ಟೀಕೆ ಮಾಡುತ್ತಿರುವ 'ಸಲ್ಮಾನ್ ಫ್ಯಾನ್'ಗಳಿಗೆ ಯೋಗೇಶ್ವರ್ ತಿರುಗೇಟು

ರಿಯೋ ಒಲಿಂಪಿಕ್ಸ್ 2016ರಲ್ಲಿ ಸೋಲು ಹಿನ್ನೆಲೆಯಲ್ಲಿ ನಟ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಂದ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದ ಕುಸ್ತಿ ಪಟು ಯೋಗೇಶ್ವರ್ ದತ್ ...
ನಟ ಸಲ್ಮಾನ್ ಖಾನ್ ಹಾಗೂ ಕುಸ್ತಿ ಪಟು ಯೋಗೇಶ್ವರ್ ದತ್ (ಸಂಗ್ರಹ ಚಿತ್ರ)
ನಟ ಸಲ್ಮಾನ್ ಖಾನ್ ಹಾಗೂ ಕುಸ್ತಿ ಪಟು ಯೋಗೇಶ್ವರ್ ದತ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ರಿಯೋ ಒಲಿಂಪಿಕ್ಸ್ 2016ರಲ್ಲಿ ಸೋಲು ಹಿನ್ನೆಲೆಯಲ್ಲಿ ನಟ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಂದ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದ ಕುಸ್ತಿ ಪಟು ಯೋಗೇಶ್ವರ್ ದತ್ ಅವರು ಬುಧವಾರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಭಾರತೀಯ ಒಲಿಂಪಿಕ್ ಫೆಡರೇಷನ್ ರಾಯಭಾರಿಯಾಗಿ ನೇಮಕಗೊಂಡಾಗ ಯೋಗೇಶ್ವರ್ ದತ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಲ್ಮಾನ್ ಅವರಿಗೆ ಕ್ರೀಡೆಯ ಬಗ್ಗೆ ಅರಿವಿಲ್ಲ. ತಮ್ಮ ಚಿತ್ರಗಳ ಪ್ರಚಾರಕ್ಕೆ ಈ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಾರೆ. ಇಂತಹರಿಗೆ ಒಲಿಂಪಿಕ್ಸ್ ನಲ್ಲಿ ಜಾಗವಿಲ್ಲ ಎಂದು ಹೇಳಿದ್ದರು. ಈ ಪ್ರತಿಕ್ರಿಯೆಗೆ ಸಲ್ಮಾನ್ ಅಭಿಮಾನಿಗಳಿಂದ ಸಾಕಷ್ಟು ವಿರೋಧಗಳು ಹಾಗೂ ಟೀಕೆಗಳು ವ್ಯಕ್ತವಾಗಿದ್ದವು.

2012ರಲ್ಲಿ ಲಂಡನ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಯೋಗೇಶ್ವರ್ ದತ್ ಅವರು ಕಂಚು ಪದಕವನ್ನು ಗೆದ್ದಿದ್ದರು. ಇದರಂತೆ ಈ ವರ್ಷ ನಡೆಯಲಿರುವ ಒಲಿಂಪಿಕ್ಸ್ ನಲ್ಲಿಯೂ ಯೋಗೇಶ್ವರ್ ಪದಕ ಗೆದ್ದು ಭಾರತಕ್ಕೆ ಬರುತ್ತಾರೆಂಬ ಸಾಕಷ್ಟು ನಿರೀಕ್ಷೆ ಎಲ್ಲರಲ್ಲಿಯೂ ಮೂಡಿತ್ತು. ಆದರೆ, ಯೋಗೇಶ್ವರ್ ದತ್ ಅವರು ಈ ನಿರೀಕ್ಷೆಯನ್ನು ಹುಸಿಯಾಗಿಸಿದ್ದರು. ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಇದರಂತೆ ಒಲಿಂಪಿಕ್ಸ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ಯೋಗೇಶ್ವರ್ ಅವರ ವಿರುದ್ಧ ಸಲ್ಮಾನ್ ಅವರ ಅಭಿಮಾನಿಗಳು ತಿರುಗಿಬಿದ್ದು, ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಟೀಕೆಗಳಿಗೆ ತೀವ್ರವಾಗಿ ಕೆಂಡಾಮಂಡಲವಾಗಿರುವ ಯೋಗೇಶ್ವರ್ ಅವರು ಇದೀಗ ಸಲ್ಮಾನ್ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದು, ವಿಡಿಯೋ ಮೂಲಕ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ಪದಕ ಗೆಲ್ಲದಿದ್ದಕ್ಕೆ ಎಲ್ಲರ ಬಳಿ ಕ್ಷಣೆಯಾಚಿಸುತ್ತೇನೆ. ಸಾಕಷ್ಟು ಮಂದಿ ನನಗೆ ಸಂದೇಶ ಕಳುಹಿಸುತ್ತಿದ್ದಾರೆ. ಪದಕ ಗೆಲ್ಲದಿದ್ದಕ್ಕೆ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ವರೆಗೂ ದೇಶಕ್ಕಾಗಿ ಹೋರಾಡಿದ್ದೇನೆ. ಸೋಲು, ಗೆಲವು ಎರಡನ್ನೂ ಕಂಡಿದ್ದೇನೆ. ನನ್ನ ಪ್ರದರ್ಶನದಿಂದ ಯಾರೂ ನೋವು ಪಡಬೇಡಿ, ದುಃಖ ಪಡಬೇಡಿ. ಮತ್ತೆ ದೇಶಕ್ಕಾಗಿ ಹೋರಾಡುತ್ತೇನೆ, ಗೆಲ್ಲಲು ಪ್ರಯತ್ನ ನಡೆಸುತ್ತೇನೆ.

ನನ್ನ ವಿರುದ್ಧ ಟೀಕೆ ಮಾಡುವವರು ಮಾಡುತ್ತಲಿರಲಿ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಭಾರತದಲ್ಲಿರುವ ಪ್ರತೀ ನಾಯಿಗೂ ಬೊಗಳುವ ಹಕ್ಕಿದೆ. ನಾಯಿಗಳು ಬೊಗಳಲಿ ಬಿಡಿ. ನನ್ನ ಶುಭ ಚಿಂತರಿಗೆ ನಾನು ಕ್ಷಮೆಯಾಚಿಸುತ್ತೇನೆ. ನಾಲ್ಕು ವರ್ಷದಿಂದಲೂ ಒಲಿಂಪಿಕ್ಸ್ ಗಾಗಿ ಶ್ರಮ ಪಟ್ಟಿದ್ದೇನೆ. ಆದರೆ, ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದಿನ ಒಲಿಂಪಿಕ್ಸ್ ನಲ್ಲಿ ಉತ್ತಮವಾಗಿ ಆಡುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com