ಯಶಸ್ಸು ನಿನ್ನ ಅಂಗಾಲು ನೆಕ್ಕಬೇಕೆಂದರೆ...
ಬದುಕಿನ ಉತ್ಸವವೇ...ಅಂದಗೆಟ್ಟ ಬದುಕನ್ನು ಒಪ್ಪ ಓರಣವಾಗಿ ಸಿಂಗರಿಸಿ, ಚೆಂದದೊಂದು ರಂಗೋಲಿ ಬಿಡಿಸಿ, ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಮೆಲ್ಲನೆ ...

ಬದುಕಿನ ಉತ್ಸವವೇ...
ಅಂದಗೆಟ್ಟ ಬದುಕನ್ನು ಒಪ್ಪ ಓರಣವಾಗಿ ಸಿಂಗರಿಸಿ, ಚೆಂದದೊಂದು ರಂಗೋಲಿ ಬಿಡಿಸಿ, ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಮೆಲ್ಲನೆ ಬದುಕಿನೊಂದಿಗೆ ಕಾಲಿಟ್ಟವಳು ನೀನು. ಅಲ್ಲಿಯವರೆಗೂ ಮುನಿದು ಮೂಲೆಯಲ್ಲಿ ಕುಳಿತಿದ್ದ ಬದುಕು ಖುಷಿಯಿಂದ ಮೈಕೊಡವಿಕೊಂಡು ದೊಡ್ಡ ನಗೆ ನಗುತ್ತಾ ಮೇಲೆದ್ದಿತು. ಗುಳೆ ಹೋಗಿದ್ದ ಆಸೆ- ಕನಸುಗಳೆಲ್ಲ ಇಷ್ಟಗಲ ಕಣ್ಣರಳಿಸಿ ಮೆತ್ತಗೆ ಬಂದು ಮುತ್ತಿಟ್ಟವು. ಬದುಕೊಂದು ಹರುಷದಿಂದ ನಡೆದ ಉತ್ಸವದಂತೆ ಕಂಗೊಳಿಸಲು ಪ್ರಾರಂಭಿಸಿತು.
ಎದೆಯ ಬರಡು ನೆಲದಲ್ಲೀಗ ಹಾಡು ಹಕ್ಕಿಯ ಕಲರವ.
ಅದೊಂದು ಕಾಲವಿತ್ತು. ಹೆಜ್ಜೆಯಿಟ್ಟಲ್ಲೆಲ್ಲಾ ಸೋಲುಗಳು ಕಾಲಿಗೆ ತೊಡರಿಕೊಳ್ಳುತ್ತಿದ್ದವು. ಕಣ್ಣ ನಿರೀಕ್ಷೆಗಳೆಲ್ಲ ಒಳಗೊಳಗೆ ಇಂಗಿಹೋಗಿ, ಹತಾಶೆಯ ಛಾಯೆ ಕವಿದು ಮುನ್ನುಗ್ಗಲು ಆಗದ ನಿರಾಶೆ. ಗೆಳೆಯರೆಲ್ಲ ಅರ್ಧ ದಾರಿಯಲ್ಲಿ ಬಿಟ್ಟು ಕಾಲಿಗೆ ಬುದ್ದಿ ಹೇಳಿದ್ದರು. ಬಂಧುಗಳು ಅಕ್ಕ ಪಕ್ಕದಲ್ಲೂ ಸುಳಿಯುತ್ತಿರಲಿಲ್ಲ. ಪರಿಚಿತರು ಮುಖ ತಿರುಗಿಸಿತ್ತಿದ್ದರು. ಬದುಕನ್ನು ಕಟ್ಟಿಕೊಳ್ಳಲು ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ಪುಟ್ಟ ಪಾನ್ಶಾಪ್ ಹಾಕಿಕೊಂಡೆ. ಎಂದೆಂದೂ ಪಾನ್ಶಾಪ್ ನಡೆಸಿ ಗೊತ್ತಿಲ್ಲದ ನಾನು, ಎಲೆ ಮಡಚಿ ಪಾನ್ ಕಟ್ಟಿಕೊಡುವುದನ್ನು ರೂಢಿಸಿಕೊಂಡೆ. ಜೊತೆಜೊತೆಗೆ ಚುರುಮುರಿ ವ್ಯಾಪಾರ ಶುರುವಿಟ್ಟೆ. ಬದುಕನ್ನು ಹೇಗೆ ಎದುರಿಸಬೇಕೆಂದು ಗೊತ್ತಾಗಿ ಹೋಗಿತ್ತು. ಕೈಯಲ್ಲಿ ಸ್ವಲ್ಪ ದುಡ್ಡ ಆಡತೊಡಗಿತ್ತು. ಜೊತೆಗೆ ಆಡಿದ ಗೆಳೆಯರೆಲ್ಲ "ಚುರುಮುರಿ ಮಾರ್ತಾನಲೇ ಅಂವಾ" ಎಂದು ತಮಾಷೆ ಮಾಡಿದರೂ ಅವರತ್ತ ತಿರುಗಿಯೂ ನೋಡದೆ ವ್ಯಾಪಾರ ಶುರುವಿಟ್ಟುಕೊಂಡೆ. ಆಗ ಸ್ವಲ್ಪ ಬದುಕು ಕೈ ಹಿಡಿಯತೊಡಗಿತು ಎನ್ನಿಸತೊಡಗಿತು.
