

ಮೀರ್ಪುರ: ಇತಿಹಾಸದಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶ ವಿರುದ್ಧ ಸರಣಿ ಸೋತು ವ್ಯಾಪಕ ಟೀಕೆಗೆ ಒಳಗಾಗಿರುವ ಭಾರತ ತಂಡ, ಈಗ ತನ್ನ ಮಾನ ಕಾಪಾಡಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯದಲ್ಲಿದೆ.
ಇತ್ತ ಏಕದಿನ ಕ್ರಿಕೆಟ್ ಚರಿತ್ರೆಯಲ್ಲೇ ಚೊಚ್ಚಲ ಬಾರಿಗೆ ಭಾರತ ವಿರುದ್ಧ ಸರಣಿ ಗೆದ್ದು ಇತಿಹಾಸ ಬರೆದ ಆತಿಥೇಯ ಬಾಂಗ್ಲಾದೇಶ, ಸರಣಿ ಕ್ಲೀನ್‍ಸ್ವೀಪ್ ಮಾಡುವ ಗುರಿ ಹೊತ್ತಿದೆ. ಇಲ್ಲಿನ ಶೇರ್-ಎ- ಬಾಗ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲವು ದಾಖಲಿಸಿ ಕ್ಲೀನ್‍ಸ್ವೀಪ್ ಮುಖಭಂಗದಿಂದ ಪಾರಾಗಲು ನಿರ್ಧರಿಸಿದೆ. ಏತನ್ಮಧ್ಯೆ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ಭಾರತ, ಈ ಪಂದ್ಯದಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳುವುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದೆಡೆ ಬಾಂಗ್ಲಾದೇಶ ತವರಿನ ಅಂಗಣದಲ್ಲಿ ಆಕ್ರಮಣಕಾರಿ ಆಟದಿಂದ ಭಾರತಿಯರಿಗೆ ಸೆಡ್ಡು ಹೊಡೆದಿದ್ದು, ಮಾಜಿ ವಿಶ್ವ ಚಾಂಪಿಯನ್ನರಿಗೆ ಮತ್ತೆ ಶಾಕ್ ನೀಡಿ ಈ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ಪ್ರವೇಶ ಖಚಿತಪಡಿಸಿಕೊಳ್ಳುವುದೇ ಎಂಬುದು ಕೂಡ ಕೌತುಕ ಮೂಡಿಸಿದೆ.
ಒತ್ತಡದಲ್ಲಿ ಮಹಿ ಪಡೆ
ಆತಿಥೇಯ ಬಾಂಗ್ಲಾದೇಶ ವಿರುದ್ಧ ಏಕದಿನ ಮಳೆ ಬಾಧಿತ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣ ಪ್ರಾಬಲ್ಯ ಮೆರೆದಿತ್ತು. ಆದರೆ ಏಕದಿನದಲ್ಲಿ ತಂಡದ ಚಿತ್ರಣ ಸಂಪೂರ್ಣವಾಗಿ ವಿಭಿನ್ನವಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಲ್ಲದೆ ಟೀಂ ಇಂಡಿಯಾ ಈಗ ಬೆಂಕಿ ಕೆಂಡದ ಮೇಲೆ ನಡೆಯುವಂತಹ ಪರಿಸ್ಥಿತಿಯಲ್ಲಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲ ವಿಭಾಗಗಳಲ್ಲೂ ಹಳಿ ತಪ್ಪಿದಂತಾಗಿರುವ ಧೋನಿ ಪಡೆ, ಕೊನೆಯ ಪಂದ್ಯದಲ್ಲಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳದೆ ಹೋದರೆ ಭಾರೀ ಬೆಲೆ ತೆರಬೇಕಾದ ಅನಿವಾರ್ಯತೆ ಇದೆ. ಈ ಮಧ್ಯೆ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತ ತಂಡ, ಧೋನಿ ನಾಯಕತ್ವದಲ್ಲಿ ಕುಸಿತ ಕಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಭಾರತ ತಂಡ ಕಳೆದೆರಡು ಪಂದ್ಯಗಳ ಸೋಲಿನ ಒತ್ತಡದಿಂದ ಹೊರಬಂದು ಆತಿಥೇಯರ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸಿ ಕ್ಲೀನ್‍ಸ್ವೀಪ್ ನಿಂದ ಹೊರಬರಬೇಕಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭದ್ರ ಸ್ಥಿರ ಪ್ರದರ್ಶನ ನೀಡುವುದರ ಜತೆಗೆ ತಂಡದ ಆಧಾರ ಸ್ತಂಭ ವಿರಾಟ್ ಕೊಹ್ಲಿ ತಮ್ಮ ಲಯ ಕಂಡುಕೊಳ್ಳಬೇಕಿದೆ. ಈ ಮೂವರು ಮತ್ತೆ ವೈಫಲ್ಯ ಕಂಡರೆ ಭಾರತ ತಂಡಕ್ಕೆ ಮತ್ತೆ ಅಪಾಯ ಎದುರಾಗುವುದರಲ್ಲಿ ಅನುಮಾನವಿಲ್ಲ.
