಿ ಓಪನ್ ಎಟಿಪಿ ಟೆನಿಸ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಮಂಗಳವಾರ ಇಲ್ಲಿನ ಆರ್.ಕೆ. ಖನ್ನಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಭಾರತೀಯ ಆಟಗಾರ 6-2, 7-5 ನೇರ ಸೆಟ್‌ಗಳಿಂದ ತಮ್ಮದೇ ದೇಶದ ಆಟಗಾರ ಕರುಣುದಯ್ ಸಿಂಗ್ ಅವರನ್ನು ಸೋಲಿಸಿದರು.
ವಿಶ್ವದ 96ನೇ ಶ್ರೇಯಾಂಕಿತ ಸೋಮ್‌ದೇವ್ ಎರಡೂ ಸೆಟ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ಒಂದು ಗಂಟೆ 28 ನಿಮಿಷಗಳ ಆಟದಲ್ಲಿಯೇ ವಿಶ್ವ ರ್ಯಾಂಕಿಂಗ್‌ನಲ್ಲಿ 483ನೇ ಕ್ರಮಾಂಕದಲ್ಲಿರುವ ಕರುಣುದಯ್ ವಿರುದ್ಧ ಗೆಲವು ದಾಖಲಿಸಿದರು.
ಯುಕಿ, ಸಾಕೇತ್‌ಗೆ ಸೋಲು: ಆದರೆ, ಆರನೇ ಶ್ರೇಯಾಕಿಂತ ಯುಕಿ ಭಾಂಬ್ರಿ ಮತ್ತು  ಸಾಕೇತ್ ಮೈನೇನಿ ಮೊದಲ ಹೆಜ್ಜೆಯಲ್ಲೇ ಮುಗ್ಗರಿಸಿದ್ದಾರೆ.
ಯುಕಿ ಭಾಂಬ್ರಿ ತಮ್ಮ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿಯೇ ಫ್ರಾನ್ಸ್‌ನ ಲೂಕಾಸ್ ಜೊಯಿಲೆ ಎದುರು 6-2, 5-7, 5-7 ಸೆಟ್‌ಗಳಿಂದ ಪರಾಭವಗೊಂಡರು. ಎರಡು ಗಂಟೆ 20 ನಿಮಿಷಗಳ ಕಾದಾಟದಲ್ಲಿ ಭಾರತೀಯ ಆಟಗಾರ ಮೊದಲ ಸೆಟ್ ಗೆದ್ದು ಶುಭಾರಂಭ ಮಾಡಿದರಾದರೂ, ಮುಂದಿನ ಎರಡೂ ಸೆಟ್‌ಗಳಲ್ಲಿ ಅನೇಕ ತಪ್ಪುಗಳನ್ನೆಸಗಿ ಅಂಕಗಳನ್ನು ಕಳೆದುಕೊಂಡು ಸೋಲನುಭವಿಸಿದರು. ಇತ್ತೀಚೆಗಷ್ಟೇ ಡೇವಿಸ್ ಕಪ್‌ಗೆ ಪದಾರ್ಪಣೆ ಮಾಡಿದ್ದ ಸಾಕೇತ್, ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಇಟಲಿಯ ಥಾಮಸ್ ಫಾಬಿಯಾನೊ ಎದುರು 6-7 (4-7), 6-7 (4-7) ನೇರ ಸೆಟ್‌ಗಳಿಂದ ತಲೆಬಾಗಿಸಿದರು. ಉತ್ತಮ ಹೋರಾಟದಿಂದ ಕೂಡಿದ್ದ ಪಂದ್ಯ ಒಂದು ಗಂಟೆ 59 ನಿಮಿಷಗಳವರೆಗೆ ಸಾಗಿತು.
ಸಾಕೇತ್ ಮೈನೇನಿ ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡು ಮೂಲಕ ಎದುರಾಳಿಗೆ ಕಠಿಣ ಸವಾಲುಗಳನ್ನೇ ನೀಡಿದ್ದರು. ಹಾಗಾಗಿ, ಎರಡೂ ಸೆಟ್‌ಗಳನ್ನು ಗೆದ್ದುಕೊಳ್ಳಲು ಇಟಲಿ ಆಟಗಾರ ಸಾಕಷ್ಟು ಬೆವರು ಸುರಿಸಬೇಕಾಯಿತು. ವೈಲ್ಡ್ ಕಾರ್ಡ್ ಪಡೆದ ಮೂವರು ಭಾರತೀಯ ಆಟಗಾರರು ಮೊದಲ ಸುತ್ತಿನಲ್ಲಿಯೇ ಸೋಲಿನ ಕಹಿ ಉಣ್ಣುವಂತಾಗಿದೆ. ಇದೀಗ ರಾಮ್‌ಕುಮಾರ್ ರಾಮ್‌ನಾಥನ್ ಮಾತ್ರ ಕಣದಲ್ಲಿ ಉಳಿದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.