

ಚೆನ್ನೈ: ಕೆಕೆಆರ್ ತಂಡದ ಪ್ರಮುಖ ಬೌಲರ್ ಸುನಿಲ್ ನರೇನ್ ಫಾರ್ಮ್ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಲೆಕೆಡಿಸಿಕೊಂಡಿಲ್ಲ ಎಂದು ಚೆನ್ನೈ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ಚೆನ್ನೈನಲ್ಲಿ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು, ಪ್ರಸ್ತುತ ಕೆಕೆಆರ್ ತಂಡ ಉತ್ತಮ ಫಾರ್ಮ್ ನಲ್ಲಿದೆ. ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ.
ಕೆಕೆಆರ್ ತಂಡದಲ್ಲಿ ಉತ್ತಮ ಬ್ಯಾಟ್ಸಮನ್ ಗಳಿದ್ದು, ಕಳೆದ ಕೆಲ ಮಹತ್ವದ ಪಂದ್ಯಗಳಲ್ಲಿ ನಾವು ಕೆಕೆಆರ್ ತಂಡವನ್ನು ಎದುರಿಸಿದ್ದೇವೆ. ಇತ್ತೀಚೆಗೆ ನಡೆದ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿಯೂ ನಾವು ಕೆಕೆಆರ್ ತಂಡವನ್ನು ಎದುರಿಸಿದ್ದೆವು. ಹೀಗಾಗಿ ಕೆಕೆಆರ್ ತಂಡವನ್ನು ನಾವು ಲಘುವಾಗಿ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.
ಇನ್ನು ಕೆಕೆಆರ್ ತಂಡದಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಸುನೀಲ್ ನರೇನ್ ಕುರಿತಂತೆ ಮಾತನಾಡಿದ ಫ್ಲೆಮಿಂಗ್, ಸುನಿಲ್ ನರೇನ್ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ನಾವು ಅವರನ್ನು ಮಾತ್ರವೇ ಗುರಿಯಾಗಿಸಿಕೊಂಡು ಆಟವಾಡಿದರೆ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
'ಸರಣಿಯಲ್ಲಿ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದ್ದು, ಪ್ರತೀ ಪಂದ್ಯಕ್ಕೂ ಉತ್ತಮ ತಂಡವನ್ನೇ ಆಯ್ಕೆ ಮಾಡಬೇಕಿದೆ. ಇದರೊಂದಿಗೆ ತಂಡದ ಎಲ್ಲ ಆಟಗಾರರಿಗೂ ಸ್ಥಾನ ಲಭಿಸುವಂತೆ ನೋಡಿಕೊಳ್ಳುವುದು ಮುಖ್ಯ. ಮೋಹಿತ್ ಶರ್ಮಾ ಮತ್ತು ಪಾಂಡೆ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದ್ದು, ಈ ಇಬ್ಬರು ಆಟಗಾರರು ತಮ್ಮ ಸ್ಥಾನಕ್ಕಾಗಿ ಉತ್ತಮ ಪ್ರದರ್ಶನ ತೋರಬೇಕಿದೆ. ಇದು ಅವರಿಗೂ ಮತ್ತು ತಂಡಕ್ಕೂ ತುಂಬಾ ಮುಖ್ಯ ಎಂದು ಫ್ಲೆಮಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಸಂಜೆ ಚೆನ್ನೈನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಟೂರ್ನಿಯಲ್ಲಿ ಚೆನ್ನೈ ತಂಡ 5 ಗೆಲುವು ಸಾಧಿಸಿದ್ದರೆ, ಕೋಲ್ಕತಾ ತಂಡ 3ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಚೆನ್ನೈ ತಂಡವೇ ಗೆಲುವಿನ ಫೇವರಿಟ್ ಆಗಿದ್ದು, ಉತ್ತಮ ಫಾರ್ಮ್ ನಲ್ಲಿರುವ ಗಂಭೀರ್ ನೇತೃತ್ವದ ಕೆಕೆಆರ್ ತಂಡ ಧೋನಿ ನೇತೃತ್ವದ ಚೆನ್ನೈತಂಡಕ್ಕೆ ಉತ್ತಮ ಪೈಪೋಟಿ ನೀಡುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.