ಭಾರತ, ಆಸೀಸ್ ಹಾಕಿ ರೋಚಕ ಡ್ರಾ

ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಗೆಲುವು ಸಾಧಿಸಲು ಇನ್ನಿಲ್ಲದಂತೆ ನಡೆದ ಪೈಪೋಟಿಯು ಕೊನೆಗೆ ರೋಚಕ ಸಮಬಲದಾಟವಾಗಿ...
ಆಟದಲ್ಲಿ ನಿರತರಾಗಿರುವ ವಿ.ಆರ್. ರಘುನಾಥ್
ಆಟದಲ್ಲಿ ನಿರತರಾಗಿರುವ ವಿ.ಆರ್. ರಘುನಾಥ್
Updated on: 

ಚಂಡೀಗಢ: ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಗೆಲುವು ಸಾಧಿಸಲು     ಇನ್ನಿಲ್ಲದಂತೆ ನಡೆದ ಪೈಪೋಟಿಯು ಕೊನೆಗೆ ರೋಚಕ ಸಮಬಲದಾಟವಾಗಿ ಪರಿಸಮಾಪ್ತಿ  ಕಂಡಿತು.

ಪಂದ್ಯದ ಕೊನೆಯ ನಿಮಿಷಗಳ ಅಂತರದಲ್ಲಿ ಮಿಂಚು ಹರಿಸಿದ ಆಸ್ಟ್ರೇಲಿಯಾ, ಆತಿಥೇಯ  ಭಾರತ ವಿರುದ್ಧ ಸೋಲು ತಪ್ಪಿಸಿಕೊಂಡರೆ, ಇದೇ ಸಂದಿಗ್ಧ ಸಂದರ್ಭದಲ್ಲಿ ಎದುರಾಗಬಹುದಾದ ಸೋಲನ್ನು ಸರ್ದಾರ್ ಸಿಂಗ್ ಪಡೆ ಕೂಡ ತಪ್ಪಿಸಿಕೊಂಡು ನಿಡುಸುಯ್ದಿತು. ಮುಂದಿನ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನೂ ಒಳಗೊಂಡಂತೆ  ಸದ್ಯದಲ್ಲೇ ಶುರುವಾಗಲಿರುವ ವಿಶ್ವ ಹಾಕಿ ಲೀಗ್  ಫೈನಲ್‍ಗಾಗಿ ಪೂರ್ವಭಾವಿಯಾಗಿ ನಡೆಯುತ್ತಿರುವ ಮೂರು ಟೆಸ್ಟ್ ಪಂದ್ಯ ಸರಣಿಯ ಮೊದಲ ಪಂದ್ಯವು 2-2 ಗೋಲುಗಳಿಂದ  ಡ್ರಾ ಕಂಡಿತು .ಪ್ರಥಮಾರ್ಧದಲ್ಲಿಯೇ 2-1 ಮುನ್ನಡೆ  ಸಾಧಿಸಿದ ಹೊರತಾಗಿಯೂ ಭಾರತ ಗೆಲುವು ಸಾಧಿಸುವಲ್ಲಿ ವಿಫಲವಾಯಿತು.

ದ್ವಿತೀಯಾರ್ಧದ ಕೊನೇ ಕ್ಷಣಗಳಲ್ಲಿ ಕೊಂಚ ಎಚ್ಚರ  ತಪ್ಪಿದ ಸರ್ದಾರ್  ಸಿಂಗ್ ಪಡೆ ಟೂರ್ನಿಯಲ್ಲಿ ಶುಭಾರಂಭ ಮಾಡಬಹುದಾಗಿದ್ದ ಅವಕಾಶದಿಂದ ವಂಚಿತವಾಯಿತು. ಅಂದಹಾಗೆ  ಭಾರತದ ಪರ ಕರ್ನಾಟಕದ ವಿ.ಆರ್. ರಘುನಾಥ್ (28, 43ನೇ ನಿಮಿಷದಲ್ಲಿ) ಎರಡು ಗೋಲು ಬಾರಿಸಿದರೆ, ಆಸ್ಟ್ರೇಲಿಯಾ ಪರ ಡಿಲಾನ್ ವರ್ತರ್‍ಸ್ಪೂನ್ 9ನೇ  ನಿಮಿಷದಲ್ಲಿ ಮತ್ತು ಕ್ರಿಸ್ ರೆಲೊ 58ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ಹೊಡೆದರು. ಇಲ್ಲಿನ ರಾಜ್‍ನಾನ್‍ಗೋನ್‍ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಶ್ವದ ನಂ.1  ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಅವಕಾಶವನ್ನು ಕೊನೆ ಕೊನೆಗೆ ವಿಶ್ವದ ಆರನೇ ಶ್ರೇಯಾಂಕಿತ ಭಾರತ ಕೈಚೆಲ್ಲಿತು.