ರಹಾನೆಗೆ ಸಿಗುವುದೇ ಅವಕಾಶ
ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 98 ರನ್ ದಾಖಲಿಸಿ ಅತ್ಯುತ್ತಮ ಲಯದಲ್ಲಿದ್ದ ಅಜಿಂಕ್ಯ ರಹಾನೆಗೆ ಆಡುವ ಹನ್ನೊಂದರಲ್ಲಿ ಸ್ಥಾನ ನೀಡದಿರುವುದು ತಂಡದ ವೈಫಲ್ಯಕ್ಕೆ ಮತ್ತೊಂದು ಕಾರಣವಾಗಿದೆ. ರಹಾನೆ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಸಾಕಷ್ಟು ದುರ್ಬಲವಾಗಿ ಕಾಣುತ್ತಿದೆ. ಧೋನಿ ಹಾಗೂ ಸುರೇಶ್ ರೈನಾ ಮಧ್ಯಮ ಕ್ರಮಾಂಕದಲ್ಲಿ ಬಡ್ತಿ ಪಡೆದ ಪರಿಣಾಮ ರಾಯುಡು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಯೋಜನೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ರಾಯುಡು ಬದಲಿಗೆ ಮತ್ತೆ ತಂಡಕ್ಕೆ ರಹಾನೆ ಮರಳಿದರೆ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವಿದೆ. ಎರಡನೇ ಪಂದ್ಯದಲ್ಲಿ ಧವಳ್ ಕುಲಕರ್ಣಿ ಜತೆಗೆ ಮೂವರು ಸ್ಪಿನ್ನರ್‍ಗಳು ಕಣಕ್ಕಿಳಿದಿದ್ದು, ಅಚ್ಚರಿ ಮೂಡಿಸಿತ್ತು. ಈ ಪಂದ್ಯದಲ್ಲಿ ಫಾರ್ಮ್ ಕಳೆದು ಕೊಂಡಿರುವ ರವೀಂದ್ರ ಜಡೇಜಾ ಅವರನ್ನು ಕೂರಿಸಿ, ಸ್ಟುವರ್ಟ್ ಬಿನ್ನಿಗೆ ಅವಕಾಶ ನೀಡಬೇಕಿದೆ. ಅಲ್ಲದೆ, ಕುಲಕರ್ಣಿ ಬದಲಿಗೆ ಉಮೇಶ್ ಯಾದವ್ ಆಡಿದರೆ ಬೌಲಿಂಗ್ ವಿಭಾಗಕ್ಕೆ ಬಲ ಸಿಕ್ಕಂತಾಗಲಿದೆ.
ಆತ್ಮ ವಿಶ್ವಾಸದಲ್ಲಿ ಮೊರ್ತಾಜಾ ಪಡೆ
ಈಗಾಗಲೇ ಸರಣಿ ಗೆದ್ದುಕೊಂಡಿರುವ ಆತಿಥೇಯ ಬಾಂಗ್ಲಾದೇಶ ಈ ಪಂದ್ಯದಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಅಲ್ಲದೆ, ಭಾರತ ಬಲಿಷ್ಟ ತಂಡವೆಂಬ ಅರಿವಿದ್ದರೂ, ಯಾವುದೇ ಒತ್ತಡವಿಲ್ಲದೇ ಆರಂಭಿಕ ಎರಡು ಪಂದ್ಯಗಳಲ್ಲಿ ವಿಜೃಂಭಿಸಿರುವ ಆತಿಥೇಯರ ಗುರಿ ಸರಣಿಯನ್ನು ಕ್ಲೀನ್‍ಸ್ವೀಪ್ ಮಾಡುವುದೇ ಆಗಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಭಾರತಕ್ಕಿಂತ ಹೆಚ್ಚು ಸಂಘಟಿತ ಪ್ರದರ್ಶನ ನೀಡಿರುವುದು ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ಕಳೆದೆರಡು ಪಂದ್ಯಗಳಲ್ಲಿ ಭಾರತವನ್ನು ಇನ್ನಿಲ್ಲದಂತೆ ಕಾಡಿರುವ ರೆಹಮಾನ್ ತಮ್ಮ ಮಾರಕ ದಾಳಿಯನ್ನು ಕೊನೇ ಪಂದ್ಯದಲ್ಲೂ ಮುಂದುವರೆಸುವ ಛಲ ತೊಟ್ಟಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಹಿರಿಯ ಆಟಗಾರ ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಲಿಂಟನ್ ದಾಸ್, ಆಲ್ರೌಂಡರ್ ಶಕೀಬ್ ಅಲ್ ಹಸನ್ ತಮ್ಮ ಮೇಲಿನ ಜವಾಬ್ದಾರಿಯನ್ನು ಸಾಧ್ಯವಾದಷ್ಟೂ ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಭಾರತಕ್ಕೆ ಸವಾಲೆನಿಸಿದೆ.
ತಂಡಗಳ ವಿವರ ಇಂತಿದೆ.
ಭಾರತ
ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಸುರೇಶ್ ರೈನಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಉಮೇಶ್ ಯಾದವ್, ಮೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್, ಅಂಬಟಿ ರಾಯುಡು, ಧವಳ್ ಕುಲಕರ್ಣಿ, ಅಕ್ಷರ್ ಪಟೇಲ್, ಸ್ಟುವರ್ಟ್ ಬಿನ್ನಿ.
ಬಾಂಗ್ಲಾದೇಶ
ಮಶ್ರಫೆ ಮೊರ್ತಾಜ (ನಾಯಕ), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮುಷ್ಫಿಕರ್ ರಹೀಮ್, ಶಕಿಬ್ ಅಲ್ ಹಸನ್, ಶಬ್ಬೀರ್ ರೆಹಮಾನ್, ನಾಸಿರ್ ಹುಸೇನ್, ರುಬೆಲ್ ಹುಸೇನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಮೊಮಿನುಲ್ ಹಕ್, ಅರಾಫತ್ ಸನ್ನಿ.
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