ಆದರೆ ವ್ಯಾಪಾರದಲ್ಲಿ ಎಲ್ಲವೂ ಶಾಶ್ವತವಲ್ಲ ಎಂಬ ಸತ್ಯ ನನಗರಿವಾದದ್ದು ಕೈ ಖಾಲಿಯಾದಾಗಲೇ. ಹರಸಾಹಸ ಮಾಡಿದರೂ ಬಿದ್ದ ಬದುಕನ್ನು ಮತ್ತೆ ಎದಂದು ನಿಲ್ಲಿಸಿಕೊಳ್ಳಲು ನನ್ನಿಂದಾಗಲಿಲ್ಲ. ಇನ್ನೇನು ಪಾಪಿ ಬದುಕಿಗೆ ಶರಣು ಹೊಡೆದು ಕಾಲನ ಕೈ ಹಿಡಿದು ಮೌನವಾಗಿ ಎದ್ದು ನಡೆದುಬಿಡೋಣ ಎಂದಾಗಲೇ ನಿನ್ನ ಪರಿಚಯವಾದದ್ದು. ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ದೊರೆತಂತೆ. ನಿನ್ನ ಸ್ನೇಹ ನನ್ನಲ್ಲಿನ ನಿರಾಶೆಯ ನೌಕೆಯನ್ನು ಬುಡಮೇಲು ಮಾಡಿತ್ತು. ನೀನು ತುಂಬುತ್ತಿದ್ದ ಆತ್ಮಸ್ಥೈರ್ಯ, ಪ್ರೋತ್ಸಾಹ, ಉತ್ಸಾಹ ನನ್ನಲ್ಲಿ ನೂರಾನೆಯ ಬಲ ತುಂಬಿತ್ತು.
ಮತ್ತೆ ಹಠಕ್ಕೆ ಬಿದ್ದವನಂತೆ ವ್ಯಾಪಾರದಲ್ಲಿ ಕುದುರಿಕೊಂಡೆ. ಭಾಗ್ಯಲಕ್ಷ್ಮಿ ಕೈ ಹಿಡಿದಳು. ನೀನು ಪದೇ ಪದೆ ಹೇಳುತ್ತಿದ್ದ ಮಾತುಗಳು ನನಗಿಂದಿಗೂ ನೆನಪಿದೆ. "ನಡೆಯುವವನು ಎಡವುವುದು, ಬೀಳುವುದು ಸಹಜ ಕಣೋ. ಹಾಗಂತ ಮೇಲೇಳಲಾರದೆ ವಿಧಿಯನ್ನು ಹಳಹಳಿಸುತ್ತಾ ಕುಳಿತರೆ ಏನೂ ಸಾಧಿಸೋಕಾಗಲ್ಲ. ಈ ಕ್ಷಣ ಎಂದಿಗೂ ಶಾಶ್ವತವಲ್ಲ. ದುಃಖವಿರಲಿ, ಖುಷಿಯಿರಲಿ ಎಲ್ಲವೂ ಕೊನೆಗೊಳ್ಳಲೇಬೇಕು. ಬದುಕನ್ನು ಬಂದಂತೆ ಎದುರಿಸುವುದನ್ನು ಕಲಿಯಬೇಕು ಕಣೋ. ಯಶಸ್ಸು ನಿನ್ನ ಕಾಲು ನೆಕ್ಕುತ್ತಿರುತ್ತದೆ. ಎಂದೆಂದಿಗೂ ನೆಗೆಟಿವ್ ಯೋಚನೆ ಮಾಡಬೇಡ' ಎಂದು ನೀನು ತುಂಬಿದ ಆತ್ಮವಿಶ್ವಾಸ ನನ್ನನ್ನು ತಲೆಯೆತ್ತಿ ತಿರುಗುವಂತೆ ಮಾಡಿವೆ. ನಿನ್ನ ಸ್ನೇಹಕ್ಕೆ ನಾನು ಋಣಿ.
ನಮ್ಮಿಬ್ಬರ ಸ್ನೇಹ ಪ್ರೀತಿಯಾಗಿ ಪರಿವರ್ತಿತವಾದರೆ, ನೀನು ನನ್ನ ಬಾಳ ಸಂಗಾತಿಯಾಗಿ ಬದುಕಿಡೀ ನನ್ನ ಜೊತೆ ಹೆಜ್ಜೆ ಹಾಕುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ಖುಷಿಯಾಗುತ್ತೆ ಕಣೇ. ಯಾವುದಕ್ಕೂ ಈ ಪತ್ರ ಓದಿದ ಕೂಡಲೇ ಉತ್ತರಿಸು. ನಿನ್ನ ಜೊತೆ ಬಾಳು ಹಂಚಿಕೊಳ್ಳುವ ಭಾಗ್ಯ ನನ್ನದಾಗಲಿ, ನಿನ್ನ ಒಪ್ಪಿಗೆಗೆ ಕಾಯುತ್ತಾ...
ನಿನ್ನವನು,
- ಜಿ ನಾಗೇಶ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


