

ಈ ಸಿಟಿ ಟ್ರಾಫಿಕ್ನಲ್ಲಿ ಒದ್ದಾಡಿಕೊಂಡು ಬಂದು ಕಚೇರಿ ಸೇರುವುದೇ ದೊಡ್ಡ ಸಾಹಸ. ಉಸ್ಸಪ್ಪಾ..ಎಂದು ಕುರ್ಚಿಯಲ್ಲಿ ಕುಳಿತಾಗಲೇ ಟೇಬಲ್ ಮೇಲಿದ್ದ ಪತ್ರ ನನ್ನ ಕಣ್ಣಿಗೆ ಬಿದ್ದದ್ದು. ಈ ಇಲೆಕ್ಟ್ರಾನಿಕ್ ಯುಗದಲ್ಲಿ ನೀಲಿ ಬಣ್ಣದ ಇನ್ಲ್ಯಾಂಡ್ ಪತ್ರ ಬರೆವವರು ಇನ್ಯಾರಿದ್ದಾರೆ?
ಪತ್ರ ಕೈಗಿತ್ತಿಕೊಂಡೆ. ಅದೇ ಮುದ್ದು ಮುದ್ದಾದ ಅಕ್ಷರಗಳು. ಆ ಅಕ್ಷರಗಳ ಸಾಲಲ್ಲಿ ಕಣ್ಣಾಡಿಸುತ್ತಿದ್ದಂತೆ ಕಣ್ಣಂಚಿನಲ್ಲಿ ನೀರು ಜಿನುಗಿತು. ಅಮ್ಮ ಬರೆಯುವ ಪತ್ರವೇ ಹಾಗಿರುತ್ತದೆ. ಅವಳಿಗೆ ಏನು ಹೇಳಬೇಕೋ ಅದೆನ್ನೆಲ್ಲಾ ಪತ್ರದಲ್ಲಿ ಬರೆಯದಿದ್ದರೆ ಆಕೆಗೆ ನೆಮ್ಮದಿಯೇ ಇಲ್ಲ. ಇದನ್ನೆಲ್ಲಾ ಈಗಾಗಲೇ ಫೋನಲ್ಲಿ ಹೇಳಿದ್ದೀಯಲ್ಲಾ , ಮತ್ಯಾಕೆ ಪತ್ರ ಬರೀತೀಯ ಎಂದು ಕೇಳಿದರೆ, ಪತ್ರ ಬರೆಯುವಾಗ ಸಿಗುವ ಖುಷಿ ಫೋನಲ್ಲಿ ಸಿಗಲ್ಲ ಅಂತಾಳೆ. ನಾನು ಈ ಲೋಕ ಬಿಟ್ಟು ಹೋದರೂ, ನನ್ನ ಪತ್ರಗಳು ನಿನ್ನ ಜತೆಗಿರುತ್ತವೆ ಎಂದು ಹೇಳಿ ನನ್ನ ಬಾಯ್ಮುಚ್ಚಿಸುತ್ತಿದ್ದಳು.
