

ಸಿಡ್ನಿ: ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೊಂದುತ್ತಿದ್ದಂತೆ ಭಾರತದ ಟೆಸ್ಟ್ ಕ್ರಿಕೆಟ್ ತಂಡಕ್ಕೆ ನಾಯಕನಾಗಿರುವ ವಿರಾಟ್ ಕೊಹ್ಲಿ ನಾಳೆ ಸಿಡ್ನಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿಯಂತೆ ಕೂಲ್ ಆಗಿರಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಮೆಲ್ಬರ್ನ್‌ನಲ್ಲಿ ನಡೆದ 3ನೇ ಟೆಸ್ಟ್ ನಂತರ ಡ್ರೆಸ್ಸಿಂಗ್ ರೂಂಗೆ ಬಂದ ಧೋನಿ ಇದ್ದಕ್ಕಿದ್ದಂತೆ ನಿಮಗೊಂದು ವಿಷಯ ಹೇಳಬೇಕು ಎಂದು ಹೇಳಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ತಿಳಿಸಿದರು. ಧೋನಿಯವರ ಈ ನಿರ್ಧಾರಕ್ಕೆ ಎಲ್ಲರಿಗೂ ಗಾಬರಿಯಾಯಿತು. ಆ ಕ್ಷಣದಲ್ಲಿ ಎಲ್ಲರಲ್ಲೂ ಭಾವನಾತ್ಮಕವಾಗಿದ್ದೆವು, ಅವರಿಗೆ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಧೋನಿ ಅತಿ ಚಿಕ್ಕ ವಯಸ್ಸಿನಲ್ಲೇ ನಾಯಕರಾಗಿದ್ದವರು, ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಆಟವಾಡುವಾಗ ಆಟದ ಮೇಲಿದ್ದ ಅವರ ಹಿಡಿತ, ಆಟದ ಸಮಯದಲ್ಲಿ ಇದ್ದಕ್ಕಿಂದ್ದಂತೆ ಅವರು ಕೈ ಗೊಳ್ಳುತ್ತಿದ್ದ ಪ್ರಮುಖ ನಿರ್ಧಾರಗಳು, ಇಂತಹ ಗುಣಗಳಿಗೆ ಯಾರೂ ಬೆಲೆಕಟ್ಟಲು ಸಾಧ್ಯವಿಲ್ಲ. ಧೋನಿಯಂತೆ ನಾನು ಸಹ ಶಾಂತಚಿತ್ತನಾಗಿರಲು ಭಯಸುತ್ತೇನೆ ಎಂದರು.
ತಂಡದಲ್ಲಿನ ತಪ್ಪುಗಳನ್ನು ಹುಡುಕಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸರಿಪಡಿಸುತ್ತೇನೆ ಮತ್ತು ಆಟದ ಸಂದರ್ಭಕ್ಕೆ ತಕ್ಕಂತೆ ಉತ್ತಮ ನಿರ್ಧಾರಗಳನ್ನು ಕೈಗೊಂಡು ತಂಡದ ಜಯದ ಕಡೆ ಗಮನ ಹರಿಸಿ ತಂಡದಲ್ಲಿ ಧನಾತ್ಮಕ ಚಿಂತನೆಗಳನ್ನು ರೂಢಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.