ಆರಂಭದಿಂದಲೇ ಆಕ್ರಮಣಕಾರಿ ಹೋರಾಟಕ್ಕಿಳಿದ ಭಾರತ, ಆಸ್ಟ್ರೇಲಿಯಾ ಆಟಗಾರರನ್ನು  ವಂಚಿಸುತ್ತಾ, ಗೋಲಿಗಾಗಿ ನಿರಂತರ ದಾಳಿ ನಡೆಸಿತು. ಇದರ ಪರಿಣಾಮವಾಗಿ ಮೂರು  ಮತ್ತು ನಾಲ್ಕನೇ ಕ್ವಾರ್ಟರ್‍ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತ, 47 ಹಾಗೂ 48ನೇ  ನಿಮಿಷದಲ್ಲಿ ಎರಡು ಪೆನಾಲ್ಟಿ ಗೋಲುಗಳ ಅವಕಾಶವನ್ನೂ ಪಡೆಯಿತು. ಆದರೆ,  ದುರದೃಷ್ಟವಶಾತ್ ರೂಪೀಂದರ್ ಸಿಂಗ್ ಪಾಲ್ ಈ ಅವಕಾಶವನ್ನು ಗೋಲಾಗಿ  ಪರಿವರ್ತಿಸುವಲ್ಲಿ ವಿಫಲರಾದರು. ವಾಸ್ತವವಾಗಿ ಆಸ್ಟ್ರೇಲಿಯಾ ಮೊದಲು ಗೋಲು ದಾಖಲಿಸಿತಾದರೂ, ಭಾರತ ತ್ವರಿತಗತಿಯಲ್ಲಿ ತಿರುಗೇಟು ನೀಡಿದ್ದರಿಂದ ಅದು ಒಂದು  ಹಂತದಲ್ಲಿ ಒತ್ತಡಕ್ಕೆ ಸಿಲುಕಿತು. ಆದಾಗ್ಯೂ ಪಂದ್ಯ ಮುಗಿಯಲು ಕೇವಲ ಐದು ನಿಮಿಷಗಳು ಬಾಕಿ ಇದೆ ಎನ್ನುವಾಗ ಆಸೀಸ್ ಮೇಲುಗೈ ಸಾಧಿಸಿತು.ಇದರ ಮಧ್ಯೆಯೂ ಸಿಕ್ಕ ಪೆನಾಲ್ಟಿ  ಅವಕಾಶವನ್ನು ಆಸ್ಟ್ರೇಲಿಯಾದ ಮ್ಯಾಟ್ ಡಾಸನ್ ಕೈಚೆಲ್ಲಿದ್ದು ಕ್ರೀಡಾಂಗಣದಲ್ಲಿ  ನೆರೆದಿದ್ದ  ತವರಿನ ಅಭಿಮಾನಿಗಳನ್ನು ಹುಚ್ಚಿಗೆಬ್ಬಿಸಿತು.  ಆದರೆ , ಆ ಬಳಿಕ ಕ್ರಿಸ್ ಸಿರೆಲೊ ಬಾರಿಸಿದ  ಗೋಲು ಭಾರತದ ಗೆಲುವಿನ ಆಸೆಯನ್ನು ಹೊಸಕಿಹಾಕಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com