ಮೊನ್ನೆ ಮೊನ್ನೆ ಮುಗಿದ ಊರ ಜಾತ್ರೆಯ ಬಗ್ಗೆ, ಕಾಣೆಯಾದ ಗೌರಿ ಹಸುವಿನ ಬಗ್ಗೆ, ಈಗಷ್ಟೇ ಫಲ ಬಿಟ್ಟ ತೋಡಿನ ಬದಿಯಲ್ಲಿರುವ ಹಲಸಿನ ಮರದ ಬಗ್ಗೆ, ಮಾವನ ಮನೆಯಿಂದ ತಂದ ಮೊಂಡು ಬಾಲದ ನಾಯಿ ಪಿಂಕಿ ಬಗ್ಗೆ.. ಇಷ್ಟೇ ಅಲ್ಲ, ಬಸ್ಸ್ಟಾಪ್ ಪಕ್ಕವಿರುವ ಸರೋಜಕ್ಕನ ಮಗಳು ದೊಡ್ಡೋಳಾಗಿದ್ದಾಳೆ, ಮೀನು ಮಾರುವ ಮೊಮ್ಮದ್ ಬ್ಯಾರಿ ಮಗ ಗಲ್ಘ್ನಿಂದ ಬಂದಿದ್ದಾನಂತೆ, ಇನ್ಯಾರೋ ಪ್ರೇಮಿಗಳು ಓಡಿಹೋದದ್ದು..ಹೀಗೆ ಅಮ್ಮನ ಪತ್ರವೆಂದರೆ ನಮ್ಮೂರ ಸಂಜೆ ದೈನಿಕದ ವರದಿಯನ್ನೂ ಮೀರಿಸುವಂತಿರುತ್ತಿತ್ತು. ಊರಲ್ಲಿರುವ ಅಮ್ಮನಿಗೆ ಪತ್ರದಲ್ಲಿ ಹೇಳೋಕೆ ಎಷ್ಟೊಂದು ವಿಷಯಗಳು!. ಅಪ್ಪ ಬಿಟ್ಟು ಹೋದ ನಂತರ ಈ ಎಲ್ಲ ವಿಷ್ಯಗಳನ್ನು ಹಂಚಿಕೊಳ್ಳಲು ಅವಳಿಗೆ ಬೇರೆ ಯಾರೂ ಇಲ್ಲವಲ್ಲಾ..
ನೀನು ಒಬ್ಬಳೇ ಇಲ್ಲಿರಬೇಡ, ನನ್ನ ಜತೆ ಬಂದ್ಬಿಡು ಎಂದು ಹೇಳಿದರೆ ಅವಳು ಸುತರಾಂ ಒಪ್ಪಲ್ಲ. ನಾನು ಈ ಹಳ್ಳಿ ಬಿಟ್ಟು ಬೆಂಗ್ಳೂರಿಗೆ ಬಂದ್ಬಿಟ್ಟರೆ ನನ್ನ ದನಕರುಗಳನ್ನು ನೋಡುವವರು ಯಾರು? ಅವು ಮೂಕ ಜೀವಿಗಳು, ಅವುಗಳನ್ನು ಬಿಟ್ಟು ಬರುವುದೇ? ಹಚ್ಚ ಹಸುರಾದ ನಮ್ಮ ಈ ತೋಟ, ಈ ಪಾಪದ ಪ್ರಾಣಿಗಳನ್ನು ಬಿಟ್ಟು ಬಂದ್ರೆ...ಆಕೆ ಹೇಳಬೇಕಾಗಿರುವುದು ಇನ್ನೂ ಇದೆ.
ಅಯ್ಯೋ ಪತ್ರವನ್ನೋದಿ ಸಮಯ ಕಳೆದದ್ದೇ ಗೊತ್ತಾಗಿಲ್ಲ...
ಪತ್ರವನ್ನು ಡ್ರಾಯರ್ನಲ್ಲಿಟ್ಟು ಲ್ಯಾಪ್ಟಾಪ್ ಆನ್ ಮಾಡಿದೆ. ಆವಾಗಲೇ ಫೋನ್ ರಿಂಗಾಯ್ತು. ಫೋನಲ್ಲಿ Amma calling... ಡಿಸ್ಪ್ಲೇ ಆಗುತ್ತಿತ್ತು.
ಯಾವತ್ತೂ ಅಮ್ಮ ನನಗೆ ಕಾಲ್ ಮಾಡಿದವರೇ ಅಲ್ಲ.. ಅದೂ ಈ ಹೊತ್ತಲ್ಲಿ?
ಕಾಲ್ ರಿಸೀವ್ ಮಾಡಿದೆ.
ಅತ್ತಲಿಂದ ಗಂಡಸಿನ ಧ್ವನಿ. "ಸಚ್ಚಿ.. ಬೇಗ ಹೊರಟು ಬಾ... ಅಮ್ಮನಿಗೆ ಸ್ವಲ್ಪ ಹುಷಾರಿಲ್ಲ..ನಿನ್ನನ್ನು ನೋಡಬೇಕಂತೆ".
