

ಹೃದಯ ಎನ್ನುವುದು ಬೆಂಗಳೂರಿನ ತಿಪ್ಪೆಗುಂಡಿಯಾಗಿದೆ. ಅದರಲ್ಲಿ ಇರುವ ಯಾವ ನೆನಪುಗಳೂ ಪ್ರಯೋಜನವಿಲ್ಲ. ಅದನ್ನು ತೆಗೆದು ಸ್ವಚ್ಛ ಮಾಡಲು ಕಾಂಟ್ರ್ಯಾಕ್ಟ್ ಕೊಡತಿನಿ ಅಂದ್ರು ಯಾರೂ ಬರುತ್ತಿಲ್ಲ. ಹಾಳಾದ್ದು ಲೈಫೇ ಹೀಗೇ, ಕಣ್ಣಿಗೆ ಕಂಡಿದ್ದನ್ನೆಲ್ಲ ಬೇಡತೈತಿ, ಅದು ಸಿಗುವತನಕ ಬಿಡುವುದಿಲ್ಲ ಅಂತೈತಿ. ಇದು ಬಯಸುತ್ತಿರುವುದು ಯಾವುದೂ ತಿನ್ನುವ ವಸ್ತುವಲ್ಲ, ಪ್ರೀತಿ ಕೇಳಾಕತೈತಿ. ಅದರ ಹಿಂದೆ ಹೋದ ನಮ್ಮ ಬಾಳು ಹರಿದು ಹೋದ ಪ್ಯಾರಗಾನ ಚಪ್ಪಲಿಯಾಗೈತಿ. ಇದಕ್ಕ ಪ್ಲ್ಯಾಶ್‌ಬ್ಯಾಕ್ ಬೇರೆ ಕೇಡು.
ಬ್ಯಾಡಾ ಬ್ಯಾಡಾ ಅಂದ್ರು ಧಾರವಾಡಕ್ಕ ತಂದು ಕಾಲೇಜಿಗೆ ಸೇರಿಸಿದರು. ಅದನ್ನು ಹೇಗಾದರೂ ಮಾಡಿ ಸಹಿಸಿಕೊಳ್ಳಬಹುದಾಗಿತ್ತು. ಆದರೆ ಸೈನ್ಸ್‌ಗೆ ಹಚ್ಚಿದ್ದು ತಡೆದುಕೊಳ್ಳಲಾಗಲಿಲ್ಲ. ಯಾಕಂದ್ರೆ ನಾವು ಜಸ್ಟ್ ಪಾಸ್. ಬಿಟ್ಟು ಓಡಿ ಹೋಗುವಂಗೂ ಇರಲಿಲ್ಲ. ಬಿಲದೊಳಗೆ ಸಿಕ್ಕ ಇಲಿಯ ಪರಿಸ್ಥಿತಿಯಾಗಿತ್ತು. ಕಾಲೇಜಿಗೆ ಹೋದರೆ ಪಾಳುಬಿದ್ದ ಗೋದಾಮಿನಂತೆ ಇತ್ತು. ನಾ ಪಾಸಾಗಿರೂ ಲಕ್ಷಣಕ್ಕೆ ಅದು ಕರೆಕ್ಟ್ ಆಗಿತ್ತು. ಅಂತಹ ಬೃಹತ್ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ. ಪಂಡಿತರ ಸಂಖ್ಯೆ ಬರೊಬ್ಬರಿ ಆರು ಗಂಡು ಐಕಳು. ಒಂದು ಹೆಣ್ಣು ಸೊಳ್ಳೆಯೂ ಇರಲಿಲ್ಲ. ಆರ್ಟ್ಸ್ ವಿದ್ಯಾರ್ಥಿಗಳ ಮುಂದೆ ನಮ್ಮ ಧಿಮಾಕು ಜೋರು. ಕನ್ನಡ, ಇಂಗ್ಲಿಷ್ ಕ್ಲಾಸಿನಲ್ಲಿ ನಮ್ಮನ್ನು ಅನ್ಯಗ್ರಹದಿಂದ ಬಂದವರಂತೆ ನೋಡುತ್ತಿದ್ದವು. ಬಡ್ಡೆತವು. ನಿಜಕ್ಕೂ ನಮ್ಮ ಕಣ್ಣುಗಳು ತಂಪಾಗತ್ತಿದ್ದಿದ್ದು ಈ ಕ್ಲಾಸ್‌ಗಳಲ್ಲೇ. ಕಾರಣ ಚೆಂದುಳ್ಳೆ ಚಲುವೆಯರು. ಟೀಚರ್ ಹೇಳುವ ಪಾಠಕ್ಕಿಂತ ಅರೆಬರೆ ಕಾಣುವ ಮುಗುತಿ ಕನ್ಯೆಯರ ಮೂಸುಡಿಗಳ ಕಡೆಯೇ ಹೆಚ್ಚು ಲಕ್ಷ್ಯ. ಇಷ್ಟು ದಿನ ಹನುಮನ ಭಕ್ತನಾಗಿದ್ದ! ನಾನು, ರಾಮನ ಕಡೆ ಮುಖ ಮಾಡಿದೆ! ಆದ್ರೆ ನನ್ನ ಸೀತೆಯು ಕಾಣಿಸಲಿಲ್ಲ. ಹಂಗೂ ರಾಂಗೂ ಮಾಡಿ ವರ್ಷದ ವನವಾಸ ಮುಗಿಸಿ, ಎರಡನೆ ವರ್ಷಕ್ಕೆ ಕಾಲಿಟ್ಟೆ.
