

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಾವು ಆಸ್ಟ್ರೇಲಿಯಾ ವಿರುದ್ಧ ಚೆನ್ನಾಗಿಯೇ ಆಡಿದ್ದೆವು ಎಂದು ಹೇಳಿದ್ದಾರೆ.
ಕಳೆದ ಎರಡು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡ ನಂತರ ಭಾರತ ಆಸ್ಟ್ರೇಲಿಯಾ ವಿರುದ್ಧ 0-2 ಅಂತರದಲ್ಲಿ ಪರಾಭವಗೊಂಡಿತ್ತು. ಈ ಟೆಸ್ಟ್ ಪಂದ್ಯಗಳಲ್ಲಿ 692 ರನ್ ಕಲೆ ಹಾಕಿರುವ ಕೊಹ್ಲಿ, ತಂಡದ ಪ್ರದರ್ಶನ ತೃಪ್ತಿ ತಂದಿದೆ ಎಂದಿದ್ದಾರೆ.
ನಾವು ಈ ಪಂದ್ಯದಲ್ಲಿ ಗೆಲ್ಲುವ ಅವಕಾಶ ಇತ್ತು. ಆದರೆ ಆಸ್ಟ್ರೇಲಿಯಾ ದಿಟ್ಟತನದಿಂದ ಹೋರಾಡಿತ್ತು. ಈ ಪಂದ್ಯಾಟದಲ್ಲಿ ನಾವು ಆಸ್ಟ್ರೇಲಿಯನ್ನರಿಗೆ ಕಠಿಣ ಸವಾಲನ್ನೊಡ್ಡಿ ಹೋರಾಡಿದ್ದೇವೆ. ಇದೊಂದು ಉತ್ತಮ ಸರಣಿಯಾಗಿತ್ತು. ಮೊದಲ ದಿನದಿಂದಲೇ ನಾವು ಚೆನ್ನಾಗಿ ಆಡಲು ನಿರ್ಧರಿಸಿದ್ದೆವು. ನಮ್ಮ ಹುಡುಗರು ಚೆನ್ನಾಗಿ ಆಡಿದ್ದರು. ಈ ಪಂದ್ಯಗಳಲ್ಲಿ ನಾವು ತಾಳ್ಮೆಯಿಂದಲೂ, ತಲ್ಲೀನರಾಗಿಯೂ ಆಡಿದ್ದೆವು. ಇದರಲ್ಲಿ ನಮಗೆ ಸಿಕ್ಕಿದ ಫಲಿತಾಂಶದಿಂದ ತೃಪ್ತರಾಗಿದ್ದರೂ, ಡ್ರಾ ಮಾಡಿಕೊಳ್ಳುವುದಕ್ಕಿಂತ ಗೆಲ್ಲುವುದು ಉತ್ತಮವಾಗಿತ್ತು.
ಶನಿವಾರ 349 ರನ್‌ಗಳ ಗುರಿಯನ್ನು ಬೆನ್ನತ್ತಿ ಹೊರಟ ಟೀಂ ಇಂಡಿಯಾಗೆ ಟೀ ಬ್ರೇಕ್ ವರೆಗೆ ಸ್ಕೋರ್ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ಊಹಿಸಲೂ ಸಾಧ್ಯವಾಗಿರಲ್ಲಿಲ್ಲ. ಆ ಸಮಯದಲ್ಲಿ ನಾವು ಗುರಿ ಮುಟ್ಟುತ್ತೇವೋ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣವಿರಲಿಲ್ಲ. ಆದರೆ ಆಗಿದ್ದು ಆಗಿಹೋಗಲಿ ಎಂದು ನಾವು ಮುನ್ನುಗ್ಗತೊಡಗಿದೆವು.
ನಮ್ಮ ಟೀಂ ಸದಸ್ಯರು ಚೆನ್ನಾಗಿ ಪ್ರದರ್ಶನ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಸಮರ್ಥರಾಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಕೊಹ್ಲಿ 4 ಶತಕ ಹಾಗೂ 1 ಅರ್ಧ ಶತಕವನ್ನು ಬಾರಿಸಿದ್ದಾರೆ.
ಇದೀಗ ಭಾರತೀಯ ಕ್ರಿಕೆಟ್ ಟೀಂ ಮುಂದೆ ಸಾಗುತ್ತಿದೆ. ನಾವು ಬೌಲಿಂಗ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ನಾನು ಬೌಲರ್‌ಗಳಿಗೆ ಹೇಳಿದ್ದೇನೆ. ಅದರಲ್ಲೂ ಎಲ್.ರಾಹುಲ್ ಅವರು ಚೊಚ್ಚಲ ಪಂದ್ಯದಲ್ಲಿ ಎಡವಿ ನಂತರ ಶತಕ ಬಾರಿಸಿದ್ದು ತುಂಬಾ ಒಳ್ಳೆಯ ಬೆಳವಣಿಗೆಯಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸುವುದು ಎಷ್ಟು ಕಷ್ಟವಿದೆ ಎಂಬುದು ನನಗೂ ಅನುಭವವಾಗಿದೆ. ಮುರಳಿ ವಿಜಯ್ ಮತ್ತು ಅಜಿಂಕ್ಯ ರಹಾನೆ ಕೂಡಾ ಉತ್ತಮ ಪ್ರದರ್ಶನ ನೀಡಿದ್ದರು.
ಫಿಲಿಪ್ ಹ್ಯೂಸ್ ನಿಧನ ನಂತರ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿದೆ, ಅದಕ್ಕೆ ಅವರನ್ನು ಅಭಿನಂದಿಸಬೇಕಾಗಿದೆ.
ಪಂದ್ಯಗಳಲ್ಲಿ ಸೋಲುವುದು ನನಗಿಷ್ಟವಿಲ್ಲ. ನಾವು ಪೈಪೋಟಿ ನೀಡಬೇಕು. ನಮ್ಮ ವಿರುದ್ಧ ತಂಡದವರೂ ನಮ್ಮನ್ನು ಗೌರವಿಸಬೇಕು. ಈ ಯುವಕರ ತಂಡವನ್ನು ಬೇಗನೆ ಮಣಿಸಬಹುದು ಎಂದು ಅವರು ಯೋಚಿಸಬಾರದು. ಆದಾಗ್ಯೂ, ಮುಂದಿನ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿಯೂ ನಾವು ಗೆಲ್ಲುತ್ತೇವೆ ಎಂಬ ಭರವಸೆಯಿದೆ. ಆಸ್ಟ್ರೇಲಿಯಾ ವಿರುದ್ಧ ನಾವು ಉತ್ತಮ ಪ್ರದರ್ಶನ ನೀಡಿರುವುದರಿಂದ ನಮಗೆ ಒಳ್ಳೆಯ ಅನುಭವ ಸಿಕ್ಕಿದೆ. ಈ ಅನುಭವಗಳ ಮೂಲಕ ನಾವು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಕೊಹ್ಲಿ ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.