ನನಗೆ ತಲೆ ತಿರುಗಿದಂತಾಯಿತು. ಬಾಸ್ಗೊಂದು ಇಮೇಲ್ ಕಳಿಸಿ ಟ್ಯಾಕ್ಸಿ ಹಿಡಿದು ಹೊರಟೆ. ಮನಸ್ಸಿನಲ್ಲಿ ತಳಮಳ, ಆಕೆಗೆ ಏನೂ ಆಗದಿರಲಿ ದೇವರೇ ಎಂಬ ಉದ್ಗಾರ. ಹಿಂದಿನ ಸೀಟಲ್ಲಿ ಕುಳಿತೇ ಅಡೂರು, ಮಧೂರು, ಕಾವು, ಕಣ್ಯಾರ ಎಲ್ಲ ದೇವರಿಗೆ ಮೊರೆ ಹೋದೆ. ಛೇ... ನಾನ್ಯಾಕೆ ಹೀಗೆಲ್ಲಾ ಯೋಚಿಸಬೇಕು? ಮೊನ್ನೆಯಷ್ಟೇ ಅವಳು ಪತ್ರ ಬರೆದು ಚೆನ್ನಾಗಿದ್ದೇನೆ ಎಂದು ಹೇಳಿದ್ದಳಲ್ವಾ? ಅವಳಿಗೇನೂ ಆಗಿಲ್ಲ ಎಂದು ಸ್ವತಃ ಸಮಾಧಾನಪಡಿಸಿಕೊಂಡೆ. ಒಮ್ಮೆ ಫೋನ್ ಮಾಡಿ ವಿಚಾರಿಸೋಣ ಎಂದರೆ ಹಾಳಾದ ನೆಟ್ವರ್ಕ್ ಕೂಡಾ ಕೈ ಕೊಟ್ಟಿತ್ತು. ಅಮ್ಮನ ನೆನಪಲ್ಲಿ ಹಸಿವು ಬಾಯಾರಿಕೆ ಯಾವುದೂ ಅನುಭವಕ್ಕೆ ಬರಲೇ ಇಲ್ಲ.
ಊರು ತಲುಪಿದಾಗ ಸಂಜೆ 6 ಗಂಟೆ. ಅಂಗಳದಲ್ಲಿ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿದ್ದರು. ಭಯದಿಂದಲೇ ಮನೆಯೊಳಗೆ ಕಾಲಿಟ್ಟೆ. ಬಿಳಿ ಬಟ್ಟೆ ಹೊದ್ದು ಅಮ್ಮ ಮಲಗಿದ್ದಳು.
"ಇವತ್ತು ಬೆಳಗ್ಗೆ...ಅಮ್ಮ..."ಪಕ್ಕದ ಮನೆಯ ಹುಡುಗ ಅಳುತ್ತಾ ಏನೋ ಹೇಳಿದ.
ಅಂಗಳದಲ್ಲಿ ಗೂಟಕ್ಕೆ ಕಟ್ಟಿದ್ದ ನಾಯಿ ಜೋರಾಗಿ ಬೊಗಳುತ್ತಿದ್ದರೆ ಕೊಟ್ಟಿಗೆಯಲ್ಲಿದ್ದ ಹಸುಗಳು ಹಿಂದೆ ಮುಂದೆ ಚಲಿಸಿ ಗೊರಸಿನಿಂದ ಶಬ್ದವನ್ನುಂಟು ಮಾಡುತ್ತಿದ್ದವು.
ಒತ್ತರಿಸಿ ಬರುವ ದುಃಖ ಕಣ್ಣೀರಾದಾಗ ಆ ಮೂಕ ಪ್ರಾಣಿಗಳತ್ತ ನೋಡಿದೆ. ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದ ಅವು ಏನೋ ಹೇಳಬೇಕೆಂಬಂತಿದ್ದವು. ಅಮ್ಮನ ಅನುಪಸ್ಥಿತಿಯಲ್ಲಿ ಅವುಗಳು ಮಾತನಾಡಿದವು, ನಾನು ಮೂಕನಾದೆ.
- ಸಚಿನ್