ಪ್ರಥಮ ವರ್ಷಕ್ಕೆ ಬಂದಂತಹ ಚೆಲುವೆಯರ ಗುಂಪಿನಲ್ಲಿ ನನ್ನನ್ನು ಸೆಳೆದವಳು ತುಟಿ ಕಚ್ಚಿ ನಗುವ ಪೋರಿ. ನೋಡಕ್ಕೆ ಲಕ್ಷಣವಾಗಿಯೂ ಇದ್ದಳು. ಕಡೆಗೂ ಸಿಕ್ಕಳು ಎಂದು ಒಳಗೊಳಗೆ ಮನಸ್ಸು ಕುಲುಕುಲು ನಗುತ್ತ, ಮೈಕೆಲ್ ಜಾಕ್ಸನ್ ತರ ಡಾನ್ಸ್ ಮಾಡುತ್ತಿತ್ತು. ಗೆಳೆಯರೊಂದಿಗೆ ನನ್ನವಳ ಗುಣಗಾನ ದಿನಾಲು ತಪ್ಪದೆ ನಡೆದಿತ್ತು. ಪ್ರತಿ ದಿನವು ಅವಳು ನನಗೆ ಹೊಸತನವನ್ನು ಕೊಡುತ್ತಿದ್ದಳು. ಗೆಳೆಯರ ಗುಂಪಿನಿಂದ ವಾರೆಗಣ್ಣಿನಿಂದ ನೋಡುವುದೆ ನನಗೆ ಹಬ್ಬವಾಗಿತ್ತು. ಕೆಲವು ಸಾರಿ ನನ್ನ ಕಾಲುಗಳು ನನ್ನ ಕ್ಲಾಸನ್ನು ಮರೆತು, ಅವಳ ಕ್ಲಾಸಿನ ಕಡೆ ಹೋಗುತ್ತಿತ್ತು. ಗುರುಗಳ ಕೆಂಗಣ್ಣು ಬೀಳುತ್ತಿದ್ದಂತೆ, ಇಡೀ ಅವರ ವಂಶವನ್ನೆಲ್ಲ ಬೈಯುತ್ತಾ ಹೊರಬರುತ್ತಿದ್ದೆ. ಹಾಗೂ ಹೀಗೂ ಮಾಡಿ ಅವಳ ಸ್ನೇಹ ಮಾಡಿದೆ. ನನ್ನದೆಯ ಗೂಡಲ್ಲಿ ಬಣ್ಣ ಬಣ್ಣದ ಕನಸುಗಳನ್ನು ತುಂಬಿಕೊಂಡೆ. ಆಸೆಗಳನ್ನು ಹೊತ್ತುಕೊಂಡೆ. ನನ್ನೆದೆಯ ಅರಮನೆಗೆ ಅವಳನ್ನು ರಾಣಿಯಾಗಿ (ಅವಳ ಒಪ್ಪಿಗೆ ಇಲ್ಲದೆ) ಮಾಡಿಕೊಂಡಿದ್ದೆ. ಅವಳನ್ನೇ ಮನ ಯಾವಾಗಲೂ ಬಯಸುತ್ತಿತ್ತು. ಅವಳ ಹತ್ತಿರ ಹೋಗಿ ನಾ ನಿನ್ನನ್ನು ಇಷ್ಟ ಪಡತಿದ್ದೀನಿ ಅಂತ ಹೇಳಬೇಕು ಅಂತ ಅದೆಷ್ಟು ಸಾರಿ ಪ್ರಯತ್ನ ಪಟ್ಟರೂ ಆಗುತ್ತಿರಲಿಲ್ಲ. ಮರೆತು ಬಿಡುವಂಗೂ ಇರಲಿಲ್ಲ. ಯಾಕಂದ್ರೆ, ಹುಚ್ಚು ಕೋಡಿ ಮನಸ್ಸು ಅವಳನ್ನು ಅಷ್ಟು ಹಚ್ಚಿಕೊಂಡು