

ಕೋಲ್ಕತಾ: ಮುಂಬೈ ಇಂಡಿಯನ್ಸ್ ಆಟಗಾರರು 8ನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 41 ರನ್‍ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸದೆಬಡಿದು ಪ್ರಶಸ್ತಿಯ ಗರಿ ಮೂಡಿಸಿಕೊಂಡಿತು.
ಗೆಲ್ಲಲು ಮುಂಬೈ ಒಡ್ಡಿದ್ದ 203 ರನ್‍ಗಳ ಕಠಿಣ ಲಕ್ಷ್ಯದತ್ತ ಹೆಜ್ಜೆ ಹಾಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್‍ಗಳಿಸಲಷ್ಟೇ ಸಾಧ್ಯವಾಯಿತು. ಆರಂಭಿಕ ಡ್ವೈನ್ ಸ್ಮಿತ್ 48 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸೇರಿದಂತೆ 57 ರನ್‍ಗಳಿಸಿದ್ದೇ ಚೆನ್ನೈ ಪರ ಉತ್ತಮ ಬ್ಯಾಟಿಂಗ್ ಸಾಧನೆ ಎನಿಸಿತು. ಇತರೆ ಪ್ರಮುಖ ಬ್ಯಾಟ್ಸ್‍ಮನ್‍ಗಳೆಲ್ಲೂ ಕೈಕೊಟ್ಟಿದ್ದರಿಂದ ಚೆನ್ನೈ ಕಿಂಗ್ಸ್ ಲಭವಾಗಿಯೇ ಎದುರಾಳಿಗೆ ಶರಣಾಯಿತು. ಇದರೊಂದಿಗೆ ಮೂರನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವ ಚೆನ್ನೈ ಆಸೆ ನುಚ್ಚುನೂರಾಯಿತು. ಆದರೆ, 2013ರಲ್ಲಿ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ಈಗ ಎರಡನೇ ಬಾರಿಗೆ ಮತ್ತೆ ಟ್ರೋಪಿs ಎತ್ತಿಹಿಡಿದು ಸಂಭ್ರಮಿಸಿತು. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಫೈನಲ್‍ನಲ್ಲಿ ಮುಖಾಮುಖಿಯಾಗಿದ್ದವು. 2010ರಲ್ಲಿ ಮುಂಬೈನಲ್ಲಿ ನಡೆದಿದ್ದ ಫೈನಲ್‍ನಲ್ಲಿ ಚೆನ್ನೈ ತಂಡ 22 ರನ್‍ಗಳಿಂದ ಜಯ ಸಾಧಿಸಿ ಪ್ರಶಸ್ತಿ ಪಡೆದಿತ್ತು. ಇನ್ನು 2013ರಲ್ಲಿ ಕೋಲ್ಕತಾದಲ್ಲಿಯೇ ನಡೆದಿದ್ದ ಪಂದ್ಯದಲ್ಲಿಮುಂಬೈ ಪಡೆ 23 ರನ್‍ಗಳಿಂದ ಗೆಲವು ದಾಖಲಿಸಿ ಚೊಚ್ಚಲ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಈ ಬಾರಿ ಕೂಡ ಕೋಲ್ಕತಾದಲ್ಲಿಯೇ ನಡೆದಿದ್ದ ಫೈನಲ್‍ನಲ್ಲಿ ಮುಂಬೈ ಮತ್ತೊಮ್ಮೆ ದಿಗ್ವಿಜಯಿಯಾಗುವುದರೊಂದಿಗೆ 8ನೇ ಆವೃತ್ತಿಯ ಟೂರ್ನಿಯಲ್ಲಿ ತನ್ನ ಸಾಮ್ರಾಜ್ಯ ಕಟ್ಟಿತು.
ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತ: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್, ಪ್ರಮುಖ ಬ್ಯಾಟ್ಸ್‍ಮನ್‍ಗಳು ಅಬ್ಬರಿಸುವುದರೊಂದಿಗೆ 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು. ಮುಂಬೈ ಇಂಡಿಯನ್ಸ್ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ದೊಡ್ಡ ಆಘಾತ ಕಾದಿತ್ತು. ಇನಿಂಗ್ಸ್‍ನ ಮೊದಲ ಓವರಿನಲ್ಲಿಯೇ ಪಾರ್ಥಿವ್ ಪಟೇಲ್, ರನೌಟಾಗಿ ಶೂನ್ಯಕ್ಕೆ ನಿರ್ಗಮಿಸಿದ್ದು, ಮುಂಬೈಗೆ ದುಬಾರಿಯಾಯಿತು. ಈ ಹಂತದಲ್ಲಿ ಆರಂಬಿsಕ ಲೆಂಡ್ಲ್ ಸಿಮನ್ಸ್ ಮತ್ತು ನಾಯಕ ರೋಹಿತ್ ಶರ್ಮಾ ತಂಡದ ಸ್ಥಿತಿ ಸುಧಾರಿಸಲು ಮುಂದಾದರು. ರೋಹಿತ್, ತಾವು ಎದುರಿಸಿದ ಮೊದಲ ಓವರಿನಲ್ಲೇ ಮೋಹಿತ್ ಶರ್ಮಾ ಬೌಲಿಂಗ್‍ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಸೇರಿದಂತೆ ಒಟ್ಟು 16 ರನ್ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಮಧ್ಯಮ ಹಂತದಲ್ಲಿ ರೋಹಿತ್ ಮತ್ತು ಸಿಮನ್ಸ್ ಒಂದೇ ಮೊತ್ತದಲ್ಲಿ ಪೆವಿಲಿಯನ್ ಸೇರಿದಾಗ ಚೆನ್ನೈ ಮತ್ತೆ ಮೈಕೊಡವಿ ಮೇಲೆದ್ದು ಬಂದಂತಾಯಿತು. ಇನಿಂಗ್ಸ್‍ನ 12ನೇ ಓವರ್ ಬೌಲ್ ಮಾಡಿದ ಡ್ವೈನ್ ಬ್ರಾವೊರ ಕೊನೆಯ ಎಸೆತದಲ್ಲಿ ರೋಹಿತ್ (50ರನ್, 26 ಎಸೆತ, 6 ಬೌಂಡರಿ, 2 ಸಿಕ್ಸರ್) ವಿಕೆಟ್ ಕೈಚೆಲ್ಲಿದರು. ಇದರೊಂದಿಗೆ ರೋಹಿತ್ ಮತ್ತು ಸಿಮನ್ಸ್ ಜೋಡಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 119 ರನ್ ಪೇರಿಸಿ ಬೇರ್ಪಡಬೇಕಾಯಿತು. ಇನ್ನು ಇದಾಗಿ ಮರು ಓವರಿನ ಮೊದಲ ಎಸೆತದಲ್ಲೇ ಸಿಮನ್ಸ್ ಕೂಡ ಔಟಾದರು. ಅವರು 45 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಹೊಂದಿದ್ದ 68 ರನ್ ಗಳಿಸಿ ನಿರ್ಗಮಿಸಿದರು. ನಾಲ್ಕನೇ ವಿಕೆಟ್‍ಗೆ ಜೊತೆಯಾದ ಕೀರನ್ ಪೊಲಾರ್ಡ್ ಮತ್ತು ಅಂಬಟಿ ರಾಯುಡು ಅಬ್ಬರಿಸುತ್ತಲೇ ಮತ್ತೆ ಚೆನ್ನೈ ಕಿಂಗ್ಸ್‍ನ ಸ್ಥಿತಿ ಶೋಚನೀಯವಾಯಿತು. ನೆಹ್ರಾ ಎಸೆದ ಇನಿಂಗ್ಸ್‍ನ 17ನೇ ಓವರಿನಲ್ಲಿ ಫೋಲಾರ್ಡ್ ಅವರು ಮೂರು ಸಿಕ್ಸರ್ ಮತ್ತು 1 ಬೌಂಡರಿ ಸಿಡಿಸಿ ಅಪಾಯಕಾರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಫೋಲಾರ್ಡ್ ಮತ್ತು ರಾಯುಡು ತಮ್ಮ ಜೊತೆಯಾಟದಲ್ಲಿ ಕೇವಲ 40 ಎಸೆತಗಳಲ್ಲಿ 71 ರನ್ ಸಿಡಿಸುವುದರೊಂದಿಗೆ ತಂಡದ ಮೊತ್ತ ದ್ವಿಶತಕದ ಗಡಿ ತಲುಪುವುದನ್ನು ಖಚಿತಪಡಿಸಿದರು. ಅಂತಿಮವಾಗಿ ಫೋಲಾರ್ಡ್ 18 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸೇರಿದಂತೆ 36 ರನ್‍ಗಳಿಸಿ ಪೆವಿಲಿಯನ್‍ಗೆ ಮರಳಿದರೆ, ರಾಯುಡು 24 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 36 ರನ್ ಗಳಿಸಿ ಅಜೇಯರಾಗುಳಿದರು.