ಬಿಟ್ಟಿತ್ತು. ಒಂದು ವರ್ಷ ಹೇಗೆ ಕಳೆಯಿತೆಂದು ಗೊತ್ತಾಗಲಿಲ್ಲ. ವಾರ್ಷಿಕ ಸಮಾರಂಭದಲ್ಲಿ ಅವಳಿಗೆ ನಾನು ಪ್ರೀತಿಸುತ್ತಿರುವ ವಿಷಯವನ್ನು ಹೇಳಬೇಕೆಂದು ನಿರ್ಧರಿಸಿ ಹೊರಟೆ. ಮೊದಲೆ ಚಲುವೆಯಾಗಿದ್ದ ನನ್ನವಳು, ಅಂದು ತೊಟ್ಟಿದ್ದ ತಿಳಿನೀಲಿ ಸೀರೆಯಲ್ಲಿ ದೇವಲೋಕದ ಅಪ್ಸರೆಯರನ್ನು ಓವರ್‌ಟೇಕ್ ಮಾಡಿದ್ದಳು. ಆಗ ನನ್ನಲ್ಲಿ ಅವಳ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಾಯಿತು.
ಆ ಸದ್ದು ಗದ್ದಲ, ಕಿವಿಗಡಚಿಕ್ಕುವ ಸಂಗೀತ, ಬಂದಂತಹ ಮಹನಿಯರ ಗೀತೋಪದೇಶಗಳು ನನ್ನ ಕಿವಿಗೆ ಕೇಳಿಸುತ್ತಿಲ್ಲವೇನೋ ಎನ್ನುವ ರೀತಿಯಲ್ಲಿ ಅವಳನ್ನೇ ನೋಡುತ್ತಾ ಕುಳಿತೆ. ಪ್ರೀತಿಸುವ ವಿಷಯ ಹೇಳುವಲ್ಲಿ ಮತ್ತೆ ವಿಫಲನಾದೆ. ಅದಕ್ಕೆ ಏನು ಮಾಡಬೇಕೆಂದು ಚಿಂತಿಸುವಷ್ಟರಲ್ಲಿ ಫೆಬ್ರವರಿ ಹದಿನಾಲ್ಕು ಬಂದೇಬಿಟ್ಟಿತು. ಒಂದು ಗ್ರೀಟಿಂಗ್ ಕಾರ್ಡ್ ಮತ್ತು ಗುಲಾಬಿ ಹೂವನ್ನು ತೆಗೆದುಕೊಂಡು ಕಾಲೇಜಿಗೆ ಹೋದೆ. ಹೇಳದೆ ಉಳಿದಿದ್ದ ಪ್ರೀತಿಯ ಮಾತನ್ನು ಅವಳೆದರು ಹೇಳಿದೆ, ಏನೂ ಹೇಳದೆ ಹೋದಳು. ಅದಕ್ಕೆ ನಾ ಮೊದಲೆ ಹೇಳಿರುವುದು ನನ್ನ ಈ ದಿಲ್‌ನಲ್ಲಿ ನೆನಪುಗಳು ರಾಶಿ ರಾಶಿಯಾಗಿ ಬಿದ್ದು ತಿಪ್ಪೆಗುಂಡಿಯಾಗಿದೆ ಎಂದು. ಮತ್ತೆ ಫೆಬ್ರವರಿ ಹದಿನಾಲ್ಕು ಬಂದಿದೆ. ಈಗಲಾದರೂ ಬಂದು ಪ್ರೀತಿಯಿಂದ ಸ್ವಚ್ಛ ಮಾಡುವಳೆಂದು ಕಾಯಿತಾ ಇದೀನಿ....
- ನಾಕೇಶ ತಳವಾರ, ಧಾರವಾಡ.