ಚೆನ್ನೈ ಪರ 7 ಬೌಲರ್‍ಗಳು ದಾಳಿ ನಡೆಸಿದರು. ಆದರೆ, ಪ್ರತಿಯೊಬ್ಬರೂ ಶಿಕ್ಷೆಗೊಳಗಾದರು. ಡ್ವೈನ್ ಬ್ರಾವೊ 36 ರನ್ ನೀಡಿ 2 ವಿಕೆಟ್ ಪಡೆದಿದ್ದು, ಕೊಂಚ ಉತ್ತಮ ಸಾಧನೆ ಎನಿಸಿತು. ಚೆನ್ನೈ ಫೀಲ್ಡಿಂಗ್ ಕಳಪೆಯಾಗಿತ್ತು. ಎರಡು ಸುಲಭ ಕ್ಯಾಚ್ ಬಿಟ್ಟಿದ್ದು ದುಬಾರಿಯಾಯಿತು.
ಸ್ಕೋರ್
ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 5 ವಿಕೆಟ್‍ಗೆ 202
ಸಿಮನ್ಸ್ ಬಿ ಸ್ಮಿತ್ 68, ಪಾರ್ಥಿವ್ ರನೌಟ್ 0, ರೋಹಿತ್ ಸಿ ಜಡೇಜಾ ಬಿ ಬ್ರಾವೊ 50, ಫೊಲಾರ್ಡ್ ಸಿ ರೈನಾ ಬಿ ಮೋಹಿತ್
36, ರಾಯುಡು ಅಜೇಯ 36, ಹಾರ್ದಿಕ್ ಸಿ ರೈನಾ ಬಿ ಬ್ರಾವೊ 0, ಹರ್ಭಜನ್ ಅಜೇಯ 6. ಇತರೆ: (ಬೈ-1, ಲೆಗ್‍ಬೈ-4,ನೋಬಾಲ್-1) 6.
ವಿಕೆಟ್ ಪತನ: 1-1, 2-120, 3-120, 4-191, 5-191.
ಬೌಲಿಂಗ್ ವಿವರ: ನೆಹ್ರಾ 4-0-41-0, ಮೋಹಿತ್ 4-0-38-1, ಅಶ್ವಿನ್ 2-0-21-0, ಜಡೇಜಾ 2-0-26-0,ನೇಗಿ 2-0-18-0, ಬ್ರಾವೊ 4-0-36-2, ಸ್ಮಿತ್ 2-0-17-1.
ಚೆನ್ನೈ ಸೂಪರ್ ಕಿಂಗ್ಸ್ 20 ಓವರುಗಳಲ್ಲಿ 8 ವಿಕೆಟ್‍ಗೆ 161
ಡ್ವೈನ್ ಸ್ಮಿತ್ ಎಲ್‍ಬಿ ಬಿ ಹರ್ಭಜನ್ 57, ಮೈಕ್ ಹಸ್ಸಿ ಸಿ ಸುಚಿತ್
ಬಿ ಮೆಕ್ಲೆನ್‍ಘನ್ 4, ರೈನಾ ಸ್ಟಂಪ್ ಪಟೇಲ್ ಬಿ ಹರ್ಭಜನ್ 28,
ಧೋನಿ ಬಿ ಮಾಲಿಂಗ 18, ಡ್ವೈನ್ ಬ್ರಾವೊ ಸಿ ಸಿಮನ್ಸ್ ಬಿ
ಮೆಕ್ಲೆನ್‍ಘಾನ್ 9, ಪವನ್ ನೇಗಿ ಸಿ ಪಾಂಡ್ಯ ಬಿ ಮಾಲಿಂಗ 3,
ಪ್ಲೆಸಿಸ್ ಸಿ ಶರ್ಮಾ ಬಿ ವಿನಯ್ ಕುಮಾರ್ 1, ಜಡೇಜಾ ಅಜೇಯ 11, ಅಶ್ವಿನ್ ಸಿ ಸುಚಿತ್ ಬಿ ಮೆಕ್ಲೆನ್‍ಘನ್ 2, ಮೋಹಿತ್ ಅಜೇಯ 21. ಇತರೆ: (ಲೆಗ್‍ಬೈ-2, ವೈ-3,ನೋಬಾಲ್-2) 7.
ವಿಕೆಟ್ ಪತನ: 1-22, 2-88, 3-99, 4-108, 5-124,
6-125, 7-134, 8-137.
ಬೌಲಿಂಗ್ ವಿವರ: ಮಾಲಿಂಗ 4-0-25-2, ಮೆಕ್ಲೆನ್‍ಘನ್ 4-0-25-3, ವಿನಯ್ ಕುಮಾರ್ 4-0-39-1, ಪಾಂಡ್ಯ 4-0-36-0, ಹರ್ಭಜನ್ 4-0-34-2